ಏ.1ಕ್ಕೆ ಅಮಿತ್ ಶಾ ಆಗಮನ

ಬೆಂಗಳೂರು, ಮಾರ್ಚ್: ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಏಪ್ರಿಲ್ 1ರಂದು ಬೆಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅಂದು ನಡೆಯಲಿರುವ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಕೇಂದ್ರದಲ್ಲಿ ನೂತನವಾಗಿ ಸಹಕಾರ ಸಚಿವಾಲಯ ರಚನೆಯಾಗಿದ್ದು ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಅಮಿತ್ ಶಾ ಅವರು ಮುಂದಾಗಿದ್ದಾರೆ. ಹೀಗಾಗಿ ಸಹಕಾರ ಇಲಾಖೆಗೆ ನೆರವಾಗುವ ಕಾನೂನುಗಳಿಗೆ ತಿದ್ದುಪಡಿ ತರಲು ಸಲಹೆ ಸೂಚನೆಗಳನ್ನು ನೀಡಿದರೆ ಅದನ್ನು ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು ಎಂದು ಸಹಕಾರಿಗಳಿಗೆ ತಿಳಿಸಿದರು.

ಸಹಕಾರ ಇಲಾಖೆಗೆ ಅಗತ್ಯವಿರುವ ನೆರವು, ಕಾನೂನು ತಿದ್ದುಪಡಿಗಳ ಪಟ್ಟಿ ಮಾಡಲಾಗಿದೆ. ಸಹಕಾರ ಕ್ಷೇತ್ರದಲ್ಲಿನ ಆದಾಯ ತೆರಿಗೆ ರದ್ದು ಮಾಡುವುದು, ನಬಾರ್ಡ್ ನಿಂದ ಮಂಜೂರಾಗುವ ಸಾಲದ ಮಿತಿ ಹೆಚ್ಷಳ, ಕೆಲವೊಂದು ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಇದರ ಹೊರತಾಗಿ ಮತ್ತೇನಾದರೂ ಬೇಡಿಕೆಗಳಿದ್ದರೆ ಕೂಡಲೇ ಸಲ್ಲಿಸುವಂತೆ ಸೂಚಿಸಿದರು. ಕಳೆದ ವರ್ಷ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮಿತ್ ಶಾ ಅವರನ್ನು ಆಹ್ವಾನಿಸಲಾಗಿತ್ತು. ನಮ್ಮ ಆಹ್ವಾನವನ್ನು ಸ್ವೀಕರಿಸಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಏಪ್ರಿಲ್ 1ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆಯಬೇಕು. ಸಹಕಾರಿಗಳೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಸಚಿವರುಗಳಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಬೈರತಿ ಬಸವರಾಜ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಹಾಕರ ಸಂಘಗಳ ನಿಬಂಧಕರಾದ ಎಸ್.ಜಿಯಾಉಲ್ಲಾ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top