ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಖಡಕ್ ವಾರ್ನಿಂಗ್
ದೂರುಗಳು ಪುನರಾವರ್ತನೆಯಾದರೆ ಅಧಿಕಾರಿಗಳ ಮೇಲೇ ಕ್ರಿಮಿನಲ್ ಕೇಸ್
ಬಳ್ಳಾರಿ : ಬಂಟ್ ಭವನ ಬಳಿ ಇರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿಓ)ಗೆ ಶುಕ್ರವಾರ ಬೆಳಿಗ್ಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಶಾಸಕರು ಭೇಟಿ ನೀಡುವ ವೇಳೆ ಬೆಂಗಾವಲು ವಾಹನಗಳನ್ನು ಕೂಡ ತೊರೆದು ಒಂದೇ ವಾಹನದಲ್ಲಿ ತೆರಳಿದ್ದು, ಶಾಸಕರನ್ನು ಗಮನಿಸಿದ ಆರ್ ಟಿಓ ಕಚೇರಿ ಬಳಿಯಿದ್ದ ಮಧ್ಯವರ್ತಿಗಳು ಸ್ಥಳದಿಂದ ಕಾಲ್ಕಿತ್ತರು.
ಆರ್ ಟಿಓ ಶೇಖರ್ ಅವರ ಚೇಂಬರ್ ಗೆ ತೆರಳಿದ ಶಾಸಕ ಭರತ್ ರೆಡ್ಡಿ ಸಾರ್ವಜನಿಕರ ದೂರುಗಳ ಬಗ್ಗೆ ಸ್ಪಷ್ಟನೆ ಕೇಳಿದರು. ಸರ್ಕಾರ ನಿಗದಿಪಡಿಸಿರುವ ಶುಲ್ಕ ಹಾಗೂ ಕಾಲಮಿತಿಯೊಳಗೆ ಕೆಲಸ ಮಾಡಿ ಸಹಕರಿಸಬೇಕೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಕಚೇರಿಯ ಒಳಗೆ ಹಾಗೂ ಹೊರಗೆ ಸಾರ್ವಜನಿಕರಿಂದ ಲಂಚ ಕೇಳುವುದು, ಕೆಲಸವನ್ನು ಅನಗತ್ಯ ವಿಳಂಬ ಮಾಡುವುದು, ಸಮಯಕ್ಕೆ ಸರಿಯಾಗಿ ಜನರ ಕೆಲಸ ಮಾಡಿ ಕೊಡದೇ ಸತಾಯಿಸುವುದು ಸರಿಯಲ್ಲ ಎಂದು ಶಾಸಕ ನಾರಾ ಭರತ್ ರೆಡ್ಡಿ ಈ ವೇಳೆ ಹೇಳಿದರು.
ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಆರ್ ಟಿಓ ಶೇಖರ್; ಸಾರ್ವಜನಿಕರ ದೂರುಗಳು ನಿರಾಧಾರ ಎಂದು ಹೇಳಿಕೆ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ನಾರಾ ಭರತ್ ರೆಡ್ಡಿ, ಆರ್ ಟಿಓ ಶೇಖರ್ ಅವರ ಮೇಲೆ ಗರಂ ಆದರು. ಈ ರೀತಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ, ನಾನು ಸಾರ್ವಜನಿಕರ ದೂರುಗಳು ಬಂದ ಮೇಲೆ ಪರಿಶೀಲನೆ ಮಾಡಿಯೇ ಇಲ್ಲಿಗೆ ಭೇಟಿ ಕೊಟ್ಟಿರುವೆ. ನಾನು ಭೇಟಿ ನೀಡಿದ ವೇಳೆ ಮಧ್ಯವರ್ತಿಗಳು ನನ್ನನ್ನು ಕಂಡು ಹೆದರಿ ಓಡಿದ್ದಾರೆ. ಈ ರೀತಿ ಸಾರ್ವಜನಿಕರಿಂದ ದೂರುಗಳು ಪುನರಾವರ್ನೆಯಾದರೆ ನಿಮ್ಮ ಮೇಲೆಯೇ ನಾನೇ ಕ್ರಿಮಿನಲ್ ಕೇಸ್ ದಾಖಲಿಸಲು ಪೊಲೀಸರಿಗೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರ ದೂರಿನನ್ವಯ ಇತ್ತೀಚೆಗೆ ಸಬ್ ರೆಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದ್ದ ಶಾಸಕ ನಾರಾ ಭರತ್ ರೆಡ್ಡಿ ಅವರು, ಅಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದರು. ಈ ವೇಳೆ ಆರ್ ಟಿಓ ಕಚೇರಿಯಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಅಲ್ಲಿನ ಅಧಿಕಾರಿಗಳಿಗೆ ತಾಕೀತು ಮಾಡಿ ಸಾರ್ವಜನಿಕರ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಸಾಕಷ್ಟು ಜನರು ನೇರವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಮನವಿ ಮಾಡಿದ್ದರು.