ಎಲಿಮೆಂಟ್ ಸ್ಟಾಫ್‌ಲಾಗ್ ಗೇಟ್ ತಯಾರಿಸಿ ಅಳವಡಿಸಲು ಕ್ರಮ: ಸಿಎಂ ಸಿದ್ಧರಾಮಯ್ಯ

ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ಕಟ್

ಮುಖ್ಯಮಂತ್ರಿಗಳಿಂದ ಆಣೆಕಟ್ಟು ಪರಿಶೀಲನೆ, ವೀಕ್ಷಣೆ

ಕೊಪ್ಪಳ :  ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ಕಟ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಆಗಸ್ಟ್ 13ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ತುಂಗಭದ್ರಾ ಆಣೆಕಟ್ಟು ಪರಿಶೀಲನೆ ಮತ್ತು ವೀಕ್ಷಣೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಆಗಸ್ಟ್ 10ರಂದು ರಾತ್ರಿ 10.50 ಗಂಟೆ ಸಮಯದಲ್ಲಿ ತುಂಗಭದ್ರಾ ಜಲಾಶಯದ 10 ಗೇಟ್‌ಗಳಿಂದ ಸುಮಾರು 22,890 ಕ್ಯೂಸೆಕ್ಸ್ ನೀರನ್ನು ಹೊರಬಿಡುವ ಸಮಯದಲ್ಲಿ 19ನೇ ಗೇಟು ಏಕಾಏಕಿ ಕೊಚ್ಚಿ ಹೋಗಿರುತ್ತದೆ. ಪ್ರಸ್ತುತ ಒಳಹರಿವು ಸರಾಸರಿ 25,500 ಕ್ಯೂಸೆಕ್ಸ್ಯಿದ್ದು, ಡ್ಯಾಮೇಜ್ ಗೇಟ್ ಒಳಗೊಂಡಂತೆ ಇತರೆ ಗೇಟ್‌ಗಳಿಂದ ಸುಮಾರು 1,25,000 ರಿಂದ 1,40,000 ಕ್ಯೂಸೆಕ್ಸ್ ವರೆಗೆ ನೀರು ಹೊರಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಗೇಟ್‌ನ್ನು ಆಣೆಕಟ್ಟು ಗೇಟುಗಳ ವಿನ್ಯಾಸ ತಜ್ಞರಾದ ಕನ್ನಯ್ಯ ನಾಯ್ಡು ಹೈದ್ರಾಬಾದ್ ಇವರಿಂದ ತಾತ್ಕಾಲಿಕ ಸ್ಟಾಫ್‌ಲಾಗ್ ಗೇಟ್‌ನ ವಿನ್ಯಾಸ ಪಡೆದು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕನ್ನಯ್ಯ ನಾಯ್ಡು ಅವರು ತಾತ್ಕಾಲಿಕವಾಗಿ 1.2 ಮೀಟರ್ (4 ಅಡಿ) ಎತ್ತರದ ಎಲಿಮೆಂಟ್‌ಗಳನ್ನು ತಯಾರಿಸಲು ವಿನ್ಯಾಸ ನೀಡಿರುತ್ತಾರೆ.
          ಹಂತ ಹಂತವಾಗಿ ಸಂಗ್ರಹವಾದ ನೀರನ್ನು 1625 ಅಡಿಗೆ ಕಡಿಮೆ ಮಾಡಿ ಒಂದು ಎಲಿಮೆಂಟ್ ಸ್ಟಾಫ್‌ಲಾಗ್ ಗೇಟ್‌ನ್ನು ತಯಾರಿಸಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ 1625 ಅಡಿಗೆ (76.48 ಟಿ.ಎಂ.ಸಿ) ಗೇಟು ಅಳವಡಿಸಲು ಸಾಧ್ಯವಾಗದಿದ್ದಲ್ಲಿ ಜಲಾಶಯದ ಮಟ್ಟವನ್ನು 1621 ಅಡಿಗೆ (64.16 ಟಿ.ಎಂ.ಸಿ) ಸಂಗ್ರಹಣೆಯನ್ನು ಕಡಿಮೆ ಮಾಡಿ ಸ್ಟಾಫ್‌ಲಾಗ್ ಗೇಟ್‌ನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಆಗಸ್ಟ್ 12ರಂದು ನಡೆದ ತುಂಗಭದ್ರಾ ಮಂಡಳಿಯ ಸಭೆಯಲ್ಲಿ ತಾತ್ಕಾಲಿಕ ಸ್ಟಾಫ್‌ಲಾಗ್ ಗೇಟನ್ನು ಅಳವಡಿಸಲು ಕನಿಷ್ಠ 5 ದಿನಗಳ ಕಾಲಾವಕಾಶ ಬೇಕಾಗುತ್ತದೆಂದು ಅಂದಾಜಿಸಿರುತ್ತಾರೆ. ಆಗಸ್ಟ್ ತಿಂಗಳಿನಲ್ಲಿ 39 ಟಿ.ಎಂ.ಸಿಯಷ್ಟು, ಸೆಪ್ಟೆಂಬರ್‌ನಲ್ಲಿ 30 ಟಿ.ಎಂ.ಸಿಯಷ್ಟು, ಅಕ್ಟೋಬರ್ ತಿಂಗಳನಲ್ಲಿ 16 ಟಿ.ಎಂ.ಸಿಯಷ್ಟು ಮತ್ತು ನವೆಂಬರ್‌ನಲ್ಲಿ 4 ಟಿ.ಎಂ.ಸಿಯಷ್ಟು ಒಟ್ಟಾರೆ 90 ಟಿ.ಎಂ.ಸಿಯಷ್ಟು ಒಳಹರಿವು ಬರಬಹುದೆಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಜಲಾಶಯದ ಮಟ್ಟ 1629.00 ಅಡಿ ಇದ್ದು, ಸಂಗ್ರಹಣ ಸಾಮರ್ಥ್ಯ 90 ಟಿ.ಎಂ.ಸಿ ಇರುತ್ತದೆ. ಇಲ್ಲಿಯವರೆಗೆ 25.00 ಟಿ.ಎಂ.ಸಿಯಷ್ಟು ನೀರನ್ನು ಬಳಸಲಾಗಿರುತ್ತದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ತುಂಗಭದ್ರಾ ಯೋಜನೆಯಿಂದ ಕರ್ನಾಟಕದ 9,26,000 ಎಕರೆ, (2 ಬೆಳೆಗಳು ಸೇರಿ) ಆಂಧ್ರಪ್ರದೇಶದ 6,25,000 ಎಕರೆ ಮತ್ತು ತೆಲಂಗಾಣದ 87,000 ಎಕರೆ ಪ್ರದೇಶ ನೀರಾವರಿಗೊಳಪಡುತ್ತದೆ. ಜಲಾಶಯದ ಮಟ್ಟ 1621 ಅಡಿಗೆ ಇಳಿಸಿದರು ಸಹ ಜಲಾಶಯದಲ್ಲಿ ಇನ್ನೂ ಸುಮಾರು 64 ಟಿ.ಎಂ.ಸಿಯಷ್ಟು ನೀರು ಲಭ್ಯವಾಗುತ್ತಿದ್ದು, ಈಗಾಗಲೇ ಅಂದಾಜಿಸಿದಂತೆ ಮುಂಬರುವ ಸುಮಾರು 90 ಟಿ.ಎಂ.ಸಿಯಷ್ಟು ಒಳಹರಿವಿನ ನೀರಿನ ಪ್ರಮಾಣವನ್ನು ಪರಿಗಣಿಸಿ, ಮುಂಗಾರು ಹಂಗಾಮಿನ ಅಚ್ಚುಕಟ್ಟಿಗೆ (ಸುಮಾರು 10 ಲಕ್ಷ ಎಕರೆ ಪ್ರದೇಶಕ್ಕೆ) ಸಂಪೂರ್ಣ ನೀರೊದಗಿಸಬಹುದಾಗಿದೆ. ತುಂಗಭದ್ರಾ ಮಂಡಳಿಯ ರೆಗ್ಯೂಲೆಷನ್ ಆಫ್ ವಾಟರ್ ಫಾರ್ ಯುಟಿಲೈಜಷನ್ ರೂಲ್-2 ರನ್ವಯ ಎಡೆದಂಡೆ ಕಾಲುವೆ ನಿರ್ವಹಣೆ ಹೊರತು ಪಡಿಸಿ, ಬಾಕಿ ಕಾಲುವೆಗಳು ಹಾಗೂ ಆಣೆಕಟ್ಟು ನಿರ್ವಹಣೆ ತುಂಗಭದ್ರಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.
          ರೈತರಿಗೆ ತೊಂದರೆಯಾಗದು: ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ಕಟ್ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಗೇಟ್ ದುರಸ್ತಿಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಇದರಿಂದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದು. ಜಲಾಶಯವು ಮತ್ತೆ ತುಂಬಲಿದ್ದು, ತಾಯಿ ತುಂಗಭದ್ರಾಗೆ ಬಾಗಿನ ಸಮರ್ಪಣಾ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಹೇಳಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ವಿಜಯನಗರ ಜಿಲ್ಲಾ ಮತ್ತು ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ.ಝೆಡ್.ಜಮೀರ್ ಅಹ್ಮದ್‌ಖಾನ್, ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ, ಆಂಧ್ರಪ್ರದೇಶ ರಾಜ್ಯದ ನೀರಾವರಿ ಸಚಿವರಾದ ನಿಮ್ಮಳರಾಯ ನಾಯ್ಡು, ಹಣಕಾಸು ಸಚಿವರಾದ ಪಯ್ಯಾವುಲ ರಾಸವಾ, ಸಂಸದರಾದ ಕೆ.ರಾಜಶೇಖರ ಹಿಟ್ನಾಳ್, ಈ.ತುಕಾರಾಮ, ಶಾಸಕರುಗಳಾದ ಕೆ.ರಾಘವೇಂದ್ರ ಹಿಟ್ನಾಳ, ಹೆಚ್.ಆರ್.ಗವಿಯಪ್ಪ, ಡಾ.ಶ್ರೀನಿವಾಸ ಎನ್.ಟಿ., ಕೃಷ್ಣ ನಾಯ್ಕ, ಎಂ.ಪಿ. ಲತಾ ಮಲ್ಲಿಕಾರ್ಜುನ, ಹಂಪನಗೌಡ ಬಾದರ್ಲಿ, ಬಸವನಗೌಡ ತುರ್ವಿಹಾಳ, ಜೆ.ಎನ್.ಗಣೇಶ್, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನ್ ರಾಜ್, ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನ್‌ರಾಜ್ ಸಿಂಗ್, ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್, ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ವಿಜಯನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ, ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಲೋಕೇಶ್ ಕುಮಾರ್, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ಧಿ, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿಬಾಬು ಬಿ.ಎಲ್., ಕೊಪ್ಪಳ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ, ವಿಜಯನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಂ ಪಾಶಾ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹೊಸಪೇಟೆ ಉಪ ವಿಭಾಗಾಧಿಕಾರಿಗಳಾದ ವಿವೇಕಾನಂದ ಸೇರಿದಂತೆ ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು, ರೈತ ಮುಖಂಡರು, ಆಂದ್ರಪ್ರದೇಶ ರಾಜ್ಯದ ಶಾಸಕರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top