ಬಳ್ಳಾರಿ ನಗರದಲ್ಲಿ 12 ಲಕ್ಷ ಮರ ನೆಡಲು ಸಂಕಲ್ಪ

ಬಳ್ಳಾರಿ:   ಬೇಸಿಗೆಯಲ್ಲಿ ಅತಿಯಾದ ತಾಪಮಾನದಿಂದ ಬಳ್ಳಾರಿ ನಗರ ವಾಸಿಗಳು ಪ್ರತಿ ವರ್ಷ ಸಮಸ್ಯೆ ಎದುರಿಸುತ್ತಿದ್ದಾರೆ. ನಗರದ ತಾಪಮಾನವನ್ನು ನಿಯಂತ್ರಿಸಲು ಹಸಿರೀಕರಣ ಮಾಡುವ ಉದ್ಧೇಶದಿಂದ ನಗರ ವ್ಯಾಪ್ತಿಯಲ್ಲಿ 12 ಲಕ್ಷ ಮರಗಳನ್ನು ನೆಡುವ ಯೋಜನೆ ಕುರಿತು ಕಾಂಗ್ರೆಸ್ ಮುಖಂಡ ನಾರಾ ಶರತ್ ರೆಡ್ಡಿ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಸೂಚನೆಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳಾದ ಸಂದೀಪ್ ಹಾಗೂ ರಾಘವೇಂದ್ರ ಅವರನ್ನು ಭೇಟಿ ಮಾಡಿದ ನಾರಾ ಶರತ್ ರೆಡ್ಡಿ ಅವರು ಈಗಾಗಲೇ ಶಾಸಕರು ಚುನಾವಣೆ ಪೂರ್ವ ಘೋಷಣೆ ಮಾಡಿದಂತೆ ಬಳ್ಳಾರಿ ಸಿಟಿ ಗ್ರೀನ್ ಅಂಡ್ ಕ್ಲೀನ್ ಯೋಜನೆ ಅಡಿ ನಗರದೆಲ್ಲೆಡೆ ಮರಗಳನ್ನು ನೆಡುವ ಬಗ್ಗೆ ನೀಲ ನಕ್ಷೆ ತಯಾರಿಸುವ ಕುರಿತು ಅಧಿಕಾರಿಗಳ ಸಲಹೆ ಪಡೆದರು.

 

ಇದೇ ತಿಂಗಳು 5ನೇ ತಾರೀಕು ವಿಶ್ವ ಪರಿಸರ ದಿನ ಇದ್ದು, ಆ ದಿನ ಈ ಯೋಜನೆಗೆ ಚಾಲನೆ ನೀಡುವ ಯೋಚನೆ ಇದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಅರಣ್ಯ ಸಂರಕ್ಷಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಗ್ರೀನ್ ಸಿಟಿ ಕಲ್ಪನೆಯನ್ನು ಸಾಕಾರಗೊಳಿಸುವ ಕುರಿತು ಚರ್ಚಿಸಿದರು. ಇದೊಂದು ಮಹತ್ವದ ಯೋಜನೆಯಾಗಿದ್ದು, ನೆರೆಯ ತೆಲಂಗಾಣ, ಮಹಾರಾಷ್ಟ್ರದ ಪುಣೆ, ಮುಂಬೈ ನಗರಗಳಲ್ಲಿ ಈಗಾಗಲೇ ಈ ರೀತಿಯ ಯೋಜನೆ ಮಾಡುವ ಮೂಲಕ ತಾಪಮಾನವನ್ನು ತಗ್ಗಿಸುವ ಕೆಲಸ ಆಗಿದೆ. ಹೀಗಾಗಿ ಬಳ್ಳಾರಿ ನಗರದಲ್ಲಿ 12 ಲಕ್ಷ ಮರಗಳನ್ನು ನೆಟ್ಟರೆ ಬೇಸಿಗೆಯಲ್ಲಿ ತಾಪಮಾನವನ್ನು ಕನಿಷ್ಟ 4 ಡಿಗ್ರಿ ಸೆಲ್ಸಿಯಸ್‍ನಷ್ಟು ತಗ್ಗಿಸಬಹುದು ಎಂಬ ನಿರೀಕ್ಷೆ ಇದೆ.

 

ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿರುವ (ಅಲ್ಲಂ ವಿಟ್ಸ್ ಹಿಂಭಾಗದ) ಅರವತ್ತು ಎಕರೆ ಜಾಗದಲ್ಲಿ ಹಾಗೂ ಅಲ್ಲಿಪುರದ 50 ಎಕರೆ ಬಡಾವಣೆಯಲ್ಲಿ ಪ್ರಾಥಮಿಕವಾಗಿ ಮರ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಎರಡು ಪ್ರದೇಶಗಳಲ್ಲಿ ಮರಗಳನ್ನು ನೆಡಲು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ತದನಂತರ ನಗರದಾದ್ಯಂತ ಎಲ್ಲೆಲ್ಲಿ ಅವಕಾಶ ಇದೆಯೋ ಅಲ್ಲೆಲ್ಲ ಮರಗಳನ್ನು ನೆಡುವ ಕೆಲಸ ಆಗಬೇಕಿದೆ ಎಂದು ಶಾಸಕರು ತಿಳಿಸಿರುವ ವಿಚಾರಗಳನ್ನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. 

ಇನ್ನು ಇದೇ ಸಂದರ್ಭ ಬಳ್ಳಾರಿ ಮಹಾನಗರ ಪಾಲಿಕೆಗೂ ಭೇಟಿ ನೀಡಿ, ನಗರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿ ಏನೇನು ಕ್ರಮ ಕೈಗೊಳ್ಳಬಹುದೆಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಶಾಸಕರ ಸೂಚನೆಯಂತೆ ಪಾಲಿಕೆ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.

 

ಮಳೆ ನೀರು ಸಮಸ್ಯೆಗೆ ಪರಿಹಾರ: ನಗರದಾದ್ಯಂತ ಬಹಳಷ್ಟು ಕಡೆಗಳಲ್ಲಿ ಒಳ ಚರಂಡಿ ಹಾಗೂ ಹೊರ ಚರಂಡಿ ಸಮಸ್ಯೆ ಇದ್ದು, ಮಳೆಗಾಲದ ಸಂದರ್ಭದಲ್ಲಿ ಹೊರ ಚರಂಡಿಗಳು ಕಸದಿಂದ ತುಂಬಿಕೊಂಡಿರುವುದರಿಂದ ಬಹಳಷ್ಟು ಮಳೆಯ ನೀರು ರಸ್ತೆಗಳಿಗೆ ಹಾಗೂ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಹೀಗಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ತಿಳಿಸಲಾಯಿತು. ಈ ವೇಳೆ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು. ಎರಡು ಮೂರು ದಿನಗಳಲ್ಲಿ ಚರಂಡಿಗಳನ್ನು ಶೀಘ್ರ ಸ್ವಚ್ಛಗೊಳಿಸುವಂತೆ ಹೇಳಲಾಯಿತು.

ಈ ಪೈಕಿ ಗೋನಾಳು ರಸ್ತೆಯ ಸೇತುವೆ ಬಳಿ ಸಮಸ್ಯೆ ಇದ್ದು, ಹೊಸದಾಗಿ ಪೈಪ್‍ಗಳನ್ನು ಹಾಕಿ ಎರಡು ಮೂರು ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿ ಗಂಗಾಧರಗೌಡ ಹಾಗೂ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಯಿತು. ಯಾವುದೇ ಕಾರಣಕ್ಕೂ ಮಳೆ ಬಂದ ಸಂದರ್ಭ ಮಳೆ ನೀರು ಹರಿಯಲು ಯಾವುದೇ ರೀತಿಯ ಸಮಸ್ಯೆ ಆಗಬಾರದೆಂದು ಹೇಳಲಾಯಿತು.

13ನೇ ವಾರ್ಡ್‍ಗೆ ಭೇಟಿ: ಇದೇ ವೇಳೆ ಬಳ್ಳಾರಿ ನಗರದ 13ನೇ ವಾರ್ಡ್‍ಗೆ ನಾರಾ ಶರತ್ ರೆಡ್ಡಿ ಅವರು ಭೇಟಿ ನೀಡಿ ಕಾಲುವೆಗಳ ಸ್ಥಿತಿಯನ್ನು ಅವಲೋಕಿಸಿದರು. ಸ್ವಚ್ಛತೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

 

ಚಾನಾಳ್ ಶೇಖರ್ ಸೇರಿದಂತೆ ಹಲವರು ಹಾಜರಿದ್ದರು

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top