ಮರಿಯಮ್ಮನಹಳ್ಳಿ,ಫೆ, 22 : ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಮೇಲೆ ಪ್ರಾಚಾರ್ಯರಾದ ಅನುಲ ದೊಡ್ಡಮನಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ ಎಂದು ಆರೋಪಿಸಿ ಮರಿಯಮ್ಮನಹಳ್ಳಿ ಸಮೀಪದ ತಿಮ್ಮಲಾಪುರ ಮೊರಾರ್ಜಿ ವಸತಿ ಶಾಲೆಯಲ್ಲಿ ಪೋಷಕರು ಪ್ರಾಚಾರ್ಯರ ವಿರುದ್ದ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಘಟನೆ ಸೋಮವಾರ ಜರುಗಿತು. ಕಳೆದ ಗುರುವಾರ 17ರಂದು ಹಲ್ಲೆಗೊಳಗಾದ ವಿದ್ಯಾರ್ಥಿ ವಸತಿ ಶಾಲೆಯಲ್ಲಿ ಊಟ ಸರಿಯಿಲ್ಲ ಎಂದು ಪಕ್ಕದ ಹೆದ್ದಾರಿಯಲ್ಲಿನ ಟೋಲ್‍ಗೇಟ್ ಬಳಿ ಎಗ್‍ರೈಸ್ ತಿನ್ನಲು ಹೋದಾಗ ಅಲ್ಲಿ ಅಲ್ಲಿನ ಬೇರೆ ವ್ಯಕ್ತಿಗಳು ವಿದ್ಯಾರ್ಥಿ ಪೋಟೋ ತೆಗೆದು ಪ್ರಾಚಾರ್ಯರಿಗೆ ಕೊಟ್ಟಿದ್ದಾರೆ. ಪ್ರಾಚಾರ್ಯರು ನಿಲಯ ಬಿಟ್ಟು ಹೋಗುವುದು ತಪ್ಪು ಎಂದು ಹೊಡೆದಿದ್ದಾರೆ. ಇದಾದ ಮರು ದಿನ ಪ್ರಾಚಾರ್ಯರ ಮಗನು ಇದೇ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿಗು ಪ್ರಾಚಾರ್ಯರ ಮಗನ ನಡುವೆ ಸಣ್ಣ ಕಾರಣಕ್ಕೆ ಜಗಳವಾಗಿದೆ. ಪ್ರಾಚಾರ್ಯ ಮಗನಿಗೆ ಹಲ್ಲೆಗೊಳಗಾದ ವಿದ್ಯಾರ್ಥಿ ಕೆಟ್ಟಪದ ಬಳಕೆ ಮಾಡಿರುವುದಾಗಿ ಅಮ್ಮನಾದ ಪ್ರಾಚಾರ್ಯರಿಗೆ ಮಗ ವಿದ್ಯಾರ್ಥಿ ತಿಳಿಸಿದ್ದು, ಪ್ರಾಚಾರ್ಯರು ಆ ವಿದ್ಯಾರ್ಥಿಗೆ ಹೊಡೆದಿದ್ದಾರೆ. ಈ ಘಟನೆ ವಿದ್ಯಾರ್ಥಿ ತನ್ನ ತಾಯಿಗೆ ಪೋನ್ ಮಾಡಿ ತಿಳಿಸಿದಾಗ ತಾಯಿ ಬಂದು ಪ್ರಾಚಾರ್ಯರಿಗೆ ಯಾಕೆ ಅಂತ ವಿಚಾರಿಸಿದಾಗ ಪ್ರಾಚಾರ್ಯರು ವಿದ್ಯಾರ್ಥಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಆಕೆ ಹೋದ ನಂತರ ನಿನ್ನೆ ಭಾನುವಾರ ರಾತ್ರಿ ಪೋಷಕರಿಗೆ ತಿಳಿಸುತ್ತೀಯಾ ಎಂದು ಮತ್ತೆ ಹೊಡೆದಿದ್ದಾರೆ. ಇದನ್ನು ಖಂಡಿಸಿ ಪೋಷಕರು ಊರಿನ ಮುಖ್ಯಸ್ಥರನ್ನು ಕರೆದುಕೊಂಡು ಬಂದು ಶಾಲೆಯಲ್ಲಿ ವಿರೋಧಿಸಿದ್ದಾರೆ. ವಿಷಯ ತಿಳಿದ ಸಮಾಜ ಕಲ್ಯಾಣಾಧಿಕಾರಿ ವಸತಿ ಶಾಲೆಗೆ ಆಗಮಿಸಿದ್ದು ಪೋಷಕರ ಮತ್ತು ಪ್ರಾಚಾರ್ಯರ ನಡುವೆ ಮಾತುಕತೆ ನಡೆಸಿದ್ದಾರೆ. ನಂತರ ಪೋಷಕರ ಒತ್ತಾಯದ ಮೇರೆಗೆ ವಿದ್ಯಾರ್ಥಿಯನ್ನು ಗುಡೆಕೋಟೆಯ ವಸತಿಶಾಲೆಗೆ ವರ್ಗಾಯಿಸಲಾಗುವುದು ಮತ್ತು ಪ್ರಾಚಾರ್ಯರ ಕೃತ್ಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ಮರಿಯಮ್ಮನಹಳ್ಳಿಯ ಪಿಎಸ್‍ಐ ಹನುಮಂತಪ್ಪ ತಳವಾರ ಅವರಿಗೆ ಪೋಷಕರು ಪ್ರಾಚಾರ್ಯರು ವಸತಿ ನಿಲಯದೊಳಗೆ ಕಾನೂನು ಬಾಹಿರವಾಗಿ ಹೊರಗಿನ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗೆ ಧಮಕಿ ಆಕಿಸಿದ್ದು ಪ್ರಾಚಾರ್ಯರಿಗೆ ಎಚ್ಚರಿಕೆ ನೀಡುವಂತೆ ತಿಳಿಸಿದರು. ಅವರ ಮೇಲೆ ಪ್ರಕರಣ ದಾಖಲಿಸದಂತೆ ಮುಚ್ಚಳಿಕೆ ಬರೆದು ಕೊಟ್ಟಿದ್ದು, ಸಮಾಜ ಕಲ್ಯಾಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಎಎಸ್‍ಐ ನಿರಂನಗೌಡ, ಪೇದೆಗಳಾದ ಕೊಟ್ರೇಶ ಅಂಗಡಿ, ಪ್ರವೀಣ್, ಸರಕಾರಿ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ. ಮಾರ್ಗದಪ್ಪ, ಮಕ್ಕಳ ಸಹಾಯವಾಣಿ ಕೂಡ್ಲಿಗಿಯ ಎರ್ರಿಸ್ವಾಮಿ, ಹಲ್ಲೆಗಳೊಗಾದ ವಿದ್ಯಾರ್ಥಿ ಪಾಲಕ, ಪೋಷಕರು ಹಾಗೂ ಕೂಡ್ಲಿಗಿ ತಾಲೂಕಿನ ಪೂಜಾರಳ್ಳಿ ತಾಂಡದ ಗ್ರಾಮದ ಮುಖ್ಯಸ್ಥರು ಇದ್ದರು.