ಬೆಂಗಳೂರು,ನ,9: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ , ವಿಶೇಷ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಉಪರಾಷ್ಟ್ರಪತಿ ಅವರು, ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಆಚಾರ್ಯ 108 ಶಾಂತಿ ಸಾಗರ್ ಮಹಾರಾಜ್ ಅವರ ಭೇಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರ ಮೂರ್ತಿಯನ್ನು ಅನಾವರಣಗೊಳಿಸಿದರು.
ಶ್ರವಣಬೆಳಗೊಳದ 4ನೇ ಬೆಟ್ಟಕ್ಕೆ ಶಾಂತಿ ಸಾಗರ ಬೆಟ್ಟವೆಂದು ನಾಮಕರಣ ಮಾಡಿರುವ ಶಿಲಾಫಲಕವನ್ನು ಸಹ ಉಪರಾಷ್ಟ್ರಪತಿ ಇದೇ ವೇಳೆ ಅನಾವರಣ ಮಾಡಿದರು.
ಬಳಿಕ ಉಪರಾಷ್ಟ್ರಪತಿ ಮಾತನಾಡಿ, ವಿಶ್ವದೆಲ್ಲೆಡೆ ಸಂಘರ್ಷದ ಸನ್ನಿವೇಶಗಳು ಉಂಟಾಗಿದ್ದು, ಮನುಕುಲವೇ ಅಪಾಯಕ್ಕೆ ಸಿಲುಕಿದೆ. ಇಂತಹ ಸನ್ನಿವೇಶದಲ್ಲಿ ವಿಶ್ವ ಶಾಂತಿ ಸ್ಥಾಪಿಸಲು, ಜೈನ ಮುನಿಗಳ ಮಾರ್ಗದರ್ಶನ ಅಗತ್ಯವಾಗಿದೆ. ಜೈನ ಧರ್ಮ, ಇಡೀ ವಿಶ್ವಕ್ಕೆ ಸತ್ಯ, ಅಹಿಂಸೆಯ ಭೋದನೆಯನ್ನು ಮಾಡುತ್ತಿದೆ. ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿಯು, ಜೈನ ಧರ್ಮದ ಹಾಗೂ ಪರಂಪರೆಯ ಪ್ರತೀಕ ಮಾತ್ರವಲ್ಲದೆ, ವಿಶ್ವ ಶಾಂತಿಯ ಸಂದೇಶವನ್ನು ಸಾರುವ ಸಂಕೇತವೂ ಆಗಿದೆ ಎಂದು ಹೇಳಿದರು.
ಶ್ರವಣಬೆಳಗೊಳ ಹಾಗೂ ಇಡೀ ಕರ್ನಾಟಕ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ದೇಶದ ಕಲೆ, ಸಂಸ್ಕೃತಿಯನ್ನು ಸಂರಕ್ಷಿಸಿ, ಬೆಳಸುವಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ, ‘ಜ್ಞಾನ ಭಾರತಂ’ ಮಿಷನ್ ಅಡಿಯಲ್ಲಿ, ಪ್ರಾಚೀನ ಭಾಷೆಗಳ ಪುನರುಜ್ಜೀವನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಪ್ರಾಕೃತ ಮತ್ತು ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದ್ದು, ಸಂಶೋಧನೆ ಹಾಗೂ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೈನ ಧರ್ಮದ ಪ್ರಾಚೀನ ಸಾಹಿತ್ಯ, ಹಸ್ತ ಪ್ರತಿಗಳ ಸಂಶೋಧನೆ ಮತ್ತು ಅಧ್ಯಯನಕ್ಕೆ ಇದರಿಂದ ಸಹಕಾರಿಯಾಗಿದೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ದೇಶದ ಸಂತರು ಹಾಕಿಕೊಟ್ಟಿರುವ ಸತ್ಯ, ಅಹಿಂಸೆ, ತ್ಯಾಗದ ಪರಂಪರೆಯಿಂದಾಗಿ, ಭಾರತ ಯುಗ ಯುಗಗಳಿಂದ ವಿಶ್ವ ಗುರುವಾಗಿ ಮುಂದುವರೆಯುತ್ತಿದೆ. ಕ್ರೋಧ, ಹಿಂಸೆಗಳು ತಾಂಡವವಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಇಡೀ ವಿಶ್ವವೇ ಶಾಂತಿಗಾಗಿ ಇಂದು ಭಾರತದೆಡೆ ನೋಡುತ್ತಿದೆ. ಈ ಸಂದರ್ಭದಲ್ಲಿ ಭಗವಾನ್ ಮಹಾವೀರ ಸೇರಿದಂತೆ, ಜೈನ ಧರ್ಮದ ಪ್ರಮುಖರ ಭೋದನೆಗಳು ಅತ್ಯಂತ ಪ್ರಸ್ತುತವಾಗಿವೆ ಎಂದರು.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, ಶ್ರವಣಬೆಳಗೊಳ, ಭಾರತದ ಪ್ರಾಚೀನ ನಾಗರಿಕತೆಯ ಮುಕುಟ ಮಣಿಯಾಗಿದೆ. ಇಲ್ಲಿನ ಚಂದ್ರಗಿರಿಯಲ್ಲಿ ಎರಡು ಸಾವಿರ ವರ್ಷಗಳ ಹಿಂದೆ, ಮೌರ್ಯ ವಂಶದ ಸಂಸ್ಥಾಪಕ ಚಂದ್ರಗುಪ್ತ ಮೌರ್ಯ, ಸಲ್ಲೇಖನ ವ್ರತದ ಮೂಲಕ ಜಿನಪಾದ ಸೇರಿದ ಇತಿಹಾಸವಿದೆ. ಇಂದು ಅನಾವರಣಗೊಂಡಿರುವ ಶಾಂತಿ ಸಾಗರ ಸ್ವಾಮೀಜಿಯವರ ಪ್ರತಿಮೆಯು, ಮುಂದಿನ ಪೀಳಿಗೆಗೂ ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ತೋರಿಸುವ ಸಂಕೇತವಾಗಿದೆ ಎಂದರು



