ರಾಯಚೂರು: ತರಬೇತಿಗೆ ಬಂದಿದ್ದ ಶಿಕ್ಷಕಿಯ ಜೊತೆ ಅನುಚಿತವಾಗಿ ವರ್ತಿಸಿ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದ ಮೇಲೆ ಶಾಲೆಯ ಪ್ರಭಾರ ಪ್ರಾಚಾರ್ಯಗೆ ಜನರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಹೊರವಲಯದಲ್ಲಿರುವ ಯರಮರಸನ ಆದರ್ಶ ವಿದ್ಯಾಲಯದಲ್ಲಿ ನಡೆದಿದೆ
ರಾಯಚೂರಿನ ಯರಮರಸ್‌ನ ಆದರ್ಶ ವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ಪ್ರಭಾರ ಪ್ರಾಚಾರ್ಯ ಮೆಹಬೂಬ್ ಅಲಿ ಮೇಲೆ ಶಿಕ್ಷಕಿಯ ಕಡೆಯವರು ಬಟ್ಟೆ ಹರಿದು ಮನಸೋ ಇಚ್ಛೆ ಥಳಿಸಿದ್ದಾರೆ. ತರಬೇತಿಗೆಂದು ಈ ಶಾಲೆಗೆ ಶಿಕ್ಷಕಿಯೊಬ್ಬರು ಬಂದಿದ್ದರು. ಆಕೆಯ ಜೊತೆ ಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ ಅನುಚಿತವಾಗಿ ವರ್ತಿಸಿದ್ದರು ಎನ್ನಲಾಗಿದೆ.
ಶಿಕ್ಷಕಿ ಆರೋಪಿಸುವ ಪ್ರಕಾರ ರಾಯಚೂರಿನ ಯರಮರಸ್‌ನ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ ರಾತ್ರಿ ಮಲಗೋದಕ್ಕೆ ಬಾ 10 ಸಾವಿರ ಕೊಡುತ್ತೇನೆ ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ತರಬೇತಿಗೆ ಬಂದಿದ್ದ ಶಿಕ್ಷಕಿ ತನ್ನ ಕಡೆಯವರಿಗೆ ತಿಳಿಸಿದ್ದಾರೆ. ಇದರಿಂದ ಶಾಲೆಗೆ ಬಂದ ಶಿಕ್ಷಕಿಯ ಕಡೆಯವರು ಆದರ್ಶ ವಿದ್ಯಾಲಯ ಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಅಲಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ವೇಳೆ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದು, ಅದರಂತೆ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದು ಕ್ಷಮಾಪಣೆ ಕೇಳಿದ್ದಾರೆ. ಅಷ್ಟೇ ಅಲ್ಲದೇ, ಶಿಕ್ಷಕಿಗೆ ಕ್ಷಮಾಪಣೆ ಪತ್ರವನ್ನು ಬರೆದಿದ್ದು, ಅದರಲ್ಲಿ, ತಾನು ಈ ರೀತಿ ಅನಾವಶ್ಯಕವಾಗಿ ಮೆಸೇಜ್ ಮಾಡಿದ್ದು, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ, ಮಾಡಿದರೆ ನನಗೆ ಶಿಕ್ಷೆ ಕೊಡಬಹುದು ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆದರ್ಶ ವಿದ್ಯಾಲಯ ಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ ತರಬೇತಿಗೆ ಬಂದಿದ್ದ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಮಾಡಿರುವ ಆರೋಪದ ವಿಚಾರದಲ್ಲಿ ಸಾರ್ವಜನಿಕರು ಹಲ್ಲೆ ಮಾಡಿದ್ದಾರಾದರೂ, ಶಿಕ್ಷಕ ತನಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರ ಬಗ್ಗೆಯಾಗಲಿ ಅಥವಾ ಶಿಕ್ಷಕನಿಗೆ ಹಲ್ಲೆ ಮಾಡಿದ್ದರ ಬಗ್ಗೆಯಾಗಲಿ ಯಾವುದೇ ರೀತಿಯ ದೂರು ಗ್ರಾಮೀಣ ಠಾಣೆಯಲ್ಲಾಗಲಿ, ಮಹಿಳಾ ಠಾಣೆಯಲ್ಲಾಗಲಿ ದಾಖಲಾಗಿಲ್ಲ.