ಅತೀ ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಯವರಿಂದ ಹುಬ್ಬಳ್ಳಿ-ಧಾರವಾಡ ಜನಕ್ಕೆ ಏನು ಸಿಕ್ತು: ಸಿ.ಎಂ ಪ್ರಶ್ನೆ

ಶಿಗ್ಗಾಂವ್: ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರದಿಂದ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಹಸೂಟಿ ಪರವಾಗಿ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ನರೇಂದ್ರ ಮೋದಿಯವರು ರಾಜ್ಯಕ್ಕೆ ಮಾಡಿದ ಅನ್ಯಾಯವನ್ನು 10 ವರ್ಷಗಳಲ್ಲಿ ಪ್ರಹ್ಲಾದ್ ಜೋಶಿಯವರು ಒಂದೇ ಒಂದು ದಿನವೂ ಪ್ರಶ್ನಿಸಿಲ್ಲ. ರಾಜ್ಯಕ್ಕೆ 15 ನೇ ಹಣಕಾಸು ಆಯೋಗದಲ್ಲೂ ವಂಚನೆ ಆಯಿತು. ಬರಗಾಲ ಬಂದಾಗಲೂ ಅನುದಾನ ಕೊಡದ ಕೇಂದ್ರ ಸರ್ಕಾರವನ್ನು ಪ್ರಶ್ನಿಸದ,  ರಾಜ್ಯದ ಜನರ ಪರವಾಗಿ ನೆಪಕ್ಕೂ ಮಾತನಾಡದ ಪ್ರಹ್ಲಾದ್ ಜೋಶಿಯಿಂದ ನಿಮ್ಮ ಮತಕ್ಕೆ ಗೌರವ ಬಂದಿದೆಯಾ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು. 

ರಾಜ್ಯದಲ್ಲಿ ಇಷ್ಟು ಭೀಕರ ಬರಗಾಲ ಇದ್ದರೂ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಪಾಲಿನ ಒಂದೇ ಒಂದು ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯವನ್ನು ಪ್ರತಿನಿಧಿಸಿದ್ದರೂ ಪ್ರಯೋಜನ ಆಗಲಿಲ್ಲ. ಹೀಗಾಗಿ ಇವರನ್ನು ಸೋಲಿಸಿ ಮನೆಗೆ ಕಳುಹಿಸಿದರೆ ಮಾತ್ರ ನಿಮ್ಮ ಮತಕ್ಕೆ ಗೌರವ ಬರುತ್ತದೆ ಎಂದರು. 

ಯುವ ಸಜ್ಜನ, ಹೃದಯವಂತ ಮತ್ತು ಸಮಾಜದ ಬಗ್ಗೆ ಕಾಳಜಿ ಇರುವ ಜಾತ್ಯತೀತ ವ್ಯಕ್ತಿತ್ವದ ವಿನೋದ್ ಹಸೂಟಿಯವರು ಈ ಬಾರಿ ಗೆದ್ದೇ ಗೆಲ್ತಾರೆ. ಇವರ ಗೆಲುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಕರೆ ನೀಡಿದರು. 

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ , ಮಾಜಿ ಸಚಿವ ವಿನಯ್ ಕುಲಕರ್ಣಿ, ಲೋಕಸಭಾ ಅಭ್ಯರ್ಥಿ ವಿನೋದ್ ಹಸೂಟಿ ಸೇರಿ ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

ಪ್ರಹ್ಲಾದ್ ಜೋಶಿ ಸೋಲಿಸಲು ಶಪಥ

 

ಸಚಿವರಾದ ಸಂತೋಷ್ ಲಾಡ್, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜತೆಗೆ ಶಾಸಕರಾದ ಕೋನರೆಡ್ಡಿ, ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮದ್, ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ನಾಯಕರಾದ ಯಾಸಿರ್ ಖಾನ್ ಪಠಾಣ್,  ಸೋಮಣ್ಣ ಬೇವಿನಮರದ , ಅಜೀಂ ಪೀರ್ ಖಾದ್ರಿ ಸೇರಿ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರುಗಳು ಒಟ್ಟಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಶಪಥ ಮಾಡಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top