ರಾಜ್ಯದಲ್ಲಿ ಪ್ರವಾಸ, ಸಂಘಟನಾತ್ಮಕ ಕಾರ್ಯ: ಜಗದೀಶ್ ಶೆಟ್ಟರ್

ಬೆಂಗಳೂರು: ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿತ್ತು. ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನ- ಅಳಿಲಸೇವೆ ಮಾಡುವೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುವೆ. ಪಕ್ಷದ ಸೂಚನೆಯಂತೆ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಕಾರ್ಯಕರ್ತರ ಆಶಯ, ಧ್ವನಿ, ರಾಜ್ಯ ನಾಯಕರ ಕರೆ, ರಾಷ್ಟ್ರೀಯ ನಾಯಕರ ಕರೆಗೆ ಸ್ಪಂದಿಸಿ ಬಿಜೆಪಿಗೆ ಮರಳಿದ್ದೇನೆ. ನೀವು ಹಿರಿಯ ನಾಯಕರು, ನಿಮಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ, ಗೌರವ ನೀಡುತ್ತೇವೆ ಎಂದು ಪಕ್ಷದ ಹಿರಿಯರು ತಿಳಿಸಿದ್ದಾರೆ ಎಂದು ತಿಳಿಸಿದರು

ಕಾಂಗ್ರೆಸ್ ಪಕ್ಷ, ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ನಿನ್ನೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪುನರ್ ಸೇರ್ಪಡೆ ಆಗಿದ್ದೇನೆ. ರಾಷ್ಟ್ರೀಯ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಜೊತೆ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇತರ ನಾಯಕರು ಇದ್ದರು ಎಂದರು.

 

ಇದು ನಮ್ಮ ಮನೆ; ನಾವು ಕಟ್ಟಿ ಬೆಳೆಸಿದ ಮನೆ. ನಮ್ಮ ಕುಟುಂಬ ಬಿಜೆಪಿ ಜೊತೆ ಆತ್ಮೀಯತೆ ಹೊಂದಿದೆ. ಅಸೆಂಬ್ಲಿ ಚುನಾವಣೆ ವೇಳೆ ಕೆಲವೊಂದು ಘಟನೆಗಳ ಕಾರಣ ಕಾಂಗ್ರೆಸ್ ಸೇರಿದ್ದೆ. ಆಮೇಲೆ ಎಂಎಲ್‍ಸಿ ಆದೆ. ನರೇಂದ್ರ ಮೋದಿಯವರ 10 ವರ್ಷಗಳ ದೇಶದ ಆಡಳಿತ, ಉತ್ತಮ ಕೆಲಸ ಕಾರ್ಯ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ದೃಷ್ಟಿಯಿಂದ ಹಾಗೂ ನಮ್ಮ ದೇಶವು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕೆಂಬ ನಮ್ಮೆಲ್ಲರ, ಭಾರತದ ನೂರಾರು ಕೋಟಿ ಜನರ ಅಭಿಲಾಷೆಯಿದೆ. ಹೀಗಾಗಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದು ತಿಳಿಸಿದರು.

ಹುಬ್ಬಳ್ಳಿಗೆ ರಥಯಾತ್ರೆ ಬಂದಾಗ ಅದರ ಪೂರ್ತಿ ನಿರ್ವಹಣೆ ಮಾಡಿದ್ದೆ. ರಾಮಮಂದಿರ ನಿರ್ಮಾಣ, ಅಯೋಧ್ಯೆ ಹೋರಾಟದಲ್ಲಿ ಭಾಗವಹಿಸಿದ್ದೆ. ರಾಮಮಂದಿರ ನಿರ್ಮಾಣ ಧನಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡು 2 ಕೋಟಿ ಹಣ ಸಂಗ್ರಹಿಸಿದ್ದು ಎಲ್ಲರಿಗೂ ಗೊತ್ತಿದೆ. ಭವ್ಯ ರಾಮಮಂದಿರ ನಿರ್ಮಾಣದ ಕನಸು ಮೋದಿಯವರ ನೇತೃತ್ವದಲ್ಲಿ ನನಸಾಗಿದೆ ಎಂದು ವಿವರಿಸಿದರು.

 

ಬಿಜೆಪಿ ಕೇಡರ್ ಆಧರಿತ ಕಾರ್ಯಕರ್ತರನ್ನು ಹೊಂದಿದೆ. ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಒಂದೆರಡು ತಿಂಗಳಿನಿಂದ ಈ ಬಗ್ಗೆ ಪ್ರಯತ್ನ ಮಾಡಿದರು. ಯಡಿಯೂರಪ್ಪನವರು ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿಸಿದರು.

ಖುಷಿಯಿಂದ ವಾಪಸ್ ಬಂದಿದ್ದೇನೆ. ಪಕ್ಷಕ್ಕೆ ಮರಳಿದ್ದು 4 ತಾಸಿನ ಕಾರ್ಯ ಅಲ್ಲ ಎಂದೂ ಅವರು ನುಡಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

 

ಜಗದೀಶ ಶೆಟ್ಟರ್ ಅವರ ಭೇಟಿ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ಪ್ರೀತಮ್ ಗೌಡ, ಪಿ. ರಾಜೀವ್, ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು..

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top