ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಗುರು ಪೂರ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಮಠದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಸಲ್ಲಿಸಲು ಹಾಗೂ ದರ್ಶನ ಪಡೆಯಲು ಗುರುವಾರ ಭಾರಿ ಸಂಖ್ಯೆಯಲ್ಲಿ. ಕರ್ನಾಟಕ , ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ
ಭಕ್ತ ಸಾಗರ ಹರಿದು ಬಂದಿದೆ. ರಾಯರ ದಿನವೆಂದೇ ನಂಬಲಾದ ಗುರುವಾರವೇ ಗುರು ಪೂರ್ಣಿಮೆ ಬಂದ ಕಾರಣ ಬುಧವಾರ ರಾತ್ರಿಯೇ ಭಾರಿ ಸಂಖ್ಯೆಯಲ್ಲಿ ಮಂತ್ರಾಲಯಕ್ಕೆ ಬಂದಿದ್ದಾರೆ. ತುಂಗಭದ್ರೆಯ ನದಿ ತಟದಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುವ ಮೂಲಕ ಗುರುವಾರ ರಾಯರ ದರ್ಶನ ಪಡೆದು ಪುನೀತರಾದರು.

ಭಕ್ತರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಪ್ರಯಾಸ ಪಡಬೇಕಾಯಿತು. ಬಂದಾವನದಿಂದ ಮಠದ ಹೊರಾಂಗಣದ ವರೆಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಕುಟುಂಬದ ಸದಸ್ಯರೊಂದಿಗೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಭಕ್ತಿ ಸೇವೆ ಸಲ್ಲಿಸಿದರು.