ಬೆಂಗಳೂರು : ರಾಜ್ಯಕ್ಕೆ ಬೆಳಕು ನೀಡುವ ಕೆಪಿಟಿಸಿಎಲ್ ನಲ್ಲಿ ಗುತ್ತಿಗೆದಾರರ ಬಾಕಿ ಪಾವತಿಗೆ ಕಮೀಷ್ ಪಡೆಯುತ್ತಿರುವ ಭ್ರಷ್ಟರ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಗುತ್ತಿಗೆದಾರರ ಹಿತ ರಕ್ಷಣೆ ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ, ಕಾರ್ಮಿಕ ಸಂಘಟನೆಗಳ ಒಕ್ಕೂಟ ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು ಕಾವೇರಿ ಭವನದ ಕೆಪಿಟಿಸಿಎಲ್ ಮುಂಭಾಗ ಪ್ರತಿಭಟನೆ ನಡೆಸಿದವು.
ಸಾಮಾಜಿಕ ಮತ್ತು ಅರ್.ಟಿ.ಐ ಕಾರ್ಯಕರ್ತ ಶ್ರೀನಾಥ್, ಬಿವಿಎಸ್ ರಾಜ್ಯಾಧ್ಯಕ್ಷ ಹರಿರಾಮ್, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯದ್ಯಕ್ಷ ಬಿ ಆರ್ ಭಾಸ್ಕರ್ ಪ್ರಸಾದ್, ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ ಸಂಚಾಲಕ ಸಮಿತಿ ಅಧ್ಯಕ್ಷ ದಲಿತ್ ರಮೇಶ್, ಕರ್ನಾಟಕ ಭೀಮಸೇನೆ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ, ಸಿದ್ದಾಪುರ ಮಂಜುನಾಥ್ ರಾಜ್ಯಾಧ್ಯಕ್ಷರು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ವೇದಿಕೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶ್ರೀನಾಥ್ ಮಾತನಾಡಿ, ಕೆಪಿಟಿಸಿಎಲ್ ಹಣಕಾಸು ವಿಭಾಗದ ಅಧಿಕಾರಿ ಬಿ. ಕಪೂರ ಲಿಂಗಯ್ಯ ಮತ್ತಿತರರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಹಿರಿತನವನ್ನು ಪರಿಪಾಲನೆ ಮಾಡದೇ ಶೇ 1 ರಿಂದ 2.5 ರಷ್ಟು ಗುತ್ತಿಗೆದಾರರಿಗೆ ಕಮೀಷನ್ ಪಡೆದು ಅರ್ಹರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಿಜವಾಗಿ ಕೆಲಸ ಮಾಡಿದ ಗುತ್ತಿಗೆದಾರರ ಬಿಲ್ಲನ್ನು ತಡೆಹಿಡಿದು ಅಧಿಕಾರ ದುರುಪಯೋಗ ಮಾಡಿಕೊಂಡು ಬಿಲ್ಲಿನ ಕಡತಗಳನ್ನು ತಿರುಚುತ್ತಿದ್ದಾರೆ. ಬಿ.ಆರ್ ಸಂಖ್ಯೆ ಮತ್ತು ಬಿಲ್ ಇನ್ ವರ್ಡ್ ಸಂಖ್ಯೆಯನ್ನು ಪಾರದರ್ಶಕವಾಗಿ ಪಾಲಿಸದೇ ದಾಖಲೆಗಳನ್ನು ತಮಗೆ ಬೇಕಾದ ಹಾಗೆ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಮಾಹಿತಿ ಹಕ್ಕು ಅಧಿ ನಿಯಮದಡಿ ಮಾಹಿತಿ ನೀಡಲು ಸಹ ಇವರು ಅಡ್ಡಿಪಡಿಸುತ್ತಿದ್ದಾರೆ. ಇಂತಹ ಅಧಿಕಾರಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯಿಂದ ಇಲಾಖಾ ತನಿಖೆ ಮಾಡಬೇಕು. ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.