ಮಂಡ್ಯ : ಮಂಡ್ಯದಲ್ಲೂ ಕಾವೇರಿ ಪ್ರವಾಹ ಭೀತಿ ಎದುರಾಗಿದ್ದು, KRS ಡ್ಯಾಂನಿಂದ ನದಿಗೆ ನೀರು ಬಿಡಲು ಸಿದ್ಧತೆ ನಡೆಸಲಾಗಿದೆ
ಹೌದು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಮುಂದುವರೆದಿದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾಗ್ರತ ಕ್ರಮವಾಗಿ ನದಿಗೆ ನೀರು ಬಿಡುಗಡೆಗೆ ಸಿದ್ಧತೆ ನಡೆಸಿದ ಅಧಿಕಾರಿಗಳು ಸದ್ಯ 10 ರಿಂದ 25 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡುವ ಸೂಚನೆ ನೀಡಿದ್ದಾರೆ. ಅಂತೆಯೇ ಒಳ ಹರಿವು ಮತ್ತಷ್ಟು ಏರಿಕೆಯಾದ್ರೆ ಹೊರ ಹರಿವನ್ನೂ ಹೆಚ್ಚಿಸಲು ನಿರ್ಧಾರ ಮಾಡಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸಾರ್ವಜನಿಕರು ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಕ್ರಮ ವಹಿಸುವಂತೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.