ಬೆಂಗಳೂರು: ಈ ಉಪ ಚುನಾವಣೆಗೆ ಕಾರಣರಾದವರನ್ನು ಕೈಬಿಟ್ಟು ಬಿಜೆಪಿ- ಜೆಡಿಎಸ್, ಎನ್‍ಡಿಎ ಅಭ್ಯರ್ಥಿ ರಂಗನಾಥ್ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಬಿಜೆಪಿ ಸರಕಾರ ಇದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ಕೊಡಲಾಗಿದೆ. ಇಂಥ ಪವಿತ್ರ ಶಿಕ್ಷಣ ಕ್ಷೇತ್ರಕ್ಕೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಕರ್ತವ್ಯ ಪ್ರತಿಯೊಬ್ಬರಲ್ಲಿದೆ. ಅಂಥ ಯೋಗ್ಯ ಅಭ್ಯರ್ಥಿ- ಸೂಕ್ತ ಅಭ್ಯರ್ಥಿ ನಮ್ಮ ಎ.ಪಿ.ರಂಗನಾಥ್ ಅವರಾಗಿದ್ದಾರೆ. ಅವರಿಗೆ ಮತ ಕೊಟ್ಟು ಆಶೀರ್ವಾದ ಮಾಡಬೇಕೆಂದು ವಿನಂತಿಸಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಅವರು ಕಣದಲ್ಲಿದ್ದಾರೆ. ನಾವು ಚುನಾವಣೆಯಲ್ಲಿ ಯಾರನ್ನೂ ಸೋಲಿಸಲು ಹೊರಟಿಲ್ಲ. ಎ.ಪಿ. ರಂಗನಾಥ್ ಅವರು ಒಬ್ಬ ಕ್ರಿಯಾಶೀಲ ರಾಜಕಾರಣಿಗಳು. ರಾಜಕಾರಣಿ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ತಮ್ಮದೇ ಆದ ಸೇವೆ ಮಾಡುತ್ತಿದ್ದಾರೆ. ಖ್ಯಾತ ನ್ಯಾಯವಾದಿಗಳೂ ಆಗಿದ್ದಾರೆ ಎಂದು ಹೇಳಿದರು.
ಈ ಉಪ ಚುನಾವಣೆಗೆ ಕಾರಣಕರ್ತರು ಯಾರು? ಎಷ್ಟು ಬಾರಿ ತಮ್ಮ ಪಕ್ಷವನ್ನು ಬದಲಿಸಿದ್ದಾರೆ? ಅಥವಾ ಅವರು ವಿಧಾನಪರಿಷತ್ ಸದಸ್ಯರಾಗಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ನುಡಿದರು. ಅವರ ಕೊಡುಗೆ ಶೂನ್ಯ ಎಂದು ನುಡಿದರು.
ಈಶ್ವರಪ್ಪ ಅವರು ತಮ್ಮ ವಿರುದ್ಧ ಹಾಕಿದ ಕೇಸನ್ನು ಎದುರಿಸುತ್ತಾರೆ. ಆದರೆ, ತಾವೇನು ಹೇಳಿದ್ದಾರೆ ಎಂಬುದನ್ನು ಡಿ.ಕೆ.ಸುರೇಶ್ ಅವರು ನೆನಪು ಮಾಡಿಕೊಳ್ಳಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಮಲ್ಲೇಶ್ವರ ವಿದ್ಯಾ ಮಂದಿರ ಸ್ಕೂಲ್, ಎಂಎಲ್‍ಎ ಕಾಲೇಜಿನಲ್ಲಿ ಎನ್‍ಡಿಎ ಅಭ್ಯರ್ಥಿ ಎ.ಪಿ ರಂಗನಾಥ್ ಪರ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಜಿಲ್ಲಾಧ್ಯಕ್ಷ ಹರೀಶ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಮತ ಯಾಚಿಸಿದರು. ಎರಡು ಸಂಸ್ಥೆಗಳ ಪ್ರಾಂಶುಪಾಲರು ಇದ್ದರು.