ನಾಗಮಂಗಲ : ಇತಿಹಾಸ ಪ್ರಸಿದ್ಧ, ಪುಣ್ಯಕ್ಷೇತ್ರ ತಾಲೂಕಿನ ಆದಿಚುಂಚನಗಿರಿಯಲ್ಲಿ ಸೋಮವಾರ ಮುಂಜಾನೆ ಶ್ರೀ ಗಂಗಾಧರೇಶ್ವರ ಸ್ವಾಮಿ ಮಹಾ ರಥೋತ್ಸವ ಹಾಗೂ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತರ ನಡುವೆ ಬಹಳ ವಿಜೃಂಭಣೆಯಿಂದ ನೆರವೇರಿತು.
ಹೋಳಿ ಹುಣ್ಣಿಮೆಯ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂಧನಾಥ ಸ್ವಾಮೀಜಿ ಅವರು ಆದಿಚುಂಚನಗಿರಿಯ ರಥ ಬೀದಿಯಲ್ಲಿ ಸರ್ವಾಲಂಕಾರಗೊಂಡಿದ್ದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದ ಅಂಗವಾಗಿ ಭಾನುವಾರ ಇಡೀ ರಾತ್ರಿ ಶ್ರೀ ಕ್ಷೇತ್ರದಲ್ಲಿ ತಿರುಗಣಿ ಉತ್ಸವ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ನಡೆದವು. ಶ್ರೀ ಕ್ಷೇತ್ರದ ಶ್ರೀ ಗಂಗಾಧರೇಶ್ವರ ಸ್ವಾಮಿಯನ್ನು ಅಲಂಕೃತಗೊಂಡಿದ್ದ ರಥದಲ್ಲಿ ಕೂರಿಸಲಾಗಿತ್ತು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ರಥವನ್ನು ಎಳೆದರು. ಮಂಗಳ ವಾದ್ಯಗಳ ವಾದ್ಯದೊಂದಿಗೆ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಹಣ್ಣು, ಜವನಗಳನ್ನು ಅರ್ಪಿಸಿ ಭಕ್ತಿ ಭಾವವನ್ನು ಮೆರೆದರು.
ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವವೂ ಕೂಡ ಪ್ರಾರಂಭವಾಯಿತು. ಒಂದೆಡೆ ಭಕ್ತರು ರಥವನ್ನು ಎಳೆದು ಧನ್ಯರಾಗುತ್ತಿದ್ದರೆ ಇನ್ನೊಂದೆಡೆ ಸರ್ವಾಲಂಕಾರ ಭೂಷಿತರಾಗಿ ಚಿನ್ನದ ಕಿರೀಟವನ್ನು ಧರಿಸಿ ಪಲ್ಲಕ್ಕಿಯಲ್ಲಿ ಕುಳಿತು ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದ ಶ್ರೀಗಳನ್ನು ನೋಡಿ ಕಣ್ತುಂಬಿಕೊಂಡರು. ಶ್ರೀಗಳು ಹಸನ್ಮುಖಿಯಾಗಿ ಎಲ್ಲರಿಗೂ ದರ್ಶನ ನೀಡಿದರು.
ರಥೋತ್ಸವ ಮತ್ತು ಅಡ್ಡ ಪಲ್ಲಕಿ ಉತ್ಸವ ರಥಬೀದಿಯಲ್ಲಿ ಸಂಚರಿಸಿ ರಥಬೀದಿ ದಕ್ಷಿಣ ದಿಕ್ಕಿನಲ್ಲಿರುವ ಗಣಪತಿ ದೇವಸ್ಥಾನದವರೆಗೆ ಚಲಿಸಿತು. ಶ್ರೀಗಣಪತಿಗೆ ಪೂಜೆ ಸಲ್ಲಿಸಿದ ನಂತರ ವಾಪಸ್ ರಥಬೀದಿಯಲ್ಲೇ ಬಂದ ರಥೋತ್ಸವ ಮೂಲ ಸ್ಥಾನದಲ್ಲಿ ನಿಂತಿತು.
Your article helped me a lot, is there any more related content? Thanks!