ಬೆಂಗಳೂರು : ಅಖಿಲ ಭಾರತ ಬ್ಯಾಂಕಿಂಗ್ ವಲಯದ ಪಿಂಚಣಿದಾರರು ಮತ್ತು ನಿವೃತ್ತ ನೌಕರರ ಒಕ್ಕೂಟ –ಎಐಬಿಪಿಎಆರ್ ಸಿ ಮತ್ತು ಸಿಬಿಪಿಆರ್ ಒ ಸಂಘಟನೆಗಳಿಂದ ಸಸಿ ನೆಡುವ ಮೂಲಕ “ಬ್ಯಾಂಕ್ ರಾಷ್ಟ್ರೀಕರಣ ದಿನ”ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಬಿಟಿಎಂ ಬಡಾವಣೆಯ ಸಂಘದ ಕಚೇರಿ ಸಮೀಪದ ಕೃಷ್ಣ ಪ್ರಕಾಶ್ ವಸತಿ ಸಂಕಿರಣದ ಬಳಿ ಎಐಬಿಪಿಎಆರ್ ಸಿ ಅಧ್ಯಕ್ಷ ಕೆ.ವಿ. ಆಚಾರ್ಯ ಅವರ ನೇತೃತ್ವದಲ್ಲಿ ನಿವೃತ್ತ ಸಿಬ್ಬಂದಿ ಗಿಡಗಳನ್ನು ನೆಡುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು ವಿಶೇಷವಾಗಿಸಿದರು.
ಎಐಬಿಪಿಎಆರ್ ಸಿ ಕರ್ನಾಟಕ ಘಟಕದ ಅಧ್ಯಕ್ಷ ಎಂ. ಆರ್. ಗೋಪಿನಾಥ್ ರಾವ್ ಮಾತನಾಡಿ, ಸಮಾಜಕ್ಕೆ ಏನನ್ನಾದರೂ ಮರಳಿ ನೀಡಲು ಕೈಗೊಂಡ ಅಭಿಯಾನ ಸಫಲವಾಗಿದೆ. ನಿವೃತ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು. ನಿವೃತ್ತರು ಮತ್ತು ಪಿಂಚಣಿದಾರರ ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಸಂಘದ ಸಲಹೆಗಾರ ಜಿ ಡಿ ನದಾಫ್, ಕಾರ್ಯದರ್ಶಿ ಎ ಎನ್ ಕೃಷ್ಣ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.