ಕೃಷಿ ಪಂಪ್ ಸೆಟ್ ಗಳಿಗೆ 7 ತಾಸು ವಿದ್ಯುತ್ ಒದಗಿಸಲು 1181 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ – ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಬಿ. ಮಹಾಂತೇಶ್

ಬೆಂಗಳೂರು: ನವೀಕೃತ ಇಂಧನ ವಲಯದ ಉತ್ಪಾದಕರು, ಪರಿಕರಗಳ ಉತ್ಪಾದಕರ ಸಂಘ, ತಂತ್ರಜ್ಞಾನ ಪೂರೈಕೆದಾರರು ಮತ್ತು ಸಮಾಲೋಚಕರ ಸಹಯೋಗದಲ್ಲಿ ಬಿಐಇಸಿಯಲ್ಲಿ ಮೂರು ದಿನಗಳ 2 ನೇ ಅಂತರರಾಷ್ಟ್ರೀಯ ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೋಗೆ ಅದ್ದೂರಿ ಚಾಲನೆ ನೀಡಲಾಯಿತು. 

ಈ ಬಾರಿ ಬೆಸ್ಕಾಂ, ಕ್ರೆಡೆಲ್ ಒಳಗೊಂಡಂತೆ 100 ಕ್ಕೂ ಅಧಿಕ ಸರ್ಕಾರಿ ಸಂಸ್ಥೆಗಳು ಮೇಳಕ್ಕೆ ಬೆಂಬಲ ನೀಡಿವೆ. ನವೀಕೃತ ಇಂಧನ ಮತ್ತು ವಿದ್ಯುನ್ಮಾನ ವಾಹನಗಳ ಸಂಘ, ಎಮ್ ವೀ ಸೋಲಾರ್ ಸಿಸ್ಟಮ್ಸ್ ಪ್ರವೈಟ್ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಲಾದ ಮೇಳಕ್ಕೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಮಹಾಂತೇಶ್ ಚಾಲನೆ ನೀಡಿ ಮಾತನಾಡಿ, ಇಂಧನ ಇಲಾಖೆ ಹಸಿರು ಇಂಧನಕ್ಕೆ ಒತ್ತು ನೀಡಿದ್ದು, ಕುಸುಮ್ ಯೋಜನೆಯಡಿ 1181 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. 

ಈ ಪೈಕಿ 371 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಅಂತಿಮಗೊಳಿಸಲಾಗಿದೆ. 379 ಮೆಗಾವ್ಯಾಟ್ ಗೆ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ರೈತರಿಗೆ ಹಗಲು ಹೊತ್ತಿನಲ್ಲಿ 7 ತಾಸು ವಿದ್ಯುತ್ ನೀಡಲು ಸಹಕಾರಿಯಾಗಲಿದೆ. ಮನೆಗಳಲ್ಲಿ ಮೇಲ್ಛಾವಣಿ ಮೇಲೆ ಸೌರ ವಿದ್ಯುತ್ ಅಳವಡಿಸಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 300 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿವೆ ಎಂದರು. 

ಹೈದರಾಬಾದ್ ನ ಮೀಡಿಯಾ ಡೇ ಮಾರ್ಕೇಟಿಂಗ್ ನಿರ್ದೇಶಕ ಮೊಹಮದ್ ಮುದಸ್ಸಿರ್ ಮಾತನಾಡಿ, ನೂರಕ್ಕೂ ಅಧಿಕ ಜಾಗತಿಕ ಮತ್ತು ರಾಷ್ಟ್ರೀಯಮಟ್ಟದ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿವೆ. ಇನ್ನಷ್ಟು ಪಾಲುದಾರರನ್ನು ಸೇರಿಸಿಕೊಂಡು ಮೇಳವನ್ನು ಯಶಸ್ವಿಗೊಳಿಸಲಾಗುತ್ತಿದೆ. ನವೀಕೃತ ಇಂಧನಕ್ಕೆ ಸರ್ಕಾರ ಸಬ್ಸಡಿ ಪ್ರಕಟಿಸಿದ್ದು, ಸರ್ಕಾರದ ವಿವಿಧ ಸಂಸ್ಥೆಗಳು ಸಹ ಬೆಂಬಲ ನೀಡಿವೆ. ನವೀಕೃತ ಇಂಧನ ವಲಯದಲ್ಲಿ ಹೊಸ ತಂತ್ರಜ್ಞಾನ ಪ್ರದರ್ಶಿಸುತ್ತಿದ್ದು,  ಈ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಪಳೆಯುಳಿಕೆ ಇಂಧನ ಸಂರಕ್ಷಿಸಿ ನವೀಕೃತ ಇಂಧನ ಬಳಕೆಗೆ ಒತ್ತು ನೀಡುವುದು ಮೇಳದ ಉದ್ದೇಶವಾಗಿದೆ ಎಂದರು. 

ಎಂ.ಎಸ್.ಐ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕುಮಾರ್, ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ. ರುದ್ರಪ್ಪಯ್ಯ, ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್,  ಫೆರ್ರಿ ಸಂಸ್ಥೆ ಅಧ್ಯಕ್ಷ ರಮೇಶ್ ಶಿವಣ್ಣ, ಪ್ರೈಡ್ ನವೀಕೃತ ಇಂಧನ ಸಂಸ್ಥೆಯ ನಿರ್ದೇಶಕ ಎ.ಸಿ. ಈಶ್ವರ್ ಮೀಡಿಯಾ ಡೇ ಮಾರ್ಕೇಟಿಂಗ್ ನಿರ್ದೇಶಕರಾದ ರಾಮ್ ಸೌಂದಲ್ಕರ್, ಮೊಹಮದ್ ಮುದಸ್ಸಿರ್ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top