ಡಿ.23 ರಿಂದ 25ರವರೆಗೆ  ನೀನಾಸಮ್, ಧಾತ್ರಿ ನಾಟಕಗಳ ಪ್ರದರ್ಶನ

ಬಳ್ಳಾರಿ : ನಾಟಕ ಕೇವಲ ಮನರಂಜನೆಗಲ್ಲ, ಮನೋವಿಕಾಸಕ್ಕೆ ಎಂದು ಸದಾ ಪ್ರತಿಪಾದಿಸುವ ರಂಗತೋರಣ ಸಂಸ್ಥೆ ಈಬಾರಿ ನೀನಾಸಂ ಹಾಗೂ ಧಾತ್ರಿ ರಂಗ ಸಂಸ್ಥೆಗಳ ಜೊತೆಗೂಡಿ 3 ನಾಟಕಗಳ ಉತ್ಸವವನ್ನು ಆಯೋಜಿಸಿದೆ ಎಂದು ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಮಾಹಿತಿ ನೀಡಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಇದೇ ಡಿಸೆಂಬರ್ 23, 24 ಮತ್ತು 25 ರಂದು ನಗರದ ಮೋಕಾ ರಸ್ತೆಯ ಆಟಲ್ ಬಿಹಾರಿ ವಾಜಪೇಯಿ ನಗರದ ರಂಗತೋರಣದ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಡಿ.23: ಆಧುನಿಕತೆಯ ಬರದಲ್ಲಿ, ಹೆಣ್ಣು, ಹೊನ್ನು, ಮಣ್ಣಿನ ವ್ಯಾಮೋಹಗಳಿಗೆ ಒಳಗಾಗುವ ಮನುಷ್ಯ, ತನ್ನೊಳಗಿನ ಮನುಷ್ಯತ್ವವನ್ನು ಮರೆತು, ಸಂಬಂಧಗಳಿಗೆ ಸ್ಪಂದಿಸದೆ, ತನ್ನ ಯಾಂತ್ರಿಕ ಬದುಕನ್ನು ಮುಂದುವರೆಸುತ್ತಿದ್ದಾನೆ. ಇಂತಹ ಮನುಷ್ಯ ಸಂಬಂಧಗಳ ಕೊರತೆ ಮತ್ತು ನಿರೀಕ್ಷೆಗಳಿಗೆ ಹಿಡಿದ ಕೈಗನ್ನಡಿ ಈ ನಾಟಕ, ಮನುಷ್ಯ ಎನ್ನುವ ವಿಶೇಷ ಬುದ್ಧಿಜೀವಿ ತನ್ನ ಬದುಕನ್ನು ಬದುಕಬೇಕಿರುವುದು ಭಾವನಾತ್ಮಕವಾಗಿಯೇ ಹೊರತು, ಯಾಂತ್ರಿಕವಾಗಿ ಅಲ್ಲ, ಎಂಬ ವಿಷಯದ ಮೇಲೆ ಈ ನಾಟಕವು ಬೆಳಕು ಚೆಲ್ಲುತ್ತದೆ. ಮೇಲ್ನೋಟಕ್ಕೆ ಪೋಸ್ಟ್‌ಮನ್ ತಂದು ಕೊಡುವ ಪಿಂಚಣಿ ಹಣಕ್ಕಾಗಿ ಕಾಯುತ್ತಿರುವ ವಯಸ್ಕರು, ವಿಕಲಚೇತನರು, ವಿಧವೆಯರು, ಕಲಾವಿದರು. ತಮ್ಮ ಕುಟುಂಬದೊಂದಿಗಿನ ಒಳ ತೋಳಲಾಟಗಳನ್ನು ಜಗತ್ತಿನ ಜನಸಾಮಾನ್ಯರ ಮನಸ್ಸುಗಳ ಕನ್ನಡಿಯಾಗಿ ಪ್ರತಿಬಿಂಬಿಸುತ್ತಾರೆ. ಈ ನಾಟಕವನ್ನು ಮಹಾಂತೇಶ್ ರಾಮದುರ್ಗರವರು 10 ವರ್ಷಗಳ ಹಿಂದೆಯೇ ಬರೆದಿದ್ದರೂ, ಈಗಿನ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳಿಗೆ ಸರಿಹೊಂದುತ್ತದೆ ಕರ್ನಾಟಕ ನಾಟಕ ಆಕಾಡೆಮಿಯ ಯುವ ಪ್ರಶಸ್ತಿ ಪುರಸ್ಕೃತರಾದ ಮಹಾಂತೇಶ ರಾಮದುರ್ಗರವರು ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಗಾಗಿ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

 

ಡಿಸೆಂಬರ್ 23ರ ಸಂಜೆ 6.30ಕ್ಕೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಮಲ್ಲನಗೌಡ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಾಜಪೇಯಿ ನಗರದ ಮುಖಂಡರಾದ ಭೀಮೇಶಸ್ವಾಮಿ ಹಾಗೂ ಇಂಜಿನಿಯರ್ ಸಂಜೀವ ಪ್ರಸಾದರವರು ಪಾಲ್ಗೊಳ್ಳಲಿದ್ದಾರೆ.

ಡಿ 24 :  ನೀನಾಸಮ್ ನಾಟಕ – ಹುಲಿಯ ನೆರಳು

ಹುಲಿ ಬೇಟೆಯೊಂದರ ಕಥೆಯಲ್ಲಿ ಪ್ರಾರಂಭವಾಗುವ ಈ ನಾಟಕ ಕಣ್ಣಿಗೆ ಅಡ್ಡವಾಗಿರುವ ತೋರಿಕೆಯ ಪರದೆಯನ್ನು ಸರಿಸಿ ಸತ್ಯವನ್ನು ಕಾಣುವುದು ಎಂದರೇನು ಎಂಬ ಪ್ರಶ್ನೆಯನ್ನು ನಮ್ಮೆದುರಿಗಿಡುತ್ತದೆ. ರಾಮಗೊಂಡನು ತನ್ನ ತಂದೆ ಯಾರು ಎಂಬ ಹುಡುಕಾಟಕ್ಕೆ ತೊಡಗುತ್ತಾನೆ. ತನ್ನ ತಾಯ್ತಂದೆಯರನ್ನು ತಿಳಿಯುವ ಹೋರಾಟವು ಸತ್ಯವನ್ನು ಅರಿಯುವ ಹುಡುಕಾಟವಾಗಿ ಪರಿವರ್ತಿತವಾಗುವುದನ್ನು ಈ ನಾಟಕ ರಮ್ಯಾದ್ಭುತ ಜಗತ್ತಿನಲ್ಲಿ ಕಟ್ಟಿಕೊಡುತ್ತದೆ. ಹಾಗಾಗಿಯೇ ಮನುಷ್ಯನ ಮನಸ್ಸಿನಲ್ಲಿ ಮೂಡಬಹುದಾದ ಅತಿಮಾನುಷ ರೂಪ ರೂಪಗಳು ಕಾಣಿಸಿಕೊಳ್ಳುತ್ತವೆ. ಒಬ್ಬರು ಮತ್ತೊಬ್ಬರಾಗುತ್ತಾರೆ. ಮನುಷ್ಯರು ಮತ್ತೇನೇನೋ ಆಗುತ್ತಾರೆ. ಹುಲಿ, ಭೂತ, ಯಕ್ಷಿಣಿ, ಮಾಯದ ಕನ್ನಡಿ, ರಾಕ್ಷಸ, ದೇವ ದೇವತೆಗಳಾದಿಯಾಗಿ ಜನಪದ ಮತ್ತು ಪುರಾಣ ಲೋಕದ ಪಾತ್ರಗಳು ರಾಮಗೊಂಡನೆಂಬ ಮನುಷ್ಯನ ಆಸ್ಥಿತೆಯ ಹುಡುಕಾಟದಲ್ಲಿ ಮಾರ್ಗಗಳಾಗಿಯೂ, ಮಾರ್ಗಸೂಚಿಗಳಾಗಿಯೂ, ದಾರಿ ತಪ್ಪಿಸುವ ಮರೀಚಿಕೆಗಳಾಗಿಯೂ ನಾಟಕವನ್ನು ಮುನ್ನಡೆಸುತ್ತವೆ. ನಾವು ಯಾರು, ನಮ್ಮ ಮೂಲ ಯಾವುದು ಎಂಬ ಆಸ್ಥಿತೆಯನ್ನು ಕುರಿತ ಪ್ರಶ್ನೆಗಳು ಮಹತ್ವವನ್ನು ಪಡೆದುಕೊಂಡಿರುವ ಈ ಕಾಲದಲ್ಲಿ ಕಂಬಾರರ ನಾಟಕಕ್ಕೆ ಬೇರೆಯದೇ ಧ್ವನಿ ದಕ್ಕಿಬಿಡುತ್ತದೆ. ಭಾರತೀಯ ಜನಪದ ಪರಂಪರೆಯಲ್ಲಿ ಗಟ್ಟಿಯಾಗಿ ಬೇರೂರಿರುವ ಈ ಕೃತಿಯು ಪಾಶ್ಚಾತ್ಯ ರಂಗಭೂಮಿಯ ‘ಈಡಿಪಸ್’ ಮುಂತಾದ ಕೃತಿಗಳನ್ನು ನೆನಪಿಸುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ರಚಿಸಿರುವ ಈ ನಾಟಕವನ್ನು ಹಿರಿಯ ರಂಗಕರ್ಮಿ ಶ್ರೀ ಕೆ.ಜಿ.ಕೃಷ್ಣಮೂರ್ತಿ ರವರು ನಿರ್ದೇಶಿಸಿದ್ದಾರೆ.

 

ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ಎ.ವೇಮಣ್ಣ, ಹೊನ್ನನಗೌಡ ಹಾಗೂ ಪತ್ರಕರ್ತ ಶಶಿಧರ ಮೇಟಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಡಿ.25: ‘ದ ರಿದಮ್ ಆಫ್ ವಯಲೆನ್ಸ್’ ನಾಟಕ

ಜನಾಂಗೀಯ ಹಿಂಸೆಯು ಭಾರತದ ಸ್ಥಿತಿಯಲ್ಲಿ ಆಷ್ಟಾಗಿ ಫಾಸಿ ಮಾಡದ ಸಂಗತಿ. ವಸಾಹತುಶಾಹಿಯ ಕಾಲದಲ್ಲಿ ಬಿಳಿಯರ ಆಳ್ವಿಕೆಯಿದ್ದರೂ ಅದು ಜನಾಂಗೀಯ ಕಲಹದ ಬಣ್ಣ ಪಡೆದು ಕೊಂಡಿದ್ದು ಇಲ್ಲವೇ ಇಲ್ಲವೆನ್ನಬಹುದು. ಹಾಗಿದ್ದೂ ಆಫ್ರಿಕಾ, ಅಮೇರಿಕಾ ಮೊದಲಾದ ದೇಶಗಳಲ್ಲಿ ನಡೆದ ಜನಾಂಗೀಯ ಸಂಘರ್ಷದ ಚಿತ್ರಣವು ನಮ್ಮನ್ನು ತಟ್ಟಿ ಅಲುಗಾಡಿಸುವುದು ಏಕೆಂದರೆ ಹಿಂಸೆಯ ಕತೆಗಳು ಮಾನವ ಸ್ಥಿತಿಯನ್ನು ದೇಶ ಭಾಷೆಗಳ, ವೈಯಕ್ತಿಕ ಅನುಭವಗಳ ಗಡಿ ಮೀರಿ ಒಂದುಗೂಡಿಸಿಬಿಡುತ್ತವೆ. ಲೂಹಿ ನಕೋಸಿ ಬರೆದ ನಾಟಕ ‘ದ ರಿದಮ್ ಆಫ್ ವಯಲೆನ್ಸ್’ ಆಫ್ರಿಕಾದ ವಿದ್ಯಾರ್ಥಿ ಸಮೂಹವೊಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆಯನ್ನು ಬಿಚ್ಚಿಡುತ್ತದೆ. ವಿದ್ಯಾರ್ಥಿಗಳ ಕೂಡು ತಾಣವಾದ ಕೆಫೆಯೊಂದರಲ್ಲಿ ನಡೆಯುವ ಈ ನಾಟಕದ ದೃಶ್ಯಗಳು ಯುವಕ ಯುವತಿಯರ ಆಸೆ, ಆತಂಕ, ಪ್ರಣಯ, ಪ್ರಲೋಭನೆ, ಬಯಕೆ, ಬಸವಳಿಕೆ, ಕನಸು, ಕುಡಿತ, ತತ್ವ, ತೀರ್ಮಾನಗಳೆಲ್ಲವನ್ನೂ ಆ ದಿನ ರಾತ್ರಿ ನಡೆಯುವ ಸ್ಪೋಟಕ ಘಟನೆಯೊಂದರ ಹಿನ್ನೆಲೆಯಾಗಿ ಚಿತ್ರಿಸುತ್ತವೆ; ಜನಾಂಗೀಯ ಸಂಘರ್ಷದ ಕುರಿತು ತೀರ್ಮಾನಗಳನ್ನು ಘೋಷಿಸದೆಯೇ ಹಿಂಸೆಯ ಬಗ್ಗೆ ಜಿಗುಪ್ಸೆ ಹುಟ್ಟುವಂತೆ ಮಾಡುತ್ತವೆ. ಜಾಜ್ ಮತ್ತು ಹೋರಾಟದ ಹಾಡುಗಳ ಮುಖಾಂತರ ಸಂಗೀತಕ್ಕೂ ಪ್ರತಿರೋಧಕ್ಕೂ ಇರುವ ಸಂಬಂಧದದ ಕಲಾಮೀಮಾಂಸೆಗೂ ಈ ಪ್ರಯೋಗ ಕೈ ಹಾಕುತ್ತದೆ. ಲೂಯಿ ನಕೋಸಿ ಯವರ ಈ ನಾಟಕವನ್ನು ಹಿರಿಯ ರಂಗಕರ್ಮಿ ನಟರಾಜ ಹೊನ್ನವಳ್ಳಿ ಯವರು ಕನ್ನಡಕ್ಕೆ ಅನುವಾದಿಸಿದ್ದು, ಹೆಚ್.ಕೆ.ಶ್ವೇತಾರಾಣಿ ರವರು ನಿರ್ದೇಶಿಸಿದ್ದಾರೆ.

 

ಸಮಾರೋಪ ಸಮಾರಂಭದಲ್ಲಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಕೆ.ಪೊಂಪನಗೌಡ, ವಿಜ್‌ಡಮ್ ಲ್ಯಾಂಡ್ ಶಾಲೆಯ  ಎಸ್.ವೈ. ಕಟ್ಟೇಗೌಡ ಹಾಗೂ ರಂಗ ಕಲಾವಿದ ವಿ.ರಾಮಚಂದ್ರ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

 

ಮೂರು ದಿನಗಳ ಈ ನಾಟಕೋತ್ಸವಕ್ಕೆ ನಗರದ ನಾಗರಿಕರು ಹಾಗೂ ಕಲಾಭಿಮಾನಿಗಳು ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top