ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಬಿಡುವ ಮೂಲಕ ರೈತರ ಹಿತ ಕಾಪಾಡಬೇಕು, ಬರುವ ಮೇ-ಜೂನ್ ಒಳಗಡೆ ಡ್ಯಾಂನಲ್ಲಿ ನೂತನ ಕ್ರಸ್ಟ್‍ಗೇಟ್‍ಗಳನ್ನು ಅಳವಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆಯು ನಾಳೆ ನ.12 ರಂದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ, ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ ವರೆಗೆ ಪಾದಯಾತ್ರೆ ಪ್ರಾರಂಭಿಸಲಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧÀವರೆಡ್ಡಿ ಹೇಳಿದ್ದಾರೆ.
ನಾಳೆ ಬುಧವಾರ ಅಪರಾಹ್ನ 12 ಗಂಟೆಗೆ ಕರೂರಿನಿಂದ ರೈತರ ಪಾದಯಾತ್ರೆಯು ಪ್ರಾರಂಭವಾಗಲಿದ್ದು, ನ.16 ರಂದು ರಾತ್ರಿ ಟಿ.ಬಿ.ಡ್ಯಾಂ ತಲುಪಲಿದೆ. ನ.17 ರಂದು ಸೋಮವಾರ ಟಿ.ಬಿ.ಡ್ಯಾಂನಲ್ಲಿನ ತುಂಗಭದ್ರ ಮಂಡಳಿಯ ಬಳಿ ಪ್ರತಿಭಟನೆ ಹಾಗೂ ಬೃಹತ್ ಬಹಿರಂಗ ಸಭೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ರೈತ ಸಂಘದ ಹಿರಿಯ ಧುರೀಣರಾದ, ರಾಯಚೂರು ಜಿಲ್ಲಾ ಸಿಂಧನೂರಿನ ಹನುಮನಗೌಡ ಬೆಳ್ಳಗುರ್ಕಿ, ಹಾಗೂ ಚಾಗನೂರು-ಸಿರವಾರ ರೈತ ಹೋರಾಟಗಾರ, ನ್ಯಾಯವಾದಿ ಚಾಗನೂರು ಮಲ್ಲಿಕಾರ್ಜುನರೆಡ್ಡಿ ಸೇರಿದಂತೆ ಇತರೆ ಪ್ರಮುಖರು ಬುಧವಾರ `ಪಾದಯಾತ್ರೆ’ಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ-ರಾಯಚೂರು-ಕೊಪ್ಪಳ- ವಿಜಯನಗರ ಜಿಲ್ಲೆಗಳ ರೈತರು, ರೈತ ಸಂಘಟನೆಗಳ ಮುಖಂಡರು, ಮತ್ತಿತರೆ ಪ್ರಮುಖರು `ಪಾದಯಾತ್ರೆ’ಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರವು ರೈತರು `ಬೇಸಿಗೆ ಬೆಳೆ’ ಬೆಳೆಯಲು ಅನುವಾಗುವಂತೆ ನೀರು ಬಿಡಬೇಕು. ಟಿ.ಬಿ.ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಉಳಿಸಿಕೊಂಡು ಡ್ಯಾಂನಲ್ಲಿ `ಕ್ರಸ್ಟ್‍ಗೇಟ್’ಗಳನ್ನು ಅಳವಡಿಸಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸರ್ಕಾರವು ರೈತ ಪರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಧÀವರೆಡ್ಡಿ ಕರೂರು ಒತ್ತಾಯಿಸಿದ್ದಾರೆ.



