ಅ.ದೇವೇಗೌಡರೇ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ; ಬೇರೆಯವರು ಪ್ರಚಾರದಲ್ಲಿ ದೇವೇಗೌಡರು, ನನ್ನ ಹೆಸರು ಬಳಸಿದರೆ ಕಾನೂನು ಕ್ರಮ: ಹೆಚ್ಡಿಕೆ

ಬೆಂಗಳೂರು: ಪ ದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅ.ದೇವೇಗೌಡರು ಮಾತ್ರ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ. ಉಳಿದ ಅಭ್ಯರ್ಥಿಗಳಿಗೂ ನಮಗೂ ಸಂಬಂಧವಿಲ್ಲ. ಆದರೆ, ನಮ್ಮ ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲದ ಚನ್ನಪಟ್ಟಣದ ಪುಟ್ಟಸ್ವಾಮಿ ಎನ್ನುವರು ನನ್ನ ಮತ್ತು ದೇವೆಗೌಡರ ಚಿತ್ರಗಳನ್ನು ಕರಪತ್ರಗಳಲ್ಲಿ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿದೆ. ಅಲ್ಲದೇ, ನಾನು ಮತ್ತು ದೇವೇಗೌಡರು ತಮ್ಮನ್ನು ಆಶೀರ್ವದಿಸಿದ್ದಾರೆ ಎಂದು ಅವರು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ರೀತಿ ನಾನಾಗಲಿ, ದೇವೇಗೌಡರಾಗಲಿ ಯಾರಿಗೂ ಬೆಂಬಲ ನೀಡಿರುವುದಿಲ್ಲ. ಅವರು ತಕ್ಷಣ ನಮ್ಮ ಹೆಸರು, ಭಾವಚಿತ್ರಗಳನ್ನು ಬಳಸುವುದನ್ನು ನಿಲ್ಲಿಸಬೇಕು. ತಪ್ಪಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ಸಭೆಯ ಗಮನಕ್ಕೆ ಈ ವಿಷಯ ತಂದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ; ಔಟ್ಟಸ್ವಾಮಿಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ದೇವೇಗೌಡರು, ಕುಮಾರಸ್ವಾಮಿ ಅವರ ಹೆಸರಿನಲ್ಲಿ ಮತಯಾಚನೆ ಮಾಡುವುದು ಅಪರಾಧ ಎಂದು ಎಚ್ಚರಿಕೆ ಕೊಟ್ಟರು.

ವಿಧಾನಸಭೆ ಪ್ರತಿಪಕ್ಷ ನಾಯಕರಾದ ಆರ್ ಅಶೋಕ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟು ಹದಗೆಟ್ಟು ಹೋಗಿದೆ ಎಂದರೆ, ಹೋಮ್ ಮಿನಿಸ್ಟರ್ ಯಾರು ಅನ್ನೋದೇ ಗೊತ್ತಾಗ್ತಾ ಇಲ್ಲ.  ಹೆಣ್ಣು ಮಕ್ಕಳು ಶಾಲೆಗೆ ಹೋದರೆ, ಮಹಿಳೆಯರು ಕೆಲಸಕ್ಕೆ ಹೋದರೆ ಮನೆಗೆ ವಾಪಸ್ ಬರುವ ಗ್ಯಾರಂಟಿಯೇ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವರಾಮೇಗೌಡ ಎನ್ನುವ ವ್ಯಕ್ತಿ ಹೇಳುತ್ತಾನೆ.. ಮೋದಿಗೆ ಹೇಳಿ ಜೆಡಿಎಸ್ -ಬಿಜೆಪಿ ಭಾಗ ಮಾಡಿಬಿಟ್ಟರೆ ನಮಗೆ ಒಳ್ಳೆಯದು. ಇವರೆಂಥಾ ಚಂಡಾಳರು ಎನ್ನುವುದು ಇದರಿಂದ ಗೊತ್ತಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆವರೆಗೂ ಇವರು ಒಂದಾಗಿದ್ದರೆ ನಮಗೆ ಉಳಿಗಾಲ ಇಲ್ಲ ಎನ್ನುವುದು ಅವರ ಹೆದರಿಕೆ ಎಂದು ಅವರು ಲೇವಡಿ ಮಾಡಿದರು.

ಇವರು ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದರು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಶೋಕ್ ಅವರು; ಕೆಲಸ ಆಗಬೇಕಾದರೆ ಕೈ ಎತ್ತು. ಕೆಲಸ ಆದ ಮೇಲೆ ಚೂರಿ ಹಾಕು. ಇದೇ ಕಾಂಗ್ರೆಸ್ ನೀತಿ. ನಾನು ಹದಿನಾಲ್ಕು ತಿಂಗಳು ದುಷ್ಟರ ಸಹವಾಸ ಮಾಡಿದ್ದೆ, ಅವರನ್ನು ನನ್ನನ್ನು ಕ್ಲರ್ಕ್, ಜವಾನನ ರೀತಿ ನಡೆಸಿಕೊಂಡರು ಎಂದರು.

 

ಕಾಂಗ್ರೆಸ್ ಸರಕಾರ ಎಲ್ಲ ಕಡೆ ಲೂಟಿ ಮಾಡುತ್ತಿದೆ. ಈಗ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಮಾರಾಟಕ್ಕೆ ಇಟ್ಟಿದೆ. ಹಿಂದೆ ಲಕ್ಷ್ಮಣರಾವ್ ಅವರಂಥ  ಮಹಾನುಭಾವರು ಇವನ್ನೆಲ್ಲ ಕಾಪಾಡಿಕೊಂಡು ಬಂದಿದ್ದರು. ಸರ್ಕಾರದಲ್ಲಿ ಹಣ ಇಲ್ಲ. ಅವರ ವರಿಷ್ಠರಿಗೆ ಕಪ್ಪ ಕೊಡಲು ಇಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಅಶೋಕ್ ಟೀಕಿಸಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ; ಕಾಂಗ್ರೆಸ್ ಮುಕ್ತ ಕರ್ನಾಟಕವೇ ಈ ಮೈತ್ರಿ ಉದ್ದೇಶ. ಎರಡೂ ಪಕ್ಷಗಳ ಉದ್ದೇಶ ಒಂದೇ, ಕಾಂಗ್ರೆಸ್ ವಿರೋಧಿ ನೀತಿ. ಹೀಗಾಗಿ ನಾವು ಒಂದಾಗಿದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮೋದಿ ಅವರು ಈ ಮೈತ್ರಿಗೆ ಕಾರಣರು ಎಂದರು.

ಸಮೃದ್ಧ ಕರ್ನಾಟಕ ನಿರ್ಮಾಣ ಈ ಮೈತ್ರಿಕೂಟದಿಂದ ಸಾಧ್ಯ. ಕಾಂಗ್ರೆಸ್ ಎದುರಿಸಲು ನಾವು ಒಂದಾಗಿದ್ದೇವೆ. ಕುಮಾರಸ್ವಾಮಿ ಅವರ ಪ್ರೀತಿಗೆ ನಾವು ಪೂರ್ಣವಾಗಿ ಸೋತಿದ್ದೇವೆ. ನಮ್ಮನ್ನೆಲ್ಲ ಪ್ರೀತಿಯಿಂದ ಕರೆದು ಮಾತನಾಡಿದ್ದಾರೆ. ಜನರು ಕಾರ್ಯಕರ್ತರು ನಮ್ಮನ್ನು ಒಪ್ಪಿದ್ದಾರೆ. ಮೊದಲ ಪರೀಕ್ಷೆಯಲ್ಲಿ ನಾವು ಪಾಸಾಗುತ್ತೇವೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಬರ ನಿರ್ವಹಣೆ, ಆರೋಗ್ಯ, ಮೂಲ ಸೌಕರ್ಯದಲ್ಲಿಯೂ ವಿಫಲವಾಗಿದೆ ಈ ಸರ್ಕಾರ. ಕೇವಲ ಒಂದು ಸಮುದಾಯವನ್ನು ತುಷ್ಟೀಕರಣ ಮಾಡುತ್ತಿದೆ. ಕೊಲೆ ಸುಲಿಗೆ, ಅತ್ಯಾಚಾರದಂತ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ನವರು ಭಂಡತನದವರು, ಅವರಿಗೆ ಸೂಕ್ಷ್ಮತೆಯೇ ಇಲ್ಲ. ಅವರ ಐವತ್ತು ವರ್ಷದ ಅನುಭವ ಬರೀ ಭಾಷಣದ ಹಾವಭಾವ ಸೀಮಿತವಾಗಿ, ಸಮಾಜ ಒಡೆಯುವುದಕ್ಕೆ ಮಾತ್ರ ಮೀಸಲಾಗಿದೆ ಎಂದು ದೂರಿದರು.

 

ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಮುನಿರತ್ನ, ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಡಾ.ಶ್ರೀನಿವಾಸಮೂರ್ತಿ, ಎ.ಮಂಜುನಾಥ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ರಾಜ್ಯ ಮಹಿಳಾ ಜೆಡಿಎಸ್ ಅಧ್ಯಕ್ಷೆ ರಶ್ಮಿ ರಾಮೇಗೌಡ, ನಾರಾಯಣ ಸ್ವಾಮಿ (ರಾಜರಾಜೇಶ್ವರಿ ನಗರ), ಹಿರಿಯ ನಾಯಕರಾದ ಅಂದಾನಯ್ಯ,  ಗಂಗಾಧರ ಮೂರ್ತಿ, ಆರ್.ಪ್ರಕಾಶ್, ರಾಜಣ್ಣ, ತಿಮ್ಮೇಗೌಡ, ಜವರಾಯಿ ಗೌಡ, ಶೈಲಜಾ ರಾವ್, ರೋಷನ್ ಅಬ್ಬಾಸ್ ಸೇರಿ ಎರಡೂ ಪಕ್ಷಗಳ ಅನೇಕ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top