ಡಿಸಿ-ಸಿಇಓ ಗಳು ಫೀಲ್ಡಿಗಿಳಿದು ಸರ್ಕಾರ ನಮ್ಮ ಪರವಿದೆ ಎಂದು ಜನರಲ್ಲಿ ವಿಶ್ವಾಸ ಮೂಡುವಂತೆ ಕೆಲಸ ಮಾಡಿ

• ಮನೆ ಕುಸಿದು ಹೋದರೆ ತಕ್ಷಣ ಪರಿಹಾರ ನೀಡಲು ತಾಕೀತು

• ರಸ್ತೆ ಶಾಲಾ-ಅಂಗನವಾಡಿ ಕಟ್ಟಡ ದುರಸ್ಥಿಗೆ ಸೂಚನೆ

• ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಟಾಸ್ಕ್‌ಫೋರ್ಸ್‌ ಮೊಕ್ಕಾಂ

• ಆರೈಕೆ ಕೇಂದ್ರಗಳಿಗೆ ಎಸ್‌ಡಿಆರ್‌ಎಫ್‌ ನಿಂದ ಹಣ

ಬೆಂಗಳೂರು: ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಮಲೆನಾಡು ಕರಾವಳಿ ಭಾಗದ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಫೀಲ್ಡಿಗೆ ಇಳಿದು ಕೆಲಸ ಮಾಡಬೇಕು. ಸರ್ಕಾರ ನಮ್ಮ ಪರವಾಗಿದೆ ಎಂದು ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿ ತಾಕೀತು ಮಾಡಿದರು.

 

ವಿಕಾಸಸೌಧದಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರವಾಹ ಪೀಡಿತ ಜಿಲ್ಲೆಗಳಾದ ಉತ್ತರ ಕನ್ನಡ, ಕೊಡಗು, ಮಂಗಳೂರು, ಉಡುಪಿ, ಚಿಕ್ಕಮಗಳೂರು ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾಂ ಹಾಗೂ ದಾವಣಗೆರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಸಿಇಓ ಗಳು ಹಾಗೂ ನೀರಾವರಿ, ಇಂಧನ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೆ, ಪ್ರವಾಹಕ್ಕೆ ಸಂಬಂಧಿಸಿದ ಪರಿಹಾರ ಕೆಲಸಗಳಿಗೆ ಸಮಯದ ಗಡುವು ನಿಗದಿಪಡಿಸಿದರು.

ಈ ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆಗಳನ್ನುನೀಡಿದ ಅವರು, “ ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಎಲ್ಲಾ ಜಿಲ್ಲೆಗಳಿಗೂ ಕಳೆದ ಜನವರಿಯಲ್ಲೇ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳನ್ನು ಗುರುತಿಸಿ ಆ ಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸುವಂತೆ ಸೂಚನೆಯನ್ನೂ ನೀಡಲಾಗಿತ್ತು. ಆದರೂ, ಕೆಲವು ಭಾಗಗಳಲ್ಲಿ ಪ್ರವಾಹದಿಂದ ಜನ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಧಿಕಾರಿಗಳು ಫೀಲ್ಡಿಗೆ ಇಳಿದು ಕೆಲಸ ಮಾಡಬೇಕು. ಸರ್ಕಾರ ನಮ್ಮ ಪರವಾಗಿದೆ ಎಂದು ಜನರಲ್ಲಿ ವಿಶ್ವಾಸ ಮೂಡಿಸುವಂತೆ ಕಾರ್ಯನಿರ್ವಹಿಸಬೇಕು” ಎಂದು ಸೂಚಿಸಿದರು.

ಮುಂದುವರೆದು, “ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಇಲ್ಲದಿದ್ದರೆ ಜನ ಮತ್ತಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ವಿರಾಮ ನೀಡುತ್ತಿದ್ದಂತೆ ಎಲ್ಲೆಲ್ಲಿ ರಸ್ತೆ ಕಿತ್ತುಹೋಗಿದೆ ಎಂದು ವರದಿ ತರಿಸಿಕೊಳ್ಳಿ, ಮುಂದಿನ ಸೋಮವಾರದಿಂದಲೇ ರಸ್ತೆ ರಿಪೇರಿ ಕೆಲಸಗಳನ್ನು ಕೈಗೆತ್ತಿಕೊಳ್ಳಿ. ಜಿಲ್ಲಾ ಪಂಚಾಯತ್‌ ಸಿಇಓ ಗಳು ಮುಂದೆ ನಿಂತು ಈ ಕೆಲಸಗಳನ್ನು ಜವಾಬ್ದಾರಿಯಿಂದ ಪೂರೈಸಬೇಕು. ಅಲ್ಲದೆ, ವಿದ್ಯುತ್‌ ಕಡಿತವಾದರೆ ಕೂಡಲೇ ಸ್ಪಂದಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

 

ಮಳೆಯ ಕಾರಣಕ್ಕೆ ಶಾಲಾ ಕಟ್ಟಡ ಅಥವಾ ಅಂಗನವಾಡಿ ಕಟ್ಟಗಳು ಕುಸಿದುಹೋದರೆ ಒಂದು ವಾರದಲ್ಲಿ ಕಟ್ಟಡ ದುರಸ್ಥಿ ಕೆಲಸ ಮುಗಿಸಿ ಮುಂದಿನ 15 ದಿನಗಳಲ್ಲಿ ಬಿಲ್‌ ಪಾವತಿ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ತತಕ್ಷಣ ಕೆಲಸ ಮಾಡುವುದನ್ನು ಬಿಟ್ಟು ಆರು ತಿಂಗಳ ನಂತರ ಕೆಲಸ ಮಾಡಿದರೆ ಏನು ಉಪಯೋಗ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಮಳೆಯ ಕಾರಣಕ್ಕೆ ಮನೆ ಕುಸಿದುಹೋದರೆ ಕೂಡಲೇ ಪರಿಹಾರ ಒದಗಿಸಬೇಕು, ಕುಸಿಯಬಹುದಾದ ಮನೆಗಳನ್ನು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಕೂಡಲೇ ಹಾರೈಕೆ ಕೇಂದ್ರಗಳಿಗೆ ರವಾನಿಸಬೇಕು. ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ ಇಲಾಖೆ, ನಿರಾವರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ ರಚಿಸಿ ಪ್ರವಾಹ ಸಾಧ್ಯತೆ ಇರುವ ಗ್ರಾಮಗಳಿಗೆ ತಕ್ಷಣ ಕಳುಹಿಸಬೇಕು. ಟಾಸ್ಕ್‌ಫೊರ್ಸ್‌ ಮೇಲ್ವಿಚಾರಣೆಗಾಗಿ ತಾಲೂಕು ಮಟ್ಟದ ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಅವರು ಸೂಚಿಸಿದರು.

ಇದಲ್ಲದೆ, ಟಾಸ್ಕ್‌ಫೊರ್ಸ್‌ ಕೆಲಸಗಳಿಗೂ ಒಂದು ಬಜೆಟ್‌ ಅಗತ್ಯವಿದ್ದು, ಇವರಿಗೆ ಅಗತ್ಯ ಹಣಕಾಸು ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳೇ ಮಾಡಿಕೊಡಬೇಕು. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲೂ ಸಾಕಷ್ಟು ಎಸ್‌ಡಿಆರ್‌ಎಫ್‌ ಹಣ ಇದ್ದು, ಈ ಹಣವನ್ನು ಟಾಸ್ಕ್‌ಫೋರ್ಸ್‌ ಹಾಗೂ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಿ, ಅಗತ್ಯವಿದ್ದರೆ, ಇನ್ನೂ ಹೆಚ್ಚುವರಿ ಹಣವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಭರವಸೆ ನೀಡಿದರು.

ನದಿಪಾತ್ರದ ಬಗ್ಗೆ ಇರಲಿ ಎಚ್ಚರ..!

ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಭಾಗಗಳಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.

 

ಶುಕ್ರವಾರ ಸಂಜೆ ವೇಳೆಗೆ ಕೆಆರ್‌ಎಸ್‌ ಸಂಪೂರ್ಣವಾಗಿ ತುಂಬಲಿದ್ದು, ಕನಿಷ್ಟ 1 ಲಕ್ಷ ಕ್ಯೂಸೆಕ್‌ ನೀರು ಹೊರ ಬಿಡುವ ಸಾಧ್ಯತೆ ಇದೆ. ಶಿವಮೊಗ್ಗದ ಗಾಜನೂರು ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದ್ದು, 70,000ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕೂ ನದಿಗಳೂ ಅಪಾಯ ಮಟ್ಟದಲ್ಲಿವೆ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ.

ನದಿ ನೀರು ಗ್ರಾಮಗಳಿಗೆ ನುಗ್ಗಬಹುದಾದ ಪ್ರದೇಶಗಳನ್ನು ಕೂಡಲೇ ಗುರುತಿಸಿ ಶುಕ್ರವಾರ ಸಂಜೆಯಿಂದಲೇ ಡಂಗೂರ ಸಾಗಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಅಪಾಯ ಹೆಚ್ಚಾಗುವ ಸಾಧ್ಯತೆ ಇದ್ದರೆ ಎಲ್ಲರನ್ನೂ ಬೇರೆಡೆಗೆ ಸ್ಥಳಾಂತರಿಸಬೇಕು. ಅಗತ್ಯವಿದ್ದರೆ ಮತ್ತಷ್ಟು ಆರೈಕೆ ಕೇಂದ್ರವನ್ನು ತೆರೆಯಿರಿ, ಈ ಕೆಲಸಗಳಿಗೆ ಎಸ್‌ಡಿಆರ್‌ಎಫ್‌ ಹಣವನ್ನು ಬಳಸಿಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಪ್ರವಾಹ ಪೀಡಿತ ಜಿಲ್ಲೆಗಳ ಇಂದಿನ ಸ್ಥಿತಿ ಏನು?

ಉತ್ತರ ಕನ್ನಡ: ಅಂಕೋಲಾ ಭೂ ಕುಸಿತ ಅವಘಡದಲ್ಲಿ ಮೃತಪಟ್ಟ ಎಲ್ಲಾ ಏಳು ಜನರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ, ನದಿನೀರಿನಲ್ಲಿ ಕೊಚ್ಚಿಹೋಗಿದ್ದ ಎಲ್‌ಪಿಜಿ ಗ್ಯಾಸ್‌ ಟ್ಯಾಂಕರ್‌ ಅನ್ನು ಸುರಕ್ಷಿತವಾಗಿ ನದಿಯಿಂದ ಹೊರ ತೆಗೆಯಲಾಗಿದೆ. ಇಡೀ ದೇಶದಲ್ಲೇ ಹೀಗೆ ನದಿ ನೀರಿನಲ್ಲಿ ಕೊಚ್ಚಿಹೋದ ಎಲ್‌ಪಿಜಿ ಟ್ಯಾಂಕರ್‌ ಅನ್ನು ಸುರಕ್ಷಿತವಾಗಿ ಹೊರ ತೆಗೆದ ಮೊದಲ ಪ್ರಕರಣ ಇದಾಗಿದೆ.

 

ಜಿಲ್ಲೆಯ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣ ಭೂ ಕುಸಿತ ಉಂಟಾಗಿದ್ದು, ಕೆಲವು ಭಾಗಗಳಲ್ಲಿ ಅಗತ್ಯ ವಸ್ತುಗಳ ವಾಹನ ಮಾತ್ರ ಓಡಾಡಲು ಸಿದ್ದತೆ ಮಾಡಲಾಗಿದೆ. ಈಗಾಗಲೇ ಟಾಸ್ಕ್‌ಫೋರ್ಸ್‌ ರಚಿಸಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಟಾಸ್ಕ್‌ಫೋರ್ಸ್‌ ಫೀಲ್ಡಿಗೆ ಇಳಿದು ಕೆಲಸ ಮಾಡುತ್ತಿದೆ. ಅಲ್ಲದೆ, ಜಿಲ್ಲಾಧಿಕಾರಿ ಹಾಗೂ ವಿಪತ್ತು ನಿರ್ವಹಣೆ ಇಲಾಖೆ ಒಟ್ಟಾಗಿ ಕಂಟ್ರೋಲ್‌ ರೂಂ ತೆರೆದಿತ್ತು ಜನರ ಸಹಾಯಕ್ಕೆ ಮುಂದಾಗಿದೆ.

ಕೊಡಗು : ಕೊಡಗು ಜಿಲ್ಲೆಯಲ್ಲಿ ಈ ವರ್ಷ ಶೇ. 27ರಷ್ಟು ಅಧಿಕ ಮಳೆಯಾಗಿದ್ದು, 24 ಮನೆಗಳು ಸಂಪೂರ್ಣ ಕುಸಿದು ಹೋಗಿದ್ದರೆ 74 ಮನೆಗಳು ಭಾಗಶಃ ಕುಸಿದಿವೆ. ಈ ಎಲ್ಲಾ ಫಲಾನುಭವಿಗಳಿಗೂ ಈಗಾಗಲೇ ಪರಿಹಾರ ಹಣವನ್ನು ಪಾವತಿಸಲಾಗಿದೆ.

ಮಂಗಳೂರು: ಜಿಲ್ಲೆಯ ಎರಡು ಪ್ರಮುಖ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಟ್ಟ ರಸ್ತೆಯಲ್ಲಿ ಭೂ ಕುಸಿತ ಸಾಧ್ಯತೆ ಇರುವ ಕಾರಣ ಈ ರಸ್ತೆಯನ್ನು ಮುಚ್ಚಲಾಗಿದೆ. ಟಾಸ್ಕ್‌ಫೋರ್ಸ್‌ ರಚಿಸಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈ ತಂಡ ಈಗಾಗಲೇ ಕಾರ್ಯಚರಣೆಗೆ ಮುಂದಾಗಿದೆ.

ಹಾಸನ : ಹೇಮಾತಿಗೆ ಪ್ರತಿನಿತ್ಯ 10,000 ಕ್ಯೂಸೆಕ್ ನೀರು ಬರುತ್ತಿದೆ. ನದಿ ಪಾತ್ರದ ಜನರನ್ನ ಎಚ್ಚರಿಸಲು ಲೋಕಲ್‌ ಸುದ್ದಿ ವಾಹಿನಿ ಹಾಗೂ ಸ್ಥಳೀಯ ಪತ್ರಿಕೆಗಳ ಮೂಲಕ ಎಚ್ಚರಿಕೆ ನೀಡಲಾಗಿದೆ. ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್‌ ತಂಡವನ್ನು ನದಿಪಾತ್ರಕ್ಕೆ ಕಳುಹಿಸಿ ಡಂಗೂರ ಹೊಡೆದು ಜನರನ್ನು ಎಚ್ಚರಿಸಿ, ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. 4 ಮನೆಗಳು ಸಂಪೂರ್ಣ ಕುಸಿದಿದ್ದರೆ, 17 ಮನೆಗಳು ಭಾಗಶಃ ಹಾನಿಯಾಗಿದೆ. ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ. ಸಕಲೇಶಪುರದ ಹಲವು ಕಡೆ ವಿದ್ಯುತ್‌ ಸಂಪರ್ಕ ಕಡಿತ ಆಗಿದ್ದು, ಆ ಬಗ್ಗೆ ಹೆಚ್ಚಿನ ಗಮನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

 

ಉಡುಪಿ:  ಜಿಲ್ಲೆಯಲ್ಲಿ ಈ ವರ್ಷ 1440 ಮಿ.ಮೀ ಮಳೆಯಾಗಿದ್ದು, ನಾಲ್ಕು ನದಿಗಳು ಅಪಾಯಮಟ್ಟ ಮೀರಿವೆ. ಸೌಪರ್ಣಿಕ ನದಿಪಾತ್ರದ 86 ಗ್ರಾಮಗಳಲ್ಲಿ ಪ್ರವಾಹ ಸಾಧ್ಯತೆ ಇದ್ದು, ಎಲ್ಲಾ ಗ್ರಾಮಗಳನ್ನು ಖಾಲಿ ಮಾಡಿಸಲಾಗಿದೆ. ಅಲ್ಲದೆ, ಗ್ರಾಮಗಳ ಎಲ್ಲಾ ನಿವಾಸಿಗಳನ್ನೂ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿಯ ಜೊತೆಗೆ ಚರ್ಚಿಸಿ ಆಗುಂಬೆ ಮಾರ್ಗದಲ್ಲಿ ಭಾರೀ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿದೆ. 

ಚಿಕ್ಕಮಗಳೂರು : ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಪ್ಪ ಶೃಂಗೇರಿ ಮೂಡಿಗೆರೆ ತಾಲೂಕುಗಳು ಸೇರಿದಂತೆ ಒಟ್ಟು154 ಮನೆಗಳು ಕುಸಿದಿವೆ. 9 ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮುಳ್ಳಯ್ಯನಗಿರಿ ಪ್ರವಾಸಕ್ಕೆ ತಡೆಯೊಡ್ಡಲಾಗಿದೆ. ಕಳಸಾ-ಹೊರನಾಡು ಸೇತುವೆ ಆಗಾಗ್ಗೆ ಮುಳುಗುತ್ತಿರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಪೊಲೀಸರನ್ನು ಶಾಶ್ವತವಾಗಿ ಆ ಭಾಗದಲ್ಲೇ ಇರುವಂತೆ ನೋಡಿಕೊಳ್ಳಲಾಗಿದೆ.

 

ಮೈಸೂರು: ಕೇರಳದ ವಯನಾಡ್‌ನಲ್ಲಿ ಹಳದಿ ಅಲರ್ಟ್‌ ಇದ್ದು, ಅಧಿಕ ಮಳೆಯಾಗುತ್ತಿದೆ. ಹೀಗಾಗಿ ಕಬಿನಿಗೆ ಒಳ ಹರಿವು ಹೆಚ್ಚಾಗುತ್ತಿದೆ. ನಾಳೆ ಸಂಜೆ ವೇಳೆಗೆ ಕೆಆರ್‌ಎಸ್‌ ತುಂಬಲಿದ್ದು, ಕನಿಷ್ಟ 1ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. ಸಂಗಂ ಹಾಗೂ ಶ್ರೀರಂಗಪಟ್ಟಣದ ಬಳಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.  ಸಮಸ್ಯೆ ಸಾಧ್ಯತೆ ಇದೆ. ಹೀಗಾಗಿ ಅಪಾಯ ಉಂಟಾಗಬಹುದಾದ ಗ್ರಾಮಗಳಲ್ಲಿ ಜನರನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top