v ನಂಜುಂಡಪ್ಪ ವಿ.
ಬೆಂಗಳೂರು: ಸುಸಂಸ್ಕೃತ ಮತ್ತು ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕದಲ್ಲಿ ಇದೀಗ ಹಗರಣಗಳದ್ದೇ ಸದ್ದು. ಬಹುತೇಕ ಪ್ರತಿಯೊಬ್ಬರ ಮೇಲೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಪರಸ್ಪರ ಆರೋಪ, ಪ್ರತ್ಯಾರೋಪ. ವೈಯಕ್ತಿಕ ಮಟ್ಟಕ್ಕಿಳಿದ ಟೀಕೆ ಟಿಪ್ಪಣಿಗಳಿಂದ ರಾಜ್ಯದಲ್ಲಿ ಅಸಹನೀಯ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಪ್ರವಾಹವೇ ಹರಿಯುತ್ತಿದೆ.
ಮುಡಾ ನಿವೇಶನ ಹಂಚಿಕೆ ಹಗರಣ ಕುರಿತು ಕಳೆದ ಒಂದು ವಾರದಿಂದ ನಡೆದ ಬಿಜೆಪಿ ? ಜೆಡಿಎಸ್ ನ ನೇತೃತ್ವದ ಪಾದಯಾತ್ರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಡೆಸಿದ ಜನಾಂದೋಲನ ಸಮಾವೇಶಗಳು ಏನನ್ನೂ ಸಾಧಿಸಿಲ್ಲ. ಇವೆಲ್ಲವೂ ನಿರರ್ಥಕವೆಂಬಂತೆ ಭಾಸವಾಗಿದೆ. ಆದರೆ ಕರ್ನಾಟಕದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭ್ರಷ್ಟ ರಾಜಕಾರಣಿಗಳಿದ್ದಾರೆಯೇ ಎಂಬ ಕಳವಳ ವ್ಯಕ್ತವಾಗಿದೆ.
ಆದರೆ ಒಂದು ವಾರದ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿ ? ಜೆಡಿಎಸ್ ಗಿಂತ ಆಡಳಿತ ಪಕ್ಷವೇ ಒಂದು ಹೆಜ್ಜೆ ಮೇಲುಗೈ ಸಾಧಿಸಿರುವುದು ಕಂಡು ಬಂದಿದೆ. ವಿಶೇಷವಾಗಿ ಬಿಜೆಪಿಯಲ್ಲಿ ಪಾದಯಾತ್ರೆಗೆ ಪೂರ್ಣ ಪ್ರಮಾಣದಲ್ಲಿ ಸ್ಥಳೀಯ ನಾಯಕರ ಬೆಂಬಲ ದೊರೆತಿಲ್ಲ. ಬಿಜೆಪಿ ಹೈಕಮಾಂಡ್ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಈ ವೇಳೆಗಾಗಲೇ ಸದ್ದು ಮಾಡಬೇಕಾಗಿದ್ದ ರಾಜಭವನ ಕೂಡ ತಣ್ಣಗೆ ಮಲಗಿದೆ. ಕಾಂಗ್ರೆಸ್ ನ ಪ್ರತಿತಂತ್ರಗಳು, ಲೆಕ್ಕಾಚಾರಗಳು ಸ್ಪಲ್ಟಮಟ್ಟಿಗೆ ಗುರಿ ಮುಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬಿಜೆಪಿ-ಜೆಡಿಎಸ್ ಅಧಿಕಾರದಲ್ಲಿದ್ದಾಗ ನಡೆದಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆಡಳಿತ ಪಕ್ಷದ ವಿರುದ್ಧ ಮೈತ್ರಿ ಪಕ್ಷಗಳು ಮುಗಿಬಿದ್ದಿವೆ. ಹಾಗೆ, ನೋಡಿದರೆ, ಮುಡಾ ಅಕ್ರಮ ನಡೆದಿರುವುದು ಬಿಜೆಪಿ ಸರ್ಕಾರದ ಸಮಯದಲ್ಲೇ ಎಂಬುದು ವಿಶೇಷವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅಕ್ರಮವಾಗಿ ಮುಡಾದಿಂದ ನಿವೇಶನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಕಾನೂನು, ಭೂಸ್ವಾಧೀನ, ನಿವೇಶನ ಹಂಚಿಕೆ ಕುರಿತಂತೆ ಮಾಹಿತಿ ಉಳ್ಳವರು ಅಲ್ಲಿ ಯಾವ ಅಕ್ರಮವೂ ನಡೆದಿಲ್ಲ. ಈ ಪಾದಯಾತ್ರೆ ಬಿಜೆಪಿ ನಾಯಕರ ಕುತಂತ್ರ ಎನ್ನುತ್ತಿದ್ದಾರೆ. ಬಿಜೆಪಿಯವರೇ ನೇಮಿಸಿದ್ದ ಮುಡಾ ಅಧ್ಯಕ್ಷರು, ಆಯುಕ್ತರು ಹಾಗೂ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಶಾಸಕರೂ ಇದ್ದ ಸಭೆಯಲ್ಲಿ ಮುಖ್ಯಮಂತ್ರಿಯವರ ಪತ್ನಿಗೆ ನಿವೇಶನ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ. ಅವರು ಯಾವುದೇ ಪತ್ರ ಬರೆದಿಲ್ಲ. ಕಡತಕ್ಕೆ ಸಹಿ ಹಾಕಿಲ್ಲ. ಅಧಿಕೃತವಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಹೀಗಾಗಿ ಹೋರಾಟ ತನ್ನ ತೀವ್ರತೆ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ.
ಬಿಜೆಪಿ-ಜೆಡಿಎಸ್ನವರ ಈ ಪಾದಯಾತ್ರೆ ಕಾನೂನಾತ್ಮಕವಾಗಿಯೂ ಅಥವಾ ಅವರ ಪಕ್ಷ ಸಂಘಟನೆಯ ದೃಷ್ಟಿಯಿಂದಲೂ ಅಥವಾ ರಾಜಕೀಯವಾಗಿಯೂ ಯಾವುದೇ ಪ್ರಯೋಜನವನ್ನು ತಂದುಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ, ಬಿಜೆಪಿ-ಜೆಡಿಎಸ್ನವರೇ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಆ ಗಲಾಟೆ ಹಾಗೆಯೇ ಮುಂದುವರೆದಿದೆ. ಇನ್ನು, ಈ ಪಾದಯಾತ್ರೆಗೆ ಹೆಚ್ಚಿನ ಜನ ಬೆಂಬಲವೂ ದೊರೆತಿಲ್ಲ.
ಬಿಜೆಪಿ ನಾಯಕರು ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ತಮ್ಮ ನೆಲೆಯನ್ನು ಹೆಚ್ಚಿಸಿಕೊಳ್ಳಲು ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ, ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಹಾಗೂ ಕೆರಗೋಡು ಭಗವಾಧ್ವಜ ವಿಚಾರದಲ್ಲಿ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಅದು ಫಲಕೊಡಲಿಲ್ಲ. ಈಗ, ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿದೆ. ವಾಸ್ತವವಾಗಿ ಬಿಜೆಪಿ ಒಳ ವಲಯದಲ್ಲೇ ಈ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿಲ್ಲ.
ಬಿಜೆಪಿ ನಾಯಕರು ಆರಂಭಿಸಿದ ಈ ಪಾದಯಾತ್ರೆ ಬಿಜೆಪಿ-ಜೆಡಿಎಸ್ಗಿಂತ ಕಾಂಗ್ರೆಸ್ಗೆ ಹೆಚ್ಚು ಉಪಯೋಗವಾಗಿದೆ. ಕಾಂಗ್ರೆಸ್ ನ ಜನಾಂದೋಲನ ಸಮಾವೇಶಗಳ ಹೆಸರಿನಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಸರ್ಕಾರ ರಚನೆಯಾದಾಗಿನಿಂದಲೂ ಆಂತರಿಕ ಅಸಮಾಧಾನ, ಭಿನ್ನಾಭಿಪ್ರಾಯ, ಡಿಸಿಎಂ ಹುದ್ದೆಗಳ ಕಿತ್ತಾಟದಲ್ಲಿ ನಿರತರಾಗಿದ್ದ ಕಾಂಗ್ರೆಸ್ ನಾಯಕರು, ಸಚಿವರು ಈಗ ಮೈಕೊಡವಿ ಎದ್ದಿದ್ದಾರೆ. ಸರ್ಕಾರದ ಕೆಲಸಗಳು ಹಾಗೂ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಮಿಗಿಲಾಗಿ, ಒಗ್ಗಟ್ಟಿನ ಪ್ರದರ್ಶನ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ಹಾತೊರೆಯುತ್ತಿದ್ದ ಡಿ.ಕೆ ಶಿವಕುಮಾರ್ ಅವರೇ ಈಗ ಸಿದ್ದರಾಮಯ್ಯ ಪರವಾಗಿ, ಅವರ ಕುರ್ಚಿ ಉಳಿಸಲು ಬೀದಿಗಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಗೆ ಲಾಭವಾಗಿದೆ.
ಒಳಜಗಳಗಳಿಂದ ಅಲುಗಾಡುತ್ತಿದ್ದ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಈಗ ಮತ್ತಷ್ಟು ಭದ್ರವಾಗುತ್ತಿದೆ. ಸಿದ್ದರಾಮಯ್ಯ ಪರವಾಗಿ ಎಲ್ಲ ಸಚಿವರು – ನಾಯಕರೂ ಒಗ್ಗೂಡಿದ್ದಾರೆ. ಇಷ್ಟೆಲ್ಲಾ ಆದರೂ ಬಿಜೆಪಿ ರಾಷ್ಟ್ರ ನಾಯಕರು ಈ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಹತ್ತು ಮಂದಿ ಬೆಳಗಾವಿಯಲ್ಲಿ ಸಭೆ ನಡೆಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇತ್ತೀಚಿಗಷ್ಟೇ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ನಾಯಕರ ಧೋರಣೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹ ಸಭೆಯಲ್ಲಿ ಭಾಗಿಯಾಗಿದ್ದು ವಿಶೇಷ. ಸಭೆಯಲ್ಲಿ ಪಾದಯಾತ್ರೆ ವೈಫಲ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ಗಮನಾರ್ಹವಾದದ್ದು.
ಮತ್ತೊಂದೆಡೆ ಸಿದ್ದರಾಮಯ್ಯ ವಿರುದ್ದದ ನಿರ್ಣಾಯಕ ಹೋರಾಟಕ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿಯ ಹೈಕಮಾಂಡ್ ಬೆಂಬಲ ದೊರೆತಿಲ್ಲ. ದಿಲ್ಲಿಯ ಯಾವುದೇ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿಲ್ಲ. ಬೇರೆ ರಾಜ್ಯಗಳಲ್ಲಿ ಒಂದು ಸಣ್ಣ ಅವಕಾಶ ದೊರೆತಿದ್ದರೂ ಅನ್ಯ ಪಕ್ಷಗಳ ಮುಖ್ಯಮಂತ್ರಿ ಖುರ್ಚಿ ಅಲುಗಾಡುತ್ತಿತ್ತು. ಆದರೆ ರಾಜ್ಯದಲ್ಲಿ ಅಂತಹ ಪ್ರಯತ್ನ ನಡೆಯುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ್ದು, ರಾಜ್ಯದ ಕಾಂಗ್ರೆಸ್ ನಾಯಕರು ಒಗ್ಗಟ್ಟು ಮೆರೆದಿದ್ದಾರೆ.
ಇಷ್ಟೆಲ್ಲಾ ಆದರೂ ರಾಜ್ಯಪಾಲರ ನಡೆ ಏನು ಎನ್ನುವ ಕುತೂಹಲ ಕೆರಳಿಸಿದೆ. ವರ್ಷಗಟ್ಟಲೇ ಹಲವಾರು ಅರ್ಜಿಗಳನ್ನು ತಮ್ಮ ಟೇಬಲ್ ಕೆಳಗೆ ಇಟ್ಟುಕೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಿದ್ದರಾಮಯ್ಯ ವಿರುದ್ಧ ಒಂದು ದೂರು ಬಂದ ತಕ್ಷಣ, ಅದನ್ನು ಪರಿಶೀಲಿಸದೆಯೇ ಅದೇ ದಿನ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು. ಅದೂ, ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ ಸಿದ್ದರಾಮಯ್ಯ ಹೋಗಲಿ, ಅವರ ಹೆಂಡತಿ ಅಥವಾ ಭಾವಮೈದ ಕಾನೂನು ಪ್ರಕಾರ ಅಥವಾ ನೈತಿಕವಾಗಿ ಏನಾದರೂ ತಪ್ಪು ಮಾಡಿದ್ದಕ್ಕೆ ಪುರಾವೆ ಇಲ್ಲದಿರುವಾಗ ರಾಜ್ಯಪಾಲರು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ.
ಜಂತಕಲ್ ಮೈನಿಂಗ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಪ್ರಕರಣದಲ್ಲಿ ದಾವೆ ಹೂಡಲು ರಾಜ್ಯಪಾಲರು ಒಂದು ವರ್ಷದಿಂದ ಅನುಮತಿ ನೀಡದೇ ವಿಳಂಬ ಮಾಡುತ್ತಿರುವ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ಅತ್ಯಂತ ಗಂಭೀರವಾಗಿದೆ. ಹೀಗಾಗಿ ಏನು ಮಾಡಬೇಕೆಂದು ತೋಚದೇ ಸ್ವತಃ ರಾಜ್ಯಪಾಲರು ಮೌನ ವಹಿಸಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ಈ ದೇಶದಲ್ಲಿ ಎಲ್ಲಾ ನಿಯಮ, ಕಾನೂನು, ಸಂಸದೀಯ ನಡವಳಿಕೆಗಳನ್ನು ಗಾಳಿಗೆ ತೂರಿ, ರಾಜ್ಯಪಾಲರಿಂದ ಹಿಡಿದು ತಳಮಟ್ಟದ ಅಧಿಕಾರಿಗಳವರೆಗೆ ಎಲ್ಲರನ್ನೂ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಪ್ರಾಮಾಣಿಕರನ್ನು ಜೈಲಿಗೆ ಹಾಕುತ್ತದೆ. ಕೊಲೆಗಡುಕರನ್ನ ಜೈಲಿಂದ ಬಿಡುಗಡೆ ಮಾಡುತ್ತದೆ. ಅದನ್ನೇ, ಸಿದ್ದರಾಮಯ್ಯ ವಿರುದ್ಧವೂ ಬಿಜೆಪಿ ರಾಜ್ಯಪಾಲರ ಮೂಲಕ ಮಾಡಿಸಲು ನಿರಂತರ ಪ್ರಯತ್ನದಲ್ಲಿ ತೊಡಗಿದೆ.
ಬಿಜೆಪಿ ಹೇಗೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆಯೋ, ಅದೇ ರೀತಿ ಕಾಂಗ್ರೆಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ವಿರುದ್ಧ ೪೦% ಕಮಿಷನ್ ಆರೋಪ ಮಾಡುತ್ತಾ ಅಧಿಕಾರಕ್ಕೆ ಬಂದ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಒಂದಾದರೂ ಕ್ರಮ ತಗೊಂಡಿಲ್ಲ. ಕಾಂಗ್ರೆಸ್ ಒಳ್ಳೆಯ ಆಡಳಿತ ಕೊಡೋ ಕೆಲಸ ಮಾಡ್ತಾ ಇದೆಯಾ? ಖಂಡಿತಾ ಇಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ, ಎಸ್ಸಿಎಸ್ಪಿ-ಟಿಎಸ್ಪಿ ಹಣ ದುರ್ಬಳಕೆ, ವರ್ಗಾವಣೆಗಳಂತಹ ಹಲವಾರು ಅಕ್ರಮಗಳನ್ನು ನಡೆಸುತ್ತಲೇ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಅಂತಹ ಯಾವುದೇ ಮಹತ್ವದ ಬದಲಾವಣೆ ಕಂಡು ಬಂದಿಲ್ಲ. ಕರ್ನಾಟಕ ದಿನದಿಂದ ದಿನಕ್ಕೆ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು ಒದ್ದಾಡುತ್ತಿರುವುದು ಆತಂಕ ಮೂಡಿಸುತ್ತಿದೆ.