ಅನ್ನಭಾಗ್ಯ ಯೋಜನೆ ನೇರ ನಗದು ವರ್ಗಾವಣೆಗೆ ಚಾಲನೆ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿಯ ಪ್ರತಿಯೊಂದು ಘಟಕಕ್ಕೆ [ಒಬ್ಬರಿಗೆ 10 ಕೆ.ಜಿ] ಐದು ಕೆ.ಜಿ. ಆಹಾರ ಧಾನ್ಯದ ಜೊತೆಗೆ ಐದು ಕೆ.ಜಿ ಆಹಾರ ಧಾನ್ಯದ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ನಗದು ವರ್ಗಾವಣೆ ಮಾಡುವ ಮಹತ್ವದ  ಕಾರ್ಯಕ್ರಮ ಆರಂಭವಾಗಿದೆ.

ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜುಲೈ 1 ರಿಂದ ಅನ್ವಯವಾಗುವಂತೆ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಮಹತ್ವದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ನಗದು ನೀಡುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಸಂತಸದಿಂದ ಶುಭಾರಂಭ ಮಾಡಿದರು. ಮೊದಲ ಹಂತದಲ್ಲಿ ಮೈಸೂರು  ಮತ್ತು ಕೋಲಾರ ಜಿಲ್ಲೆಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಿ, ಅನ್ನ ಭಾಗ್ಯ ಅಭಿಯಾನದಡಿ ನಗದು ವರ್ಗಾವಣೆ ಕುರಿತ ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಅವರು,   ಶಕ್ತಿ ಯೋಜನೆಯನ್ನು ಜೂನ್ 11 ರಿಂದ, ಗೃಹ ಜ್ಯೋತಿ ಜುಲೈ 1 ರಿಂದ ಜಾರಿಗೊಳಿಸಲಾಗಿದೆ.  ಗೃಹ ಲಕ್ಷ್ಮಿ ಯೋಜನೆಗೆ ಸ್ವಲ್ಪ ಸಮಯ ಬೇಕಾಗಿದೆ. ಯಜಮಾನಿಗೆ ಎರಡು ಸಾವಿರ ರೂಪಾಯಿ ಹಣ ನೀಡಬೇಕಾಗಿದ್ದು, ನೋಂದಣಿ ವಿಳಂಬವಾಗಿರುವುದರಿಂದ ಆಗಸ್ಟ್ 16 ರಿಂದ ಈ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು.  

ಆರು ತಿಂಗಳಲ್ಲಿ ಕೆಲಸ ಸಿಗದಿದ್ದರೆ ಪದವಿಧರರಿಗೆ 3 ಸಾವಿರ ಮತ್ತು ಡಿಪ್ಲೊಮೋ ಪಡೆದವರಿಗೆ 1,500 ರೂಪಾಯಿ ನೀಡುವ ಯುವ ನಿಧಿ ಕಾರ್ಯಕ್ರಮ ನವೆಂಬರ್ ಇಲ್ಲವೆ ಡಿಸೆಂಬರ್ ನಿಂದ ಜಾರಿಯಾಗಲಿದೆ. ಅಲ್ಲಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣವಾಗಲಿದೆ.  24 ತಿಂಗಳ ಕಾಲ ನಿರುದ್ಯೋಗಿಗಳಿಗೆ  ಹಣ  ನೀಡಲಾಗುವುದು. ಪದವಿ ಜೊತೆಗೆ ವೃತ್ತಿ ಶಿಕ್ಷಣ ವಲಯದಲ್ಲಿ ಪದವಿ ಪಡೆದವರಿಗೂ ಸೌಲಭ್ಯ ಸಿಗಲಿದೆ ಎಂದರು.

ಈ ಹಣವನ್ನು ಫಲಾನುಭವಿಗಳು ದಿನ ನಿತ್ಯದ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಅಕ್ಕಿ ಖರೀದಿಸಿ ನೆಮ್ಮೆದಿಯ ಬದುಕು ಕಂಡುಕೊಳ್ಳಬೇಕು. ರಾಜ್ಯದ ಬಡವರ ಪರವಾಗಿ ಸರ್ಕಾರ ಇದ್ದು, ಬಡ ಜನರಲ್ಲಿ ನೆಮ್ಮದಿಯ ವಾತಾವರಣ ತರುತ್ತೇವೆ. ನಾವು ಯಾವುದೇ ಟೀಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಎಲ್ಲಾ ಫಲಾನುಭವಿಗಳು ಇದರ ಸೌಲಭ್ಯ ಪಡೆಯಬೇಕು. ಎಲ್ಲರಿಗೂ ಕೂಡ ಪ್ರತಿ ತಿಂಗಳು ಹಣ ನೀಡುತ್ತೇವೆ. ಇದರಿಂದ ಫಲಾನುಭವಿಗಳು ಸಂತಸದಿಂದಿದ್ದಾರೆ. ಆದರೆ ವಿರೋಧ ಪಕ್ಷದವರಿಗೆ ಇದು ಹೊಟ್ಟೆ ಉರಿ ತರಿಸಿದೆ. ಬಡವರು ಎರಡು ಹೊತ್ತು ಅನ್ನ ತಿಂದರೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಏಕೆ ಹೊಟ್ಟೆಕಿಚ್ಚು? ಎಂದು ಪ್ರಶ್ನಿಸಿದರು.  

ಹಸಿದ ಹೊಟ್ಟೆಗೆ, ದುಡಿಯುವ ಕೈಗಳಿಗೆ ಶಕ್ತಿ-ಚೈತನ್ಯ ತುಂಬುವ ಸಲುವಾಗಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಜೂನ್ 8 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜುಲೈನಿಂದ  ಅನ್ನ ಭಾಗ್ಯ ಯೋಜನೆ ಅನುಷ್ಠಾನ ಮಾಡುವ ಉದ್ದೇಶದಿಂದ. ಮರು ದಿನ ಕೇಂದ್ರ ಆಹಾರ ನಿಗಮಕ್ಕೆ ಪತ್ರ ಬರೆದು ರಾಜ್ಯಕ್ಕೆ ಅಗತ್ಯವಾಗಿರುವ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿ ಜೂನ್ 12 ರಂದು ಅಕ್ಕಿ ಪೂರೈಸುವುದಾಗಿ ತಿಳಿಸಿತು. ಅಲ್ಲಿನ ಡೆಪ್ಯುಟಿ ಮ್ಯಾನೇಜರ್ ಅವರ ಜೊತೆ ಮಾತನಾಡಿದಾಗ ನಮ್ಮ ದೇಶದಲ್ಲಿ ಬೇಕಾದಷ್ಟು ಆಹಾರ ಧಾನ್ಯವಿದೆ. 235 ಲಕ್ಷ ಮೆಟ್ರಿಕ್ ಟನ್ ನಷ್ಟು ದಾಸ್ತಾನು ಇದೆ ಎಂದು ಮಾಹಿತಿ ನೀಡಿದ್ದನ್ನು ಮುಖ್ಯಮಂತ್ರಿ ಅವರು ಸ್ಮರಿಸಿಕೊಂಡರು.  

ಆದರೆ ಈ ವಿಚಾರ ಕೇಂದ್ರ ಸರ್ಕಾರಕ್ಕೆ ಗೊತ್ತಾದ  ನಂತರ ಜೂನ್ 14 ರಂದು ಪತ್ರ ಬರೆದು ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿತು. ಇದು ಕೊಳಕು ರಾಜಕಾರಣವಲ್ಲವೇ?.  ಇದು ಬಡವರ ವಿರೋಧಿ ಕ್ರಮ. ಇಷ್ಟಾದರೂ ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡು ಹರಾಜು ಮೂಲಕ ಮಾರಾಟ ಮಾಡಲು ನಿರ್ಧರಿಸಿತು ಎಂದು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ದಾಖಲೆ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಅಕ್ಕಿ ಹರಾಜು ಹಾಕಲು ನಿರ್ಧರಿಸಿದ್ದು,. ಇದೀಗ ಅಕ್ಕಿ ಖರೀದಿ ಮಾಡುವವರು ಇಲ್ಲವಾಗಿದ್ದಾರೆ ಇದು ಬಡವರ ದ್ರೋಹದ ಕೆಲಸ ಎಂದರು.  

ಇದಾದ ನಂತರ ನಾವು ಛತ್ತೀಸ್ ಗಢ, ಪಂಜಾಬ್, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಅಕ್ಕಿ ನೀಡುವಂತೆ ಕೋರಿದೆವು. ಚತ್ತೀಸ್ ಗಢ ಒಂದು ತಿಂಗಳು ಮಟ್ಟಿಗೆ ಕೊಡುವುದಾಗಿ ಹೇಳಿದರೆ, ತೆಲಂಗಾಣ ಮುಖ್ಯಮಂತ್ರಿ ಅವರು ಭತ್ತ ವಿತರಿಸುವುದಾಗಿ ತಿಳಿಸಿದರು.. ಆಂಧ್ರ ಪ್ರದೇಶದಿಂದಲೂ ಅಕ್ಕಿ ಸಿಗಲಿಲ್ಲ. ಒಂದು ಕಡೆ ನಾವು ಮಾತು ನೀಡಿದ್ದೇವೆ. ಅಕ್ಕಿ ಸಿಗುತ್ತಿಲ್ಲ. ಮುಂದೇನು ಮಾಡಬೇಕು ಎಂದು ಮತ್ತೆ ಕೇಂದ್ರ ಸರ್ಕಾರದ ಜೊತೆ ಅಕ್ಕಿ ಖರೀದಿಗಾಗಿ ಮನವಿ ಮಾಡಿದೆವು.  ಗೋಣಿ ಚೀಲದಲ್ಲಿ ನೀಡುವ ಅಕ್ಕಿಯನ್ನು ಪ್ರತಿ ಕೆ.ಜಿಗೆ 32.24 ರೂಪಾಯಿಯಂತೆ ಒದಗಿಸಬೇಕೆಂದು ಕೋರಲಾಯಿತು. ಈ ವರ್ಷದ ಏಪ್ರಿಲ್ ನಲ್ಲಿ 32.70 ರೂಪಾಯಿಯಂತೆ ಕೇಂದ್ರ ಅಕ್ಕಿ ವಿತರಣೆ ಮಾಡಿತ್ತು. ನಂತರ ನಮ್ಮ ಬೇಡಿಕೆಗೆ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಸಚಿವ  ಸಂಪುಟದಲ್ಲಿ ಚರ್ಚಿಸಿ ಅಕ್ಕಿ ಸಿಗುವ ತನಕ ಪ್ರತಿಯೊಬ್ಬ ಫಲಾನುಭವಿಗಳಿಗೆ ಮಾಸಿಕ 170 ರೂಪಾಯಿ ನೀಡಲು ನಿರ್ಧರಿಸಿ ಇದೀಗ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ದಿನ ನಾಲ್ಕು ಜಿಲ್ಲೆಗಳಿಗೆ ಸೌಲಭ್ಯ ಕಲ್ಪಿಸುತ್ತಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಅಕ್ಕಿ ಸಿಗುವ ತನಕ ಹಣ ದೊರೆಯಲಿದೆ. ಇದಕ್ಕಾಗಿ ವಾರ್ಷಿಕ 10 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದರೆ ಸರ್ಕಾರಕ್ಕೆ ಒಟ್ಟು 52 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ ಎಂದರು.

ಐದು ಗ್ಯಾರೆಂಟಿ ಕಾರ್ಯಕ್ರಮಗಳಲ್ಲಿ ಅನ್ನ ಭಾಗ್ಯ ಅತ್ಯಂತ ಮಹತ್ವದ್ದು,  2013 ರಲ್ಲಿ ಅನ್ನ ಭಾಗ್ಯ ಕಾರ್ಯಕ್ರಮ ಜಾರಿ ಮಾಡಿದ್ದೇವು. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಜನರಿಗೆ ದ್ರೋಹ ಮಾಡಬಾರದು ಎಂದು ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ಕಾರ್ಯಕ್ರಮ ಅನುಷ್ಠಾನ ಮಾಡುವ ಕುರಿತು ನಿರ್ಧರಿಸಲಾಯಿತು. ಆಹಾರ ಭದ್ರತಾ ಕಾಯ್ದೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಮಾಹಿತಿ ಹಕ್ಕು, ಉದ್ಯೋಗ ಹಕ್ಕು, ಶಿಕ್ಷಣ ಹಕ್ಕು ಕಾಯ್ದೆಗಳನ್ನು ಡಾ. ಮನಮೋಹನ್ ಸಿಂಗ್ ಜಾರಿಗೊಳಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಯಾರೂ ಇಂತಹ ಕ್ರಾಂತಿಕಾರಿ ಕಾಯ್ದೆಗಳನ್ನು ಜಾರಿ ಮಾಡಿರಲಿಲ್ಲ. ಈ ಎಲ್ಲಾ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಿದ್ದನ್ನು ನಾವ್ಯಾರೂ ಮರೆಯಬಾರದು ಎಂದರು.

ಆಹಾರ ಭದ್ರತಾ ಕಾಯ್ದೆ ಜಾರಿಮಾಡಿದ ನಂತರ ಕೇಂದ್ರ ಸರ್ಕಾರ ಪ್ರತಿ ಕೆ.ಜಿ.ಗೆ 3 ರೂಪಾಯಿಯಂತೆ ಅಕ್ಕಿ ನೀಡಲು ತೀರ್ಮಾನಿಸಿತು. ನಮ್ಮ ಸರ್ಕಾರ ನಂತರ 1 ರೂಪಾಯಿ ದರದಲ್ಲಿ ಅಕ್ಕಿ ವಿತರಿಸಿತು. ನಂತರ ಉಚಿತವಾಗಿ ನೀಡಲು ಆರಂಭಿಸಿತು.  ಇದೀಗ 1.28 ಕೋಟಿ ಕುಟುಂಬಗಳಿಗೆ ಅನ್ನ ಭಾಗ್ಯ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ. ಇದರಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಫಲಾನುಭವಿಗಳು ಸಹ ಇದ್ದಾರೆ. 4.42 ಕೋಟಿ ಜನರಿಗೆ ಇವತ್ತು ಉಚಿತವಾಗಿ ಅಕ್ಕಿ ನೀಡುವ ಕಾರ್ಯಕ್ರಮ ಜಾರಿಯಾಗಿದೆ ಎಂದರು.

ಕೊರೋನಾ ಸಾಂಕ್ರಾಮಿಕದ ನಂತರ ಕೇಂದ್ರ ಸರ್ಕಾರ 3 ರೂಪಾಯಿ ಮೊತ್ತದಲ್ಲಿ ಅಕ್ಕಿ ನೀಡುವುದನ್ನು ನಿಲ್ಲಿಸಿ ಉಚಿತವಾಗಿ ವಿತರಿಸಲು ಆರಂಭಿಸಿತು. ಆದರೆ ಇದನ್ನು ಮೊದಲು ಆರಂಭ ಮಾಡಿದವರು ಯಾರು?. ನಾವು ಇದ್ದಾಗ 7 ಕೆ.ಜಿ. ನೀಡುತ್ತಿದ್ದೇವು. ಆದರೆ ಅಕ್ಕಿ ಕಡಿಮೆಯಾದ ಬಗ್ಗೆ ಜನ ಪ್ರಶ್ನಿಸಲು ಆರಂಭಿಸಿದರು. ಜನರ ಬೇಡಿಕೆಯಂತೆ 10 ಕೆ.ಜಿ. ನೀಡುತ್ತೇವೆ ಎಂದಾಗ ಜನರ ಸಂತಸಕ್ಕೆ ಪಾರವೇ ಇರಲಿಲ್ಲ. ನಾವು ಐದು ಕೆ.ಜಿ. ಜೊತೆ ಹತ್ತು ಕೆ.ಜಿ. ಎಂದು ಹೇಳಿರಲಿಲ್ಲ. ಐದು ಕೆ.ಜಿ. ಜೊತೆಗೆ ಮತ್ತೆ ಐದು ಕೆ.ಜಿ ಸೇರಿ ಒಟ್ಟು 10 ಕೆ.ಜಿ. ಅಕ್ಕಿಯನ್ನು ಜುಲೈ 1 ರಿಂದಲೇ ವಿತರಣೆ ಮಾಡಲು ನಿರ್ಧರಿಸಲಾಯಿತು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನ್ನ ಭಾಗ್ಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಬಸವ ಜಯಂತಿಯಂದು ಅಕ್ಕಿ ನೀಡುವ ಕಾರ್ಯಕ್ರಮ ಜಾರಿಗೊಳಿಸಿದರು. ನಮ್ಮ ಸರ್ಕಾರ ಆ ಯೋಜನೆಯಲ್ಲಿ ಅಕ್ಕಿಯ ಪ್ರಮಾಣವನ್ನು 7 ಕೆ.ಜಿಗೆ ಹೆಚ್ಚಳ ಮಾಡಿತ್ತು. ನಂತರದ ಸರ್ಕಾರ ಅದನ್ನು 5 ಕೆ.ಜಿಗೆ ಇಳಿಸಿತ್ತು. ನಮ್ಮ ಈ ಯೋಜನೆಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದರ ಜತೆಗೆ ರಾಜಕೀಯ ಕೂಡ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ನೀಡಿ ಕೇಂದ್ರ ಸರ್ಕಾರ ತನ್ನ ಹೃದಯ ಶ್ರೀಮಂತಿಕೆ ಮೆರೆಯಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ ಎಂದರು.

ಬಿಜೆಪಿ ಸ್ನೇಹಿತರಿಗೆ ಒಂದು ಮಾತು ಹೇಳಬಯಸುತ್ತೇನೆ. ಆಹಾರ ಭದ್ರತೆ ಕಾಯ್ದೆ ತಂದವರು ಯಾರು?. ಏಕೆ ತಂದರು ಎಂಬುದನ್ನು ಅರಿಯಬೇಕು. ದೇಶವನ್ನು ಹಸಿವುಮುಕ್ತ ಮಾಡುವ ಉದ್ದೇಶದಿಂದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ಬಡ ಜನರಿಗೆ ಆಹಾರ ಧಾನ್ಯ ನೀಡುವುದನ್ನು ಸಂವಿಧಾನದ ಹಕ್ಕಾಗಿ ತಂದಿದ್ದನ್ನು ನೆನಪಿಸಿಕೊಳ್ಳಬೇಕು. ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು, ಪ್ರಧಾನ ಮಂತ್ರಿ ಆಗಿದ್ದ ಡಾ. ಮನಮೋಹನ್ ಸಿಂಗ್ ಅವರು ಇದನ್ನು ಜಾರಿಗೆ ತಂದಿದ್ದರು. ಆದರೆ ಬಿಜೆಪಿಯ ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಯೋಜನೆ ಜಾರಿ ಮಾಡಿದೆ ಎಂದು ಕೆಲವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇದು ಯುಪಿಎ ಸರ್ಕಾರದ ಯೋಜನೆ ಎಂಬುದು ಸತ್ಯ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಮಾತ್ರ ಅನ್ನಭಾಗ್ಯ ಯೋಜನೆ ಮೂಲಕ ಜನರಿಗೆ ಉಚಿತವಾಗಿ ಅಕ್ಕಿ ನೀಡಿ, ರಾಜ್ಯವನ್ನು ಹಸಿವು ಮುಕ್ತ ಮಾಡುವ ಪ್ರಯತ್ನ ನಡೆಯುತ್ತಿದೆ. ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಕಾರ್ಯಕ್ರಮ ಇಲ್ಲ. ಈ ವರ್ಷ ನಾವು ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಈ ಸಂದರ್ಭದಲ್ಲಿ ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಸದನದಲ್ಲಿ ಯಾರಿಗೆ ಉತ್ತರ ನೀಡಬೇಕೋ ನೀಡುತ್ತೇನೆ. ನಾವು ಬಸವಣ್ಣನ ನಾಡಿನವರು, ನುಡಿದಂತೆ ನಡೆದಿದ್ದೇವೆ. ಈ ಹಿಂದೆ ಹೇಳಿದ್ದಂತೆ 200 ಯೂನಿಟ್ ವಿದ್ಯುತ್ ಉಚಿತ, 2 ಸಾವಿರ ರೂಪಾಯಿ ಖಚಿತ, 10 ಕೆ.ಜಿ ಅಕ್ಕಿ ನಿಶ್ಚಿತ ಎಂಬುದನ್ನು ಸಾಕಾರಗೊಳಿಸಿದ್ದೇವೆ.  ನಮ್ಮ ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಾವು ಈ ಅನ್ನಭಾಗ್ಯ ಯೋಜನೆಯನ್ನು ಯಾವ ರೀತಿ ಜಾರಿಗೆ ತರುತ್ತಿದ್ದೇವೆ ಎಂಬುದರ ಬಗ್ಗೆ ವಿವಿಧ ರಾಜ್ಯಗಳ ಮುಖಂಡರು ಮಾಹಿತಿ ಪಡೆಯುತ್ತಿದ್ದಾರೆ ಎಂದರು.  

ದೇಶದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ ಕನಿಷ್ಠ 4 ರಿಂದ 5 ಸಾವಿರ ರೂಪಾಯಿಯಷ್ಟು ಲಾಭವಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ನೆರವು ನೀಡುತ್ತಿದೆ. ಆಹಾರ ಸಚಿವರ ನೇತೃತ್ವದಲ್ಲಿ ಈ ಯೋಜನೆಯನ್ನು ಬಹಳ ಉತ್ತಮವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಶ್ರೀ ಡಿ.ಕೆ.. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.‌ ಮುನಿಯಪ್ಪ ಅವರು ಅನ್ನ ಭಾಗ್ಯ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಮೊದಲ ದಿಟ್ಟ ಹೆಜ್ಜೆ ಇಡಲಾಗಿದೆ.  ಹಿಂದಿನ ಯುಪಿಎ ಸರ್ಕಾರ ಕ್ರಾಂತಿಕಾರಕ ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿತ್ತು.  ನೀಡಿದ ವಾಗ್ದಾನದಂತೆ ಅನ್ನ ಭಾಗ್ಯ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜುಲೈ ತಿಂಗಳಿನಿಂದ ಜಾರಿಗೊಳಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಲಭ್ಯವಿದ್ದರೂ ಬೇಡಿಕೆಯಂತೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ರಾಜ್ಯಕ್ಕೆ ಒದಗಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಐದು ಕೆ.ಜಿ. ಆಹಾರ ಧಾನ್ಯಗಳ ಬದಲಿಗೆ ಅರ್ಹ ಫಲಾನುಭವಿಗಳಿಗೆ ನಗದು ನೀಡುವ ಕಾರ್ಯಕ್ರಮ ಜಾರಿಮಾಡಲಾಗಿದೆ. ಅಕ್ಕಿ ತಡವಾದರೂ ಅಕ್ಕಿ ಬದಲಿಗೆ ಹಣ ನೀಡುವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಪ್ರತಿದಿನ ನಾಲ್ಕು ಜಿಲ್ಲೆಗಳಂತೆ ಎಲ್ಲಾ ಜಿಲ್ಲೆಗಳಿಗೆ ಪ್ರತಿದಿನ ಹಣ ವರ್ಗಾವಣೆ ಮಾಡಲಾಗುವುದು. ಪ್ರತಿ ಫಲಾನುಭವಿಗಳಿಗೆ ಪ್ರತಿ ಕೆ.ಜಿ.ಗೆ ಎಫ್.ಸಿ.ಐ ನಿಗದಿಪಡಿಸಿದ 34 ರೂಪಾಯಿ ಮೊತ್ತವನ್ನು  ನೇರ ಸೌಲಭ್ಯ ವರ್ಗಾವಣೆ ನಿಯಮ 2015 ರ ಅನ್ವಯ ಪಾರದರ್ಶಕವಾಗಿ 1.28 ಕೋಟಿ ಕುಟುಂಬಗಳಿಗೆ ಹಣ ವರ್ಗಾವಣೆ  ಮಾಡಲಾಗುತ್ತಿದೆ. ಸರ್ಕಾರ ನುಡಿದಂತೆ ನಡೆದಿದೆ. ಅಧಿಕಾರಿ ವರ್ಗ ಕೇವಲ ನಾಲ್ಕು ದಿನಗಳಲ್ಲಿ ಎಲ್ಲಾ ವ್ಯವಸ್ಥೆ ಮಾಡಿದ್ದು, ಇಲಾಖೆ ಕಾರ್ಯದರ್ಶಿಗಳು, ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.   

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಬಿ.ನಾಗೇಂದ್ರ, ಶಿವರಾಜ ತಂಗಡಗಿ, ಶಾಸಕರು, ಮುಖ್ಯಕಾರ್ಯದರ್ಶಿಗಳಾದ ಶ್ರೀಮತಿ ವಂದಿತಾ ಶರ್ಮಾ ಮತ್ತಿತರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top