ಮಧುಗಿರಿ : ಇಲಾಖೆ ಯಾವುದೇ ಇರಲಿ ತಾಲೂಕಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ದೊರಕು ವಂತಹ ಎಲ್ಲಾ ಸೌಲಭ್ಯಗಳನ್ನು ಅಧಿಕಾರಿಗಳು ಕಲ್ಪಿಸಿ ಕೊಡಲು ಮುಂದಾಗಬೇಕೆಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಸೂಚಿಸಿದರು.
ಅವರು ಶನಿವಾರ ತಾ.ಪಂ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲೆ ಬಿಟ್ಟ ಮಕ್ಕಳನ್ನು ಅಧಿಕಾರಿಗಳು ಗುರುತಿಸಿ ಅಂತಹ ಪೋಷಕರು ಹಾಗೂ ಮಕ್ಕಳ ಮನವೊಲಿಸಿ ವಿದ್ಯಾಭ್ಯಾಸಕ್ಕೆ ಕಳುಹಿಸುವಂತೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನ ತಾಲೂಕಿನಲ್ಲಿ ಶೇ.100ರಷ್ಟು ವಿತರಣೆಯಾಗುವಂತೆ ಮಾಡಬೇಕು. 187 ಶಾಲಾ ಕಟ್ಟಡಗಳು ಶಿಥಿಲಾವಾಗಿವೆ. ರಿಪೇರಿ ಅಸಾಧ್ಯ ವಾಗಿದ್ದು ಇತ್ತೀಚೆಗೆ ನಿರ್ಮಿಸಲಾಗಿರುವ 23 ಶಾಲಾ ಕಟ್ಟಡಗಳು ಫೆಬ್ರವರಿ ಮಾಸದೊಳಗೆ ಲೋಕಾರ್ಪಣೆ ಯಾಗಲಿವೆ. ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅಧಿಕಾರಿಗಳು , ಖಾಸಗಿ ಕಂಪನಿಗಳ ಮಾಲೀಕರ ಹೆಸರುಗಳನ್ನು ಪಟ್ಟಿ ಮಾಡಿ ಅವರಿಂದ ಸಾಧ್ಯವಾದಷ್ಟು ಹಣ , ಪರಿಕರಗಳನ್ನು ದೇಣಿಗೆ ಪಡೆದುಕೊಂಡು ಶಾಲಾ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಎಲ್ಲಾ ಸಮುದಾಯಗಳ ಮಕ್ಕಳು ನಮ್ಮ ಮಕ್ಕಳಿದ್ದಾಗ ಹಾಗೆ, ಅವರಿಗೆ ಯಾವುದೇ ಹಾಸ್ಟೆಲ್ ಗಳಲ್ಲಿ ಯಾವುದೇ ರೀತಿಯ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಅಂತರ್ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಾಪುರುಷರ ಹಾಗೂ ಸ್ವತಂತ್ರ ಹೋರಾಟಗಾರ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಿ ಕೊಡಬೇಕೆಂದು ಬಿಸಿಎಂ ಇಲಾಖೆಯ ಜಯರಾಮಯ್ಯ ನವರಿಗೆ ಸೂಚಿಸಿದರು.
ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ 18 ಹಾಸ್ಟೆಲ್ ಗಳಿದ್ದು, ಅದರಲ್ಲಿ 14 ಹಾಸ್ಟೆಲ್ ಗಳು ಹಳೆಯ ಹಾಸ್ಟೆಲ್ ಗಳಾಗಿದ್ದು, ಈ ಹಾಸ್ಟೆಲ್ ಗಳಲ್ಲಿ ಶೌಚಾಲಯಗಳು ಬಹಳಷ್ಟು ಶಿಥಿಲಾವಸ್ಥೆ ತಲುಪಿದ್ದು, ಈ ಶೌಚಾಲಯಗಳನ್ನು ದುರಸ್ತಿಗೊಳಿಸಲು ಅನುದಾನ ಬಿಡುಗಡೆಗೊಳಿಸಲು ಕ್ರಿಯಾ ಯೋಜನೆ ತಯಾರಿಸಿದ್ದು, ಹಣ ಬಿಡುಗಡೆಗೊಳಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಣ್ಣ ಮನವಿ ಮಾಡಿದಾಗ, ಇಂತಹ ಪರಿಸ್ಥಿತಿ ಇದ್ದರೂ ಇಷ್ಟು ದಿನ ನೀವು ಏನು ಮಾಡುತ್ತಿದ್ದೀರಾ…? ಇದರಿಂದ ಹಾಸ್ಟೆಲ್ ನಲ್ಲಿರುವ ಮಕ್ಕಳಿಗೆ ತೊಂದರೆಯಾಗುವುದಿಲ್ಲವಾ… ಪರಿಸ್ಥಿತಿ ಹೀಗಿದ್ದರೂ ನಮ್ಮ ಗಮನಕ್ಕೆ ಏಕೆ ತರಲಿಲ್ಲ. ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದು. ಆದಷ್ಟು ಬೇಗ ಪ್ರಪೋಸಲ್ ಕಳುಹಿಸಿ ತಕ್ಷಣ ಹಣ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಸಚಿವ ಮಹಾದೇವಪ್ಪರವರನ್ನು ಕ್ಷೇತ್ರಕ್ಕೆ ಕರೆ ತರಲಾಗುವುದು.
ಗೃಹ ಲಕ್ಷ್ಮೀ ಯೋಜನೆ ಅರ್ಹ ಫಲಾನುಭವಿಗಳನ್ನು ಹಾಗೂ ಮನೆಯ ಯಜಮಾನಿಗಳನ್ನು ಗುರುತಿಸಿ . ಗೃಹ ಲಕ್ಷ್ಮೀ ಯೋಜನೆ ಯಿಂದ ವಿವಿಧ ಕಾರಣಗಳಿಂದ ಹೊರ ಉಳಿದಿರುವ 8167 ಮಹಿಳೆಯರಿಗೆ ಹಣ ಬರುವಂತೆ ಮಾಡಬೇಕು. ಅಂಗನವಾಡಿ ಶಿಕ್ಷಕರ ಅನಗತ್ಯ ವರ್ಗಾವಣೆಗೆ ಕಡಿವಾಣ ಹಾಕು ಬೇಕು , ಗೊಂದಿಹಳ್ಳಿ , ಹಾವಿನಮಡಗು , ಚಿನ್ನೇನಹಳ್ಳಿ , ಪಟ್ಟಣದ ರಾಘವೇಂದ್ರ ಕಾಲನಿ ಅಂಗನವಾಡಿಗಳ ಮಂಜೂರು ಮಾಡಲಾಗಿದೆ ಎಂದು ಸಭೆಗೆ ಸಿಡಿಪಿಓ ಮಾಹಿತಿ ಒದಗಿಸಿದರು.
ಬೆಸ್ಕಾಂ ಇಇ ಜಗದೀಶ್ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿವೆ ಬೆಸ್ಕಾಂ ಇಲಾಖೆಯ ವತಿಯಿಂದಲೇ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು , ಗೃಹ ಜ್ಯೋತಿಯ ಯೋಜನೆಯಡಿಯಲ್ಲಿ 56071 , ಭಾಗ್ಯ ಜ್ಯೋತಿ , ಕುಟೀರ ಜ್ಯೋತಿ 16580 ಆರ್ಹ ಫಲಾನುಭವಿಗಳು ತಾಲೂಕಿನಲ್ಲಿ ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹ ಲಕ್ಷ್ಮೀ ಯೋಜನೆ ಜಾರಿಯಿಂದಾಗಿ ವಸೂಲಾತಿ ಕಡಿಮೆ ಇರುವುದರಿಂದ ಕೆಲ ಸಿಬ್ಬಂದಿಗಳನ್ನು ಕೊರತೆ ಇರುವ ಪ್ರದೇಶಗಳಿಗೆ ತಾಲೂಕಿನಲ್ಲಿಯೇ ವರ್ಗಾವಣೆ ಮಾಡಲಾಗಿದೆ. ಗರಣಿ ಗ್ರಾಮಕ್ಕೆ ವಿದ್ಯುತ್ ಸ್ಥಾವರ ಮಂಜೂರಾಗಿದ್ದು ಬೆಸ್ಕಾಂ ವತಿಯಿಂದ ಹಣ ಪಾವತಿಸುವುದು ಬಾಕಿ ಇದೆ , ಗಿರಿಗೊಂಡನಹಳ್ಳಿ ವಿದ್ಯುತ್ ಸ್ಥಾವರಕ್ಕೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಎಸಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿನ ಜಮೀನಿನ ಪಹಣಿ ತಿದ್ದುಪಡಿಗಾಗಿ ತಹಸೀಲ್ದಾರ್ ರವರಿಗೆ ಕಳುಹಿಸಿ ಕೊಡಲಾಗಿದೆ. ದೊಡ್ಡೇರಿ ಹೋಬಳಿಯ ತಿಪ್ಪನಹಳ್ಳಿ ಗ್ರಾಮದ ಸ.ನಂ 39 ವಿದ್ಯುತ್ ಸ್ಥಾವರವು ಮಂಜೂರಾಗಿದ್ದು ಸಾಮಾಜಿಕ ಅರಣ್ಯ ವ್ಯಾಪ್ತಿಗೆ ಬರುತ್ತಿರುವುದರಿಂದ ಸ್ಥಾವರ ನಿರ್ಮಾಣಕ್ಕೆ ಅಡಚಣೆ ಉಂಟಾಗಿದೆ. ಬೆಲ್ಲದ ಮಡು ಗ್ರಾಮದ ಬಳಿ ಹೊಸದಾಗಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಬೇಡಿಕೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸಚಿವರಿಗೆ ಸಭೆಯಲ್ಲಿ ಮಾಹಿತಿ ಒದಗಿಸಿ ಕೊಟ್ಟರು.
ಹೊರಗಿನಿಂದ ಬಂದು ಜಮೀನು ಆಸ್ತಿ ಖರೀದಿಸಿ ರುವವರ ಬಗ್ಗೆ ಅಧಿಕಾರಿಗಳು ಹೆಚ್ಚು ತಲೆ ಕೆಡಿಸಿ ಕೊಳ್ಳವುದು ಬೇಡ. ಬಂದು ಫಾರಂ ಹೌಸ್ ಮಾಡಿ ಮೋಜು ಮಸ್ತಿ ಮಾಡುವವರಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ನೀಡಬೇಡಿ. ಮಕ್ಕಳ ಶಿಕ್ಷಣಕ್ಕೆ ಅನುಕೂಲಮಾಡುವ ಉದ್ದೇಶಕ್ಕೆ ತಕ್ಷಣ ವಿದ್ಯುತ್ ಸಂಪರ್ಕ ನೀಡಿ ಎಂದು ಬೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು.
ಬಡವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಗ್ರಾಮಗಳಿಗೆ ಸಂಬಂಧಪಟ್ಟಂತೆ ಮುಂದಿನ ತಿಂಗಳು ಜ.10 ರಂದು ಜನ ಸಂಪರ್ಕ ಸಭೆ ನಡೆಸಲಾಗುವುದು , ಆಹಾರ ಇಲಾಖೆ , ಕಂದಾಯ ಇಲಾಖೆ , ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಆ ಗ್ರಾಮಗಳಲ್ಲಿನ ಜನರಿಂದ ಅರ್ಜಿ ಪಡೆದು ಕೊಂಡು ಸಭೆಯ ದಿನದಂದು ಪರಿಹಾರವನ್ನು ಒದಗಿಸಿ ಕೊಡಬೇಕು ಎಂದರು.
ಈ ಹಿಂದೆ ದಫ್ತರ್ ಇನ್ಸ್ಪಕ್ಷನ್ ಪದವನ್ನು ಬಳಸಲಾಗುತ್ತಿದ್ದು ಯಾರಾದರೂ ಅಧಿಕಾರಿಗಳು ಈ ಪದವನ್ನು ಕೇಳಿದ್ದೀರಾ..? ಈ ಪರೀವೀಕ್ಷಣೆ ಎಂದರೆ ಈ ಹಿಂದೆ ಅಧಿಕಾರಿಗಳು ಗಡ ಗಡ ನಡಗುತ್ತಿದ್ದರು. ಪ್ರತಿ ಇಲಾಖೆಗಳಲ್ಲೂ ಸಾರ್ವಜನಿಕರಿಂದ ಬಂದಂತಹ ಪ್ರತಿಯೊಂದು ಅರ್ಜಿಗಳು ದಾಖಲು ಮಾಡಿಕೊಂಡು ಸ್ವೀಕೃತಿ ನೀಡಬೇಕು ಹಾಗೂ ಅರ್ಜಿ ಸ್ಥಿತಿಯ ಬಗ್ಗೆ ಮಾಹಿತಿ ಪ್ರತಿಯೊಬ್ಬ ಅಧಿಕಾರಿಗಳಲ್ಲಿ ಇರಬೇಕು , ಹೊಂದಾಣಿಕೆ ಯೊಂದಿಗೆ ಅಧಿಕಾರಿಗಳು ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸಬೇಕೆಂದರು.
ಪಟ್ಟಣದ ಎಲ್ಲಾ ರಸ್ತೆಗಳಿಲ್ಲಿರುವ ಗುಂಡಿಗಳನ್ನು ಮುಚ್ಚಿಸಬೇಕು. ಎಲ್ಲಾ ರಸ್ತೆಗಳಿಗೂ ರೇಡಿಯಂ ಲೈಟಿಂಗ್ ಅಳವಡಿಸಬೇಕು. ನೃಪತುಂಗ ರಸ್ತೆ ಯಿಂದ ಬೈಪಾಸ್ ರಸ್ತೆಯ ವರೆವಿಗೂ ರಸ್ತೆ ಅಗಲೀಕರಣ ಮಾಡಿ , ದ್ವಿಪಥ ರಸ್ತೆ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಮಾಡಬೇಕು , ಬೈಪಾಸ್ ರಸ್ತೆಯ ಸಮೀಪದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಿ, ಇದರಿಂದಾಗಿ ವಾಹನ ಸವಾರರಿಗೆ ತೊಂದರೆ ಯುಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಶಿಫ್ ನ ಮಧುಗಿರಿ – ಪಾವಗಡ ರಸ್ತೆಯನ್ನು ನಾಲ್ಕು ಪಥ ರಸ್ತೆಗಳನ್ನಾಗಿ ಮಾಡುವ ಚಿಂತನೆ ಇದೆ. ಆದರೆ ರಸ್ತೆಯ ಬದಿ ನಡೆಯುತ್ತಿರುವ ಎತ್ತಿನ ಹೊಳೆ ಯೋಜನೆಯ ಪೈಪ್ ಲೈನ್ ಗಳನ್ನು ಹಾಕುವಾಗ ನಾಲ್ಕು ಪಥ ರಸ್ತೆ ನಿರ್ಮಾಣದ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸ ಬೇಕು. ಈ ಯೋಜನೆಯಡಿಯಲ್ಲಿ ದೊಡ್ಡೇರಿಯ ಎಂಟು ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆರೆಗಳಿಗೆ ನೀರು ಹರಿಯುವ ಜಾಗಗಳಲ್ಲಿ ಸರಿಯಾಗಿ ಗೇಟ್ ವಾಲ್ವ್ ಗಳನ್ನು ಆಳವಡಿಸಿಲ್ಲ , ಸಿದ್ದಾಪುರದಿಂದ ತಾಯಿಗೊಂಡನಹಳ್ಳಿ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಎತ್ತಿನಹೊಳೆ ಯೋಜನೆಯಲ್ಲಿ ಅನುಮೋದನೆಯಾಗಿರುವುದೇ ಒಂದು ಜಾಗ ಆದರೆ ನೀವು ಕೆಲಸ ಮಾಡಿರುವುದೇ ಒಂದು ಕಡೆ ಮುಂದೆ ಯಾವಾಗ ಬೇಕಾದರೂ ಸಮಸ್ಯೆಯಾಗಬಹುದು. ಇದನ್ನು ಸರಿಪಡಿಸಿಕೊಳ್ಳಿ ಎಂದು ಎತ್ತಿನಹೊಳೆ ಸಹಾಯಕ ನಿರ್ದೇಶಕ ಮುರಳಿ ರವರಿಗೆ ತಿಳಿಸಿದರು.
ಕಾಮಗಾರಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ :
ಹೊರಗಿನಿಂದ ಬರುವಂತಹ ಗುತ್ತಿಗೆದಾರರಿಗೆ ಅವಕಾಶ ಕೊಡ ಬೇಡಿ , ಹೊರಗಿನಿಂದ ಬಂದವರು ಕಳಪೆ ಕಾಮಗಾರಿಗಳನ್ನು ಮಾಡಿರುವ ನಿದರ್ಶನಗಳಿವೆ ಕಾಮಗಾರಿಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ. ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಕಡಿಮೆ ಹಣಕ್ಕೆ ಹಾಕಬಾರದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಯಾವುದೋ ಹೊರಭಾಗದ ಗುತ್ತಿಗೆದಾರರಿಗೆ ಕಾಮಗಾರಿ ನೀಡಬಾರದು. ಅವರು ಕಳಪೆ ಕಾಮಗಾರಿ ಮಾಡಿ ಬಿಲ್ ಮಾಡಿಕೊಂಡು ಹೊರಟು ಹೋದರೆ ಅವರನ್ನು ಎಲ್ಲಿ ಎಂದು ಹುಡುಕುವುದು. ಆದ್ದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮಾತ್ರ ಕಾಮಗಾರಿ ನೀಡಬೇಕು. ಇದರಿಂದ ಕಾಮಗಾರಿಗಳ ಗುಣಮಟ್ಟ ಹೆಚ್ಚುತ್ತದೆ. ಹೊರ ಭಾಗದವರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸದಂತೆ ಕ್ರಮ ಕೈಗೊಳ್ಳಿ ಎಂದರು.
ಮನೆ ನಿರ್ಮಾಣಕ್ಕೆ ಮರಳು ಅಗತ್ಯ ಆದರೆ ಬೃಹತ್ ಲಾರಿಗಳಲ್ಲಿ ಕ್ಷೇತ್ರದಿಂದ ಮರಳು ಹೊರಗಡೆ ಸಾಗಿಸುವಾಗಿಲ್ಲ , ಸಾರ್ವಜನಿಕರಿಗೆ ಅಧಿಕಾರಿಗಳು ತೊಂದರೆ ನೀಡಬಾರದು. ಮರಳು ಮಾರಿಕೊಂಡರೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಿ, ಜೈಲಿಗೆ ಬೇಕಾದರೂ ಹಾಕಿ ಬೇಡ ಎನ್ನುವುದಿಲ್ಲ. ಆದರೆ ಇತ್ತೀಚೆಗೆ ಮನೆ ಕಟ್ಟಲು ಮರಳು ಹೊಡೆಯುತ್ತಿದ್ದ ಟ್ರ್ಯಾಕ್ಟರ್ ಗಳನ್ನು ಹಿಡಿದು ಕೇಸ್ ಹಾಕಿದ್ದು, ಅವರ ಮನೆ ಹಾಳು ಮಾಡಲು ಹೊರಟಿದ್ದೀರಾ…? ತಾಲೂಕಿನಲ್ಲಿ ಎಲ್ಲಿ ಮರಳು ದಂದೆ ನಡೆಯುತ್ತಿದೆ ನೀವೇ ಹೇಳಿ, ಮನೆ ಕಟ್ಟಿಕೊಳ್ಳುವ ಬಡವರಿಗೆ ತೊಂದರೆ ಮಾಡಿದರೆ ನಾನು ಸಹಿಸುವುದಿಲ್ಲ. ಜನರಿಗೆ ತೊಂದರೆ ಮಾಡಿ ಎಂದು ಯಾವ ಕಾನೂನಿನಲ್ಲಿ ಹೇಳಿದೆ..? ಯಾವ ಗ್ರಾಮಗಳಲ್ಲಿ ಏನು ನಡೆಯುತ್ತಿದೆ ಎಂಬ ಎಲ್ಲಾ ಮಾಹಿತಿಯೂ ನನಗಿದೆ, ಯಾವುದೇ ಕಾರಣಕ್ಕೂ ಮನೆ ಕಟ್ಟಿಕೊಳ್ಳಲು ಮರಳು ಹೊಡೆದುಕೊಂಡರೆ ತೊಂದರೆ ಕೊಡಬೇಡಿ ಎಂದು ಪೋಲೀಸ್ ಇಲಾಖೆಗೆ ಸಚಿವರು ಸೂಚನೆ ನೀಡಿದರು
ಅನುದಾನ ಕೊರತೆ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿ ಕೊಟ್ಟರೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕಡಿಮೆ ಕೊಳವೆ ಗಳು ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಳವೆಬಾವಿಗಳನ್ನು ಮಂಜೂರು ಮಾಡಿಸಲಾಗುವುದು ಎಂದರು.
ಮೀನುಗಾರಿಕೆ ಇಲಾಖೆಯಲ್ಲಿ ಸಮುದಾಯಗಳಿಗೆ ಮೀಸಲಾತಿ ನಿಗಧಿ ಇಲ್ಲ. ಮೀನು ಹಿಡಿಯುವ ಅರ್ಹರಿಗೆ ಇಲಾಖೆ ವತಿಯಿಂದ ಸೌಲಭ್ಯಗಳನ್ನು ಕಲ್ಪಿಸಿ ಕೊಡಿ. ಮುಂದಿನ ದಿನಗಳಲ್ಲಿ 150 ಮನೆಗಳ ನಿರ್ಮಾಣ ಮಾಡಲಾಗುವುದು ಅರ್ಹರ ಪಟ್ಟಿಯನ್ನು ತಯಾರಿಸುವಂತೆ ಅಧಿಕಾರಿ ಮಹೇಶ್ವರ್ ಗೆ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಉಪವಿಭಾಗಾಧಿಕಾರಿ ರಿಷಿ ಆನಂದ್ , ತಹಸೀಲ್ದಾರ್ ಸಿಬ್ಗತ್ ವುಲ್ಲಾ , ಎಂ.ಎಸ್.ಮಲ್ಲಿಕಾರ್ಜುನಯ್ಯ , ತುಂಗೋಟಿ ರಾಮಣ್ಣ , ಬಿ.ನಾಗೇಶ್ ಬಾಬು , ಆಡಳಿತಾಧಿಕಾರಿ ಗಂಗಪ್ಪ , ಇಓ ಲಕ್ಷಣ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.