ಬೆಂಗಳೂರು: ಸಿನರ್ಜಿ ಎಕ್ಸ್ಪೋಶರ್ಸ್ ಅಂಡ್ ಈವೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಕೊಯಮತ್ತೂರಿನ ಪ್ರತಿಷ್ಠಿತ ಕೊಡಿಸ್ಸಿಯಾ ವ್ಯಾಪಾರ ಮೇಳದ ಸಂಕಿರ್ಣದಲ್ಲಿ ಜುಲೈ 3 ರಿಂದ 5 ರ ವರೆಗೆ ಸಾಟಿಯಿಲ್ಲದ ಸಮಗ್ರ ಆಹಾರ, ಉತ್ಪಾದನೆ ಮತ್ತು ಆತಿಥ್ಯ ವಲಯದ ನಾವೀನ್ಯತೆಯ ಬಿ2ಬಿ ಅಂತರರಾಷ್ಟ್ರೀಯ ಎಕ್ಸ್ ಪೋ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಭಾರತ ಚೆಫ್ ಸಂಘದ ಉಪಾಧ್ಯಕ್ಷ, ಚೆಫ್ ಕಾಶಿ ವಿಶ್ವನಾಥನ್, ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ಕೊಲ್ಲಿ ದೇಶಗಳು, ಸ್ಪೇನ್, ಇಟಲಿ, ಜರ್ಮನಿ, ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳ ಪ್ರಮುಖ ಬ್ರ್ಯಾಂಡ್ ಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. 300 ಕ್ಕೂ ಅಧಿಕ ಬ್ರ್ಯಾಂಡ್ ಗಳು, ಪೂರೈಕೆದಾರರು, ಆಹಾರ, ಪಾನೀಯ ಉತ್ಪಾದಕರು, ಆತಿಥ್ಯ ವಲಯದ ಗಣ್ಯರು, ಕೈಗಾರಿಕೆಗಳಿಗೆ ಸಂಬಂಧಪಟ್ಟ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ [ಎಂ.ಎಸ್.ಎಂ.ಇ], ಅಖಿಲ ಭಾರತ ಆಹಾರ ಸಂಸ್ಕರಣಾ ಸಂಘಟನೆ [ಎಐಎಫ್ ಪಿಎ], ಭಾರತೀಯ ಬ್ಯಾಂಕರ್ ಗಳ ಸಂಘ [ಎಸ್.ಐ.ಬಿ], ದಕ್ಷಿಣ ಭಾರತ ಹೊಟೆಲ್ಸ್ ಮತ್ತು ರೆಸ್ಟೋರೆಂಟ್ ಗಳ ಸಂಘ [ಎಸ್.ಐ.ಎಚ್.ಆರ್.ಎ], ಅಖಿಲ ಭಾರತೀಯ ಆಹಾರ ಸಂಸ್ಕರಣಾ ಸಂಘ [ಎಐಎಫ್ ಪಿಎ], ದಕ್ಷಿಣ ಭಾರತ ಅಡುಗೆ ತಯಾರಕರ ಸಂಘ [ಎಸ್ಐಸಿಎ]ಗಳು ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.
ಎಕ್ಸ್ ಪೋನಲ್ಲಿ 15 ನೇ ಆವೃತ್ತಿಯ ಬ್ಯಾಂಕಿಂಗ್ ತಂತ್ರಜ್ಞಾನ ಮೇಳ, 9 ನೇ ಆವೃತ್ತಿಯ ಆತಿಥ್ಯ, ಆಹಾರ ವಲಯದ ಮೇಳ, 3 ನೇ ಆವೃತ್ತಿಯ ಆಹಾರ ಮತ್ತು ಪಾನೀಯ ಸಂಸ್ಕರಣಾ ಮೇಳ, 3 ನೇ ಆವೃತ್ತಿಯ ಭಾರತೀಯ ಆಹಾರ ಮೇಳ, ಡೈರಿ ಉದ್ಯಮದ ವಿಶೇಷ ಮೇಳಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ “ಹಾಸ್ಪಿಸೋರ್ಸ್ ಇನೋವೇಷನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಕಾಶಿ ವಿಶ್ವನಾಥನ್ ಹೇಳಿದರು.
ಬಿಬಿಎಂಪಿ ಹೋಟೆಲ್ ಸಂಘದ ಅಧ್ಯಕ್ಷ ಪಿ ,ಸಿ.ರಾವ್, ಕರ್ನಾಟಕದಿಂದ ಶೇ 30 ರಷ್ಟು ಮಂದಿ ಉದ್ಯಮ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಆತಿಥ್ಯ ವಲಯದ ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನಕ್ಕೆ ಇದು ವೇದಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಆರು ಮಳಿಗೆಗಳಲ್ಲಿ ಒಂದು ಆಹಾರಕ್ಕೆ ಸಂಬಂಧಿಸಿದ ಹೋಟೆಲ್ ಮತ್ತು ಮಳಿಗೆಯಿದೆ. ದೇಶಾದ್ಯಂತ ಆತಿಥ್ಯ ಕ್ಷೇತ್ರ ವ್ಯಾಪಕವಾಗಿ ಪ್ರಗತಿಯಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಸೇವೆಗಳ ಸಮಾಲೋಚಕರ ಸಂಘದ ಸಂಸ್ಥಾಪಕ ಸದಸ್ಯ ರಾಜೇಶ್ ಚೌಧರಿ, ಸಿನರ್ಜಿ ಎಕ್ಸ್ಪೋಶರ್ಸ್ ಅಂಡ್ ಈವೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಸದಸ್ಯ ಶಶಿ ಕುಮಾರ್ ಮತ್ತಿತತರು ಉಪಸ್ಥಿತರಿದ್ದರು.