ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ…?

Kannada Nadu
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ…?

ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ ವೈ ವಿಜಯೇಂದ್ರ ಬದಲಾವಣೆ ಸನ್ನಿಹಿತವಾಗಿದ್ದು, ಲಿಂಗಾಯತ ಸಮುದಾಯ ಹಿರಿಯ ನಾಯಕ, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಈ ಕುರಿತು ತೆರೆಮರೆ ಚಟುವಟಿಕೆಗಳು ನಡೆಯುತ್ತಿದ್ದು, ಸೋಮಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ಬಣ ರಾಜಕೀಯಕ್ಕೆ ತೆರೆ ಎಳೆಯಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ. ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವಿನ ಹಗ್ಗ ಜಗ್ಗಾಟ ಮುಂದುವರೆಯತ್ತಿರುವ ಬೆನ್ನಲ್ಲೇ ಸೋಮಣ್ಣ ಅವರಿಗೆ ಪಕ್ಷದ  ಜವಾಬ್ದಾರಿ ನೀಡುವ ಸಾಧ್ಯತೆಯಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕರಾಗಿ ಸೋಮಣ್ಣ ಅವರನ್ನು ನಿಯೋಜಿಸಲಾಗುತ್ತಿದೆ.

ರಾಜ್ಯದ ಪ್ರಭಾವಿ ಮಠಾಧೀಶರೊಂದಿಗೆ ಸೋಮಣ್ಣ ಖುದ್ದು ಈ ಮಾಹಿತಿ ಹಂಚಿಕೊಂಡಿದ್ದಾರೆಂದು ಆಪ್ತ ಮೂಲಗಳು  ದೃಢಪಡಿಸಿವೆ. “ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಲಿದ್ದೇನೆ. ವಿಜಯೇಂದ್ರ ಅವರ ಸೋದರ ಮತ್ತು ಸಂಸದ ಬಿ ವೈ ರಾಘವೇಂದ್ರ ಕೇಂದ್ರ ಸಚಿವರಾಗಲಿದ್ದಾರೆ” ಎಂದು ಸೋಮಣ್ಣ ಸ್ವಾಮೀಜಿ ಬಳಿ ಹೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಪಕ್ಷದಲ್ಲಿ ಈವರೆಗೂ ಬಗೆಹರಿದಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲು ಸಾಕಷ್ಟು ಶ್ರಮಿಸಿ, ದೆಹಲಿ ವರಿಷ್ಠರ ಬಾಗಿಲುಗಳ ಬಡಿದು ಸುತ್ತಾಡಿರುವ ಬಿ ವೈ ವಿಜಯೇಂದ್ರ ಇತ್ತೀಚೆಗೆ ಬಹುತೇಕ ಮೌನ ವಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಲಿಂಗಾಯತ ಸಮದಾಯದ ಬಸವರಾಜ ಬೊಮ್ಮಾಯಿ ಹೆಸರು ಸಹ ಬಲವಾಗಿ ಕೇಳಿಬರುತ್ತಿದೆ. ಜೊತೆಗೆ ಒಬಿಸಿ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಗಳು ಸಹ ಇವೆ. ಒಬಿಸಿಯಿಂದ ಸುನೀಲ್ ಕುಮಾರ್ ಹೆಸರಿದೆ. ಒಂದು ವೇಳೆ ಸುನೀಲ್‌ ಕುಮಾರ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರೆ, ಅಶೋಕ್ ಸ್ಥಾನಕ್ಕೆ ಕಂಟಕ ಬರಲಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಲಿಂಗಾಯತ ಸಮುದಾಯದ ಪಾಲಾಗಲಿದೆ.‌ ಜಾತಿ ಸಮೀಕರಣದ ಸಂದರ್ಭದಲ್ಲಿ ಅಶೋಕ್ ಸ್ಥಾನ ಭದ್ರವಾಗಿಲ್ಲ.

ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೋ? ಅಥವಾ ಬೇರೆಯವರ ನೇಮಕ ಆಗುತ್ತದೆಯೋ ಎಂಬ ಚರ್ಚೆ ರಾಜ್ಯ ಬಿಜೆಪಿಯಲ್ಲಿ ಜೀವಂತವಾಗಿದೆ. ಈ ನಡುವೆ ಪಕ್ಷದ ಹೈಕಮಾಂಡ್‌ನೊಳಗೆ ಮುಚ್ಚಿದ ಲಕೋಟೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ ಸೋಮಣ್ಣ ಹೆಸರು ಅಂತಿಮಗೊಂಡಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.

ಸೋಮಣ್ಣ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ ಎಂಬ ಯೋಚನೆ ದೆಹಲಿ ನಾಯಕರಲ್ಲಿದೆ. ಜೊತೆಗೆ ಯತ್ನಾಳ್ ಹಾಗೂ ಬಿಜೆಪಿ ತಟಸ್ಥ ಬಣವನ್ನೂ ವಿಶ್ವಾಸಕ್ಕೆ ತೆಗೆದುಕೊಂಡಂತೆಯೂ ಆಗುತ್ತದೆ ಎಂಬ ಲೆಕ್ಕಾಚಾರವಿದೆ.

ಒಕ್ಕಲಿಗ ಸಮುದಾಯಕ್ಕೆ ಹೇಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಆರ್‌ ಅಶೋಕ್‌ಗೆ ನೀಡಲಾಗಿದೆ. ವಿಧಾನ ಪರಿಷತ್‌ ವಿಪಕ್ಷ ನಾಯಕ ಸ್ಥಾನವನ್ನು ದಲಿತ ಸಮುದಾಯದ ಛಲವಾದಿ ನಾರಾಯಣಸ್ವಾಮಿಗೆ ನೀಡಲಾಗಿದೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಲ್ಲೇ ಉಳಿಸಿಕೊಂಡು, ವಿ ಸೋಮಣ್ಣ ಅವರಿಗೆ ಒಪ್ಪಿಸಿದರೆ ಪಕ್ಷದೊಳಗಿನ ಅಸಮಾಧಾನ ಬಹುತೇಕ ಅಸಮಾಧಾನ ತಣಿಯುತ್ತದೆ. ಜೊತೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆ ಗೆಲ್ಲಲು ಕೂಡ ಸಹಾಯಕವಾಗುತ್ತದೆ ಎಂಬುದು ವರಿಷ್ಠರ ಲೆಕ್ಕಾಚಾರ.

ತಾವು ರಾಜ್ಯಾಧ್ಯಕ್ಷರಾದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ಚುನಾವಣೆಯಲ್ಲಿ ಯಶಸ್ಸು ಕಂಡರೆ ಸಿಎಂ ಸ್ಥಾನಕ್ಕೆ ಪ್ರಬಲ ದಾವೆ ಹೂಡಬಹುದು. ಇದೇ ಕಾರಣಕ್ಕೆ ಕೇಂದ್ರ ಮಂತ್ರಿ ಸ್ಥಾನ ಬಿಟ್ಟು ಕೊಡಲು ಸೋಮಣ್ಣ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ಬಿ ಎಸ್‌ ಯಡಿಯೂರಪ್ಪ ಕುಟುಂಬವನ್ನು ನೇರವಾಗಿ ಟೀಕಿಸಿದವರಲ್ಲಿ ಸೋಮಣ್ಣ ಕೂಡ ಒಬ್ಬರು. 2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ವರುಣಾ ಕ್ಷೇತ್ರಕ್ಕೆ ಮತ್ತು ಸ್ವಕ್ಷೇತ್ರ ಗೋವಿಂದರಾಜ ನಗರ ಬಿಟ್ಟು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಉಭಯ ಕ್ಷೇತ್ರಗಳಲ್ಲೂ ಸೋಮಣ್ಣ ಸೋಲು ಕಂಡಿದ್ದರು. ಆ ಸೋಲಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿ ಬಿಸಿ ಸುದ್ದಿಯಾಗಿದ್ದರು.

ಎರಡೂ ಕ್ಷೇತ್ರಗಳಲ್ಲಿ ಸೋತು ರಾಜಕೀಯವಾಗಿ ಅತಂತ್ರವಾಗಿದ್ದ ಸೋಮಣ್ಣ ಅವರು ‘ತ್ಯಾಗ’ ಮಾಡಿದ್ದರ ಪ್ರತಿಫಲವಾಗಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ತನಗಾದ ನಷ್ಟವನ್ನು ತುಂಬಿಕೊಡಬೇಕು ಎಂದು ಪಕ್ಷದ ಹೈಕಮಾಂಡ್‌ ಬಳಿ ಪಟ್ಟುಹಿಡಿದಿದ್ದರು. ಆ ಹಿನ್ನೆಲೆಯಲ್ಲೇ ವಿಧಾನಸಭಾ ಚುನಾವಣೆಯಲ್ಲಿ ಸೋತ ಮೇಲೆ ‘ನನಗೆ ರಾಜ್ಯಾಧ್ಯಕ್ಷ ಸ್ಥಾನ ನಿರಾಕರಿಸಿದರೆ ಬೆಂಬಲಿಗರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ತಿಳಿಸುವೆʼ ಮತ್ತು ‘ನನಗೆ 100 ದಿನ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಿ, ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವೆ’ ಎಂದು ಹೇಳಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕ್ಷಾಂಕ್ಷಿ ತಾವು ಎಂಬುದು ಅವರ ಈ ಎಲ್ಲ ಹೇಳಿಕೆಗಳ ಕೇಂದ್ರಬಿಂದು ಆಗಿದ್ದವು. ಆದರೂ ಅವರ ನಿರೀಕ್ಷೆ ನೆರವೇರುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಡಿಯೂರಪ್ಪನವರ ಮಗ ಬಿ ವೈ ವಿಜಯೇಂದ್ರ ಪಾಲಾಗುತ್ತದೆ. ಬಳಿಕ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಂತೆ ಮಾತು ಆರಂಭಿಸಿದ ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟರು. ಕೊನೆಗೆ ಸಿದ್ದಗಂಗಾ ಮಠದ ಆಶೀರ್ವಾದದೊಂದಿಗೆ ಟಿಕೆಟ್‌ ಪಡೆದು ಗೆದ್ದು ‘ದೆಹಲಿಯ ಕಣ್ಣು ಕಿವಿ’ಗಳಿಗೆ ಹೆಚ್ಚು ಸಮೀಪವಾದರು.

ವಿಜಯೇಂದ್ರ ಅವರಿಗೆ ಈಗಾಗಲೇ ಒಂದು ಅವಕಾಶ ನೀಡಲಾಗಿದೆ. ಅವರು ಆ ಸ್ಥಾನದಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಿಲ್ಲ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿವೆ. ಪಕ್ಷದ ಒಂದು ಗುಂಪಿನ ಬಲವಾದ ವಿರೋಧದ ಹಿನ್ನೆಲೆಯಲ್ಲಿ ಸತತ ಎರಡನೇ ಬಾರಿಗೆ ಅವರ ಆಯ್ಕೆ ಕಷ್ಟ ಸಾಧ್ಯ ಎನ್ನಲಾಗುತ್ತಿದೆ.

ವಿಜಯೇಂದ್ರ ನೇಮಕಕ್ಕೆ ಯತ್ನಾಳ್ ಆರಂಭದಲ್ಲೇ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದರು. ಹಲವು ಮುಖಂಡರು ಬಹಿರಂಗವಾಗಿ ಅಲ್ಲದಿದ್ದರೂ, ವಿಜಯೇಂದ್ರ ನೇಮಕವನ್ನು ಆಂತರಿಕವಾಗಿ ವಿರೋಧಿಸುತ್ತಲೇ ಇದ್ದಾರೆ. ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರುದ್ದ ಯತ್ನಾಳ್‌ ಸಾಕಷ್ಟು ಟೀಕೆಗಳನ್ನು ಮಾಡಿ ಕೊನೆಗೆ ಪಕ್ಷದಿಂದಲೇ ಹೊರಹಾಕಿಸಿಕೊಂಡರು. ಬೆಳಗಾವಿಯ ಪ್ರಭಾವಿ ಕುಳ ರಮೇಶ್‌ ಜಾರಕಿಹೊಳಿ ಕೂಡ ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಸಂಸದ ಡಿ ಸುಧಾಕರ್‌, ವಿಜಯೇಂದ್ರ ಹಸ್ತಕ್ಷೇಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಆಂತರಿಕ-ಬಾಹ್ಯ ವಿರೋಧವನ್ನು ಹೈಕಮಾಂಡ್‌ ಸೂಕ್ಷ್ಮವಾಗಿ ಗಮನಿಸುತ್ತಿದೆ. ಲಿಂಗಾಯತ ಸಮುದಾಯವನ್ನು ದೂರ ಮಾಡಿಕೊಂಡರೆ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರುವುದಿಲ್ಲ ಎಂಬುದನ್ನು ಮನಗಂಡಿದೆ. ರಾಜ್ಯಾಧ್ಯಕ್ಷ ಹುದ್ದೆಯನ್ನು ಮತ್ತೊಮ್ಮೆ ಲಿಂಗಾಯತ ಸಮುದಾಯದ ಕೈಗೇ ಒಪ್ಪಿಸುವ ಆಲೋಚನೆಯಲ್ಲಿದ್ದಾರೆ. ಪಕ್ಷವನ್ನು ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಬಿಡಿಸಿಕೊಳ್ಳಲು ವಿ ಸೋಮಣ್ಣ ಪರ್ಯಾಯ ದಾರಿಯಾಗಿ ದೆಹಲಿ ವರಿಷ್ಠರಿಗೆ ಕಂಡಿರುವ ಸಾಧ್ಯತೆ ಹೆಚ್ಚಿದೆ.

1983ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಕಾರ್ಪೊರೇಟರ್ ಆಗಿ ಆಯ್ಕೆಯಾಗುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿರುವ ವಿ ಸೋಮಣ್ಣ ಅವರ ಅನುಭವ ನಾಲ್ಕು ದಶಕಗಳಷ್ಟು ಸುದೀರ್ಘ. ಪಕ್ಷೇತರರಾಗಿದ್ದವರು, ಮೂರು ಪಕ್ಷಗಳಲ್ಲಿ ತಿರುಗಾಡಿದ್ದಾರೆ.

1994ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಬಿನ್ನಿಪೇಟೆ ಕ್ಷೇತ್ರದಲ್ಲಿ ಅಂದಿನ ಜನತಾದಳದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು. ಬಳಿಕ ಕಾಂಗ್ರೆಸ್ ಸೇರಿ 2004ರಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಗೆಲುವು ಸಾಧಿಸಿದರು. 2008ರಲ್ಲಿ ಕ್ಷೇತ್ರ ಬದಲಾಯಿಸಿದರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದರು. ಆ ಬೆನ್ನಲ್ಲೇ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದರು. 2009ರಲ್ಲಿ ಗೋವಿಂದರಾಜ ನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಿಯ ಕೃಷ್ಣ ವಿರುದ್ಧ ಸೋಲು ಕಂಡರು.

2010ರಲ್ಲಿ ಸೋಮಣ್ಣ ಅವರನ್ನು ಬಿಜೆಪಿಯು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿತ್ತು. 2013ರ ಚುನಾವಣೆಯಲ್ಲಿ ವಿಜಯನಗರದಿಂದ ಸ್ಪರ್ಧಿಸಿದ್ದ ಸೋಮಣ್ಣ, ಪ್ರಿಯ ಕೃಷ್ಣ ತಂದೆ ಎಂ. ಕೃಷ್ಣಪ್ಪ ವಿರುದ್ಧ ಮತ್ತೆ ಸೋಲುತ್ತಾರೆ. 2010ರಿಂದ 2018ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು 2018ರ ಚುನಾವಣೆಯಲ್ಲಿ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನಿಂದ ಮತ್ತೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಹೀಗೆ ರಾಜಕಾರಣದಲ್ಲಿ ವಿ. ಸೋಮಣ್ಣ ಅಪಾರ ಅನುಭವ ಹೊಂದಿರುವ ನಾಯಕರಾಗಿ ಹೊರ ಹೊಮ್ಮಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";