ಬೆಂಗಳೂರು: ರಾಜ್ಯದ ಪ್ರತಿಯೊಬ್ಬರಿಗೂ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡುಗಳನ್ನು ಉಚಿತವಾಗಿ ಅವರ ಮನೆ ಬಾಗಿಲಿಗೆ ಇನ್ನು ಆರು ತಿಂಗಗೊಳಗಾಗಿ ತಲುಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಂದಿನಿಂದ ಆರಂಭಗೊಂಡ ಎರಡು ದಿನಗಳ ಆರೋಗ್ಯ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದೇಶದ ಎಲ್ಲಾ ಪ್ರಜೆಗಳ ಆರೋಗ್ಯ ಸಂರಕ್ಷಣೆ ಮತ್ತು ಸುಧಾರಣೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ದೇಶದ ೮೦ ಕೋಟಿ ಜನರು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ಹೇಳಿದರು.ಇತ್ತೀಚೆಗಷ್ಟೇ ರಾಜ್ಯದ ೧೬೫ ತಾಲ್ಲೂಕುಗಳಲ್ಲಿ ಒಂದು ವಾರ ಕಾಲ ಆರೋಗ್ಯ ಮೇಳ ಮತ್ತು ಸಪ್ತಾಹವನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ತಿಳಿಸಿದರು.