ಕಲಬುರ್ಗಿ: “ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇದ್ದರೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕಲಬುರ್ಗಿ ಮಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಶನಿವಾರ ಪ್ರತಿಕ್ರಿಯಿಸಿದರು.
ಫೆ. 7 ರಂದು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;
“ಬಿಜೆಪಿ ನಾಯಕರು ರಾಜ್ಯಕ್ಕೆ ನ್ಯಾಯ ಒದಗಿಸಲು ವಿಫಲವಾದ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಒಂದು ದಿನವೂ ಪ್ರಧಾನಿ ಭೇಟಿ ಮಾಡಿ, ರಾಜ್ಯದ ಹಿತದ ಬಗ್ಗೆ ಧ್ವನಿ ಎತ್ತಲಿಲ್ಲ. ಮೊದಲು ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಿ. ಇದೇ ಕಾರಣಕ್ಕೆ ರಾಜ್ಯದ ಜನ ಅವರನ್ನು ಧಿಕ್ಕರಿಸಿದ್ದಾರೆ.”
ದೆಹಲಿಯಲ್ಲಿ ಪ್ರತಿಭಟನೆ
ಬರಗಾಲದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ನೀಡದಿರುವುದು, ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ, ಈ ಹಿಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿದ ಅನುದಾನ ಬಿಡುಗಡೆ ಮಾಡದಿರುವುದರ ವಿರುದ್ಧ ಫೆ. 7ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲಾ ಸಚಿವರು, ಶಾಸಕರು, ಸಂಸದರು ಇದೇ ಮೊದಲ ಬಾರಿಗೆ ಇಂತಹ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ.
ಸಿದ್ದರಾಮಯ್ಯ ಕುಂಕುಮ ಹಾಕಿಕೊಳ್ಳುತ್ತಾರೆ:
ಸಿದ್ದರಾಮಯ್ಯ ಅವರು ಕುಂಕುಮ ತಿರಸ್ಕಾರ ಮಾಡಿದ ವಿಚಾರವಾಗಿ ಕೇಳಿದಾಗ, “ನನಗೆ ಸುಗಂಧ ರಾಜ ಹೂವು ಅಲರ್ಜಿ ಇದೆ. ಅದೇ ರೀತಿ ಬೇರೆಯವರಿಗೆ ಬೇರೆ, ಬೇರೆ ರೀತಿಯ ಅಲರ್ಜಿ ಇರುತ್ತದೆ. ಸಿದ್ದರಾಮಯ್ಯ ಕುಂಕುಮ ಇಟ್ಟುಕೊಳ್ಳುವುದಿಲ್ಲ ಎಂದು ಯಾರು ಹೇಳಿದರು? ಮೊನ್ನೆಯಷ್ಟೇ ಅವರು ಕುಂಕುಮ ಇಟ್ಟುಕೊಂಡಿದ್ದರು. ಹೆಂಗಸರಂತೆ ಅಗಲವಾಗಿ ಕುಂಕುಮ ಇಟ್ಟುಕೊಳ್ಳಲು ಆಗುತ್ತದೆಯೇ” ಎಂದು ಪ್ರಶ್ನಿಸಿದರು.
ನಮ್ಮಲ್ಲಿ ಅಸ್ಪೃಶ್ಯತೆ ಇಲ್ಲ:
ಜಾತಿ ಕಾರಣಕ್ಕೆ ಸ್ವಾಮೀಜಿಗಳಿಗೆ ಗರ್ಭಗುಡಿಗೆ ಪ್ರವೇಶ ನಿರಾಕರಣೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಸಾಮಾನ್ಯವಾಗಿ ದೇವಾಲಯಗಳನ್ನು ಬೆಳಗ್ಗೆ ಮತ್ತು ಸಂಜೆ ವೇಳೆ ಸ್ವಚ್ಛ ಮಾಡುವುದು ಸಹಜ. ಈ ಪ್ರಕರಣದಲ್ಲಿ ಏನು ಉದ್ದೇಶ ಇದೆ ಎಂದು ಜಿಲ್ಲಾ ಸಚಿವರು, ಮುಜರಾಯಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ನಮ್ಮಲ್ಲಿ ಇಂತಹ ಅಸ್ಪೃಶ್ಯತೆ ಇಲ್ಲ. ನಾವೆಲ್ಲರೂ ಒಂದೇ. ಮಾನವೀಯತೆಯಿಂದ ಎಲ್ಲರೂ ಒಟ್ಟಾಗಿ ಬದುಕಬೇಕು. ಎಲ್ಲಾ ಧರ್ಮದವರಿಗೂ ದೇವಾಲಯಗಳಲ್ಲಿ ಅವಕಾಶ ನೀಡುತ್ತೇವೆ” ಎಂದು ತಿಳಿಸಿದರು.
ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇಡೀ ಭಾರತ ಒಂದು. ಕಾಂಗ್ರೆಸ್ ಪಕ್ಷ ಭಾರತವನ್ನು ಸದಾ ಒಗ್ಗಟ್ಟಾಗಿ ಇಟ್ಟಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಮ್ಮ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಸುರೇಶ್ ಅವರು ಕೂಡ ದೇಶವನ್ನು ಒಗ್ಗಟ್ಟಾಗಿ ಇಡಬೇಕು, ಸಮಾನತೆಯಿಂದ ದೇಶದ ಸಂಪತ್ತು ಹಂಚಬೇಕು ಎಂದು ಧ್ವನಿ ಎತ್ತಿದ್ದಾರೆ” ಎಂದು ತಿಳಿಸಿದರು.