ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಸ್ಮರಣೆ ಹಾಗೂ ಜಾಗೃತಿ ಸಮಾವೇಶ

ಬೆಂಗಳೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಸ್ಮರಣೆ ಹಾಗೂ ಜಾಗೃತಿ ಸಮಾವೇಶ ಮಾಡಲು ತೀರ್ಮಾನಿಸಿದ್ದೆವೆ. ಈ ಹಿನ್ನೆಲೆಯಲ್ಲಿ ಇದೇ 18ರಂದು ಬೆಳಗ್ಗೆ 10.30ಕ್ಕೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಮಾಡಲಿದ್ದೇವೆ. ಈ ಸಭೆಯಲ್ಲಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಡಾ.ಜಿ. ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಕಾರ್ಯಾಧ್ಯಕ್ಷರಾದ ಧೃವನಾರಾಯಣ, ಸಂಸದರಾದ ಎಲ್ ಹನುಮಂತಯ್ಯ, ಪ್ರಿಯಾಂಕ್ ಖರ್ಗೆ ಅವರು ಸೇರಿದಂತೆ ಪಕ್ಷದ ಹಾಲಿ ಶಾಸಕರು ಹಾಗೂ ಸಂಸದರು ಹಾಗೂ ಮುಖಂಡರು, ಮಾಜಿ ಶಾಸಕರು, ಪಕ್ಷದ ಪರಾಜಿತ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಘಟಕದ ಎಲ್ಲ ವರ್ಗದವರ ಮುಖ್ಯಸ್ಥರು, ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವುದು ದಲಿತರು. ಹೀಗಾಗಿ ಈ ವರ್ಗಕ್ಕೆ ಸಂದೇಶ ನೀಡಲು ಈ ಸಮಾವೇಶ ಯಾವ ಮಟ್ಟದಲ್ಲಿ ಮಾಡಬೇಕು ಎಂದ ಚರ್ಚೆ ಮಾಡಲಾಗುತ್ತದೆ.

ಬಿಜೆಪಿ ನಾಯಕರು ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳುತ್ತಿರುವುದು, ಜತೆಗೆ ಕಾಂಗ್ರೆಸ್ ಪಕ್ಷ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಪದೇ ಪದೇ ಸುಳ್ಳು ಹೇಳುತ್ತಿರುವುದು ಎಲ್ಲದರ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿ, ಈ ವರ್ಗದವರಿಗೆ ಆಗುತ್ತಿರುವ ಅನ್ಯಾಯ ತಡೆದು ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಸಿಗುವಂತೆ ಮಾಡಬೇಕಿದೆ. ಜತೆಗೆ ಕಾಂಗ್ರೆಸ್ ಪಕ್ಷ ಈ ವರ್ಗಕ್ಕೆ ನೀಡಿರುವ ಕೊಡುಗೆಗಳನ್ನು ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ SCSP-TSP ಕಾಯ್ದೆ ಜಾರಿಗೆ ತಂದಿದ್ದು, ಬಿಜೆಪಿ ಸರ್ಕಾರ ಇದ್ಯಾವುದನ್ನು ಪರಿಗಣಿಸದೇ ಈ ವರ್ಗಕ್ಕೆ ಸಲ್ಲಬೇಕಾದ ಅನುದಾನವನ್ನು ನೀಡದಿರುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ದೊಡ್ಡ ಮಟ್ಟದ ದಲಿತ ಸಮಾವೇಶಕ್ಕೆ ಕೇಂದ್ರದ ನಾಯಕರನ್ನು ಆಹ್ವಾನಿಸುತ್ತೇವೆ. ಈ ಸಮಾವೇಶವನ್ನು ಜಿಲ್ಲಾ ಮಟ್ಟದಲ್ಲಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ‘ಈ ಸಮಾವೇಶವನ್ನು ರಾಜ್ಯಮಟ್ಟದಲ್ಲಿ ಮಾಡಲಿದ್ದು, ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಪಕ್ಷದ ನಾಯಕರ ಜೊತೆ ಚರ್ಚೆಸಲಾಗುವುದು’ ಎಂದು ಉತ್ತರಿಸದರು.

ಮತಬ್ಯಾಂಕ್ ಗಾಗಿ ಈ ಸಮಾವೇಶ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಚುನಾವಣೆ ಸಮಯದಲ್ಲಿ ಇದು ಮತಬ್ಯಾಂಕ್ ಎಂದೇ ಬಿಂಬಿತವಾಗುತ್ತದೆ. ಆದರೆ ರಾಜ್ಯ ಸರ್ಕಾರ SCSP-TSP ಕಾಯ್ದೆ ಅನುಗುಣವಾಗಿ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ಉಳಿದ ಅವಧಿಯಲ್ಲದರೂ ಕಾನೂನಿನ ಪ್ರಕಾರ ಅನುದಾನ ನೀಡಬೇಕು. ಸಮ್ಮಿಶ್ರ ಸರ್ಕಾರದಲ್ಲಿ 34 ಸಾವಿರ ಕೋಟಿ ಹಣ ನೀಡಲಾಗಿದ್ದು, ಅದು ಹೇಗೆ ಬಳಕೆಯಾಯಿತು ಎಂಬ ಮಾಹಿತಿ ಕೊಟ್ಟಿಲ್ಲ. ನಂತರ ದಲಿತರ ಕಲ್ಯಾಣಕ್ಕೆ ನೀಡುತ್ತೇವೆ ಎಂದಿದ್ದ ಅನುದಾನವನ್ನು ಕೊಟ್ಟಿಲ್ಲ. ಈ ಎಲ್ಲಾ ವಿಚಾರವಾಗಿ ದಲಿತರಲ್ಲಿ ಜಾಗೃತಿ ಮೂಡಿಸುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿ. ಆ ನಿಟ್ಟಿನಲ್ಲಿ ಈ ಸಮಾವೇಶ ಮಾಡಲಾಗುತ್ತಿದೆ. ಪ್ರತಿ ಐದು ವರ್ಷದಲ್ಲಿ ಒಂದಲ್ಲಾ ಒಂದು ಚುನಾವಣೆಗಳು ಬರುತ್ತಲೇ ಇರುತ್ತವೇ. ಹಾಗೆಂದು ಇದು ಮತಬ್ಯಾಂಕ್ ಗಾಗಿ ಮಾಡುತ್ತಿರುವ ಕಾರ್ಯಕ್ರಮ ಎಂದು ಹೇಳಲಾಗದು’ ಎಂದು ತಿಳಿಸಿದರು. 2014ರ ಚುನಾವಣೆ ನಂತರ ದಲಿತರು ಕಾಂಗ್ರೆಸ್ ವಿರುದ್ಧ ಸಿಟ್ಟಾಗಿದ್ದು, ಹೀಗಾಗಿ ಸಮಾವೇಶ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದಲಿತ ಸಮುದಾಯದ ಆಂಜನೇಯ ಅವರು SCSP-TSP ಕಾಯ್ದೆ ಮಂಡೆ ಮಾಡಿದರು. ಈ ಕಾಯ್ದೆ ಪ್ರಕಾರ ನಮಗೆ ಸಿಗಬೇಕಾದ ಅದಾನದಲ್ಲಿ ಎಷ್ಟು ಸಿಕ್ಕಿದೆ? ನಮಗೆ ನೀಡಲಾಗಿದ್ದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ನಮಗೆ ರಾಜ್ಯ ಸರ್ಕಾರ ಇಂತಿಷ್ಟು ಹಣ ನೀಡಬೇಕು. ಅದರಲ್ಲಿ ಎಷ್ಟು ಬಂದಿದೆ ಎಂಬುದರ ಬಗ್ಗ ಜನರಲ್ಲಿ ಅರಿವು ಮೂಡಿಸಬೇಕಿದೆ. ದಲಿತರಿಗೆ ಶೇ.15-18ರಷ್ಟು ಮಾತ್ರ ಶಿಕ್ಷಣ ಸಿಗುತ್ತಿತ್ತು, ಈಗ ಶೇ.85ರಷ್ಟು ತಲುಪಿದ್ದೇವೆ. 1952ರಿಂದ ಕಾಂಗ್ರೆಸ್ ಚುನಾವಣೆ ನಡೆಸಿಕೊಂಡು ಬರುತ್ತಿದ್ದು, ಪ್ರತಿ ಬಾರಿಯು ದಲಿತರು ಕಾಂಗ್ರೆಸ್ ಪಕ್ಷದ ಜತೆಗಿದ್ದಾರೆ. ಕೆಲವರು ಮಾತ್ರ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದರು.

ದಲಿತ ಹಾಗೂ ಹಿಂದುಳಿದ ಸ್ವಾಮೀಜಿಗಳು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂಬ ಪ್ರಶ್ನೆಗೆ, ‘ನಾನು ಈ ವಿಚಾರವಾಗಿ ರಾಜ್ಯ ಮಟ್ಟದ ಪದಾಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ದಲಿತ ವರ್ಗದ ಸ್ವಾಮೀಜಿ, ಮುಖಂಡರು, ನಿವೃತ್ತ ಅಧಿಕಾರಿಗಳನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರದ ಅನ್ಯಾಯ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುವ ಕಾರ್ಯಕ್ರಮದ ಬಗ್ಗೆ ಸಮಾಲೋಚನೆ ಮಾಡಿದ್ದೇವೆ. ಸರ್ಕಾರ ಕೇವಲ ದಲಿತ ಮಠಗಳಿಗೆ ಹಣ ನೀಡಿದ ಮಾತ್ರಕ್ಕೆ ಸಮುದಾಯ ಕಲ್ಯಾಣವಾಗುವುದಿಲ್ಲ. ಸರ್ಕಾರದ ಹಣ, ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕು. ಇದು ಅತ್ಯಂತ ತುಳಿತಕ್ಕೆ ಒಳಗಾಗಿರುವ ದೊಡ್ಡ ವರ್ಗವಾಗಿದೆ. ದಲಿತರಿಗೆ ಸರಿಯಾಗಿ ಮನೆ ಸಿಗುತ್ತಿಲ್ಲ. ಬಿಜೆಪಿಯವರು 5 ವರ್ಷದಲ್ಲಿ 5 ಲಕ್ಷ ಮನೆ ಕೊಡುತ್ತೆವೆ ಎಂದು ದೊಡ್ಡದಾಗಿ ಹೇಳಿಕೆ ನೀಡುತ್ತಾರೆ. ಆದರೆ ಒಂದೂ ಮನೆಯನ್ನು ನೀಡಿಲ್ಲ’ ಎಂದು ತಿಳಿಸಿದರು. ದಲಿತ ಸಿಎಂ ಆಗಲು ಸಾಧ್ಯವಿಲ್ಲ ಎಂಬ ಆನೇಕಲ್ ನಾರಾಯಣಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾರಾಯಣಸ್ವಾಮಿ ಅವರು ಅರ್ಹರಿದ್ದು, ಅವರೇ ಆಗಬಹುದಲ್ಲವೇ? ಮೊದಲು ಅವರು ಸದಾಶಿವ ಆಯೋಗ ಜಾರಿ ಮಾಡುತ್ತಿವೆ ಎಂದು ಹೇಳಿರುವ ಮಾತನ್ನು ಉಳಿಸಿಕೊಳ್ಳಲಿ. ನಂತರ ದಲಿತ ಸಿಎಂ ವಿಚಾರವಾಗಿ ಮಾತನಾಡಲಿ. ಅವರು ಮೊದಲು ಉತ್ತಮ ಖಾತೆ ಪಡೆದು ದಲಿತರ ಕಲ್ಯಾಣ ಮಾಡಲಿ. ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಆಗುವ ಸಾಧ್ಯತೆ ಇದೆ. ಇತ್ತೀಚೆಗೆ ಪಂಜಾಬ್ ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಕರ್ನಾಟಕದಲ್ಲಿ ದಲಿತರಾದ ಪರಮಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ದಲಿತರನ್ನು ಉಪಮುಖ್ಯಮಂತ್ರಿ ಮಾಡಿದ ಕಾರಣಕ್ಕೆ ಇಂದು ಗೋವಿಂದ ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಮಾಡದಿದ್ದರೆ ಇಂದು ಕಾರಜೋಳ ಅವರು ಉಪಮುಖ್ಯಮಂತ್ರಿ ಆಗುತ್ತಿರಲಿಲ್ಲ. 2004ರಲ್ಲಿ ಜನತಾದಳದವರು ಖರ್ಗೆ ಅವರನ್ನು ಒಪ್ಪಿಕೊಂಡಿದ್ದರೆ ಆಗಲೇ ದಲಿತರು ಸಿಎಂ ಆಗುತ್ತಿದ್ದರು. ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷನಾಗಿ ದಲಿತ ಮುಖ್ಯಮಂತ್ರಿ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ’ ಎಂದು ಉತ್ತರಿಸಿದರು.

Leave a Comment

Your email address will not be published. Required fields are marked *

Translate »
Scroll to Top