ನಾನು ಜನರ ಋಣದಲ್ಲಿರುವ ಸೇವಕ: ಶಾಸಕ ನಾರಾ ಭರತ್ ರೆಡ್ಡಿ !
ಬಳ್ಳಾರಿ, ಜೂ.25: ನಾನು ಶಾಸಕನಾಗಿರಬಹುದು, ಆದರೆ ನಾನು ನಿಮ್ಮ ಋಣದಲ್ಲಿರುವೆ, ನಿಮ್ಮ ಸೇವಕನಾಗಿ ಇರುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬುಧವಾರ ಸಂಜೆ ನಗರದ ಖಾಸಗಿ ಹೊಟೇಲಿನಲ್ಲಿ ಹಿಂದೂ ಸಮಾಜದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಗರದ 24 ದೇವಸ್ಥಾನಗಳಿಗೆ ನಾನು ಅನುದಾನ ತಂದಿರಬಹುದು, ಒಂದಿಷ್ಟು ಅಭಿವೃದ್ಧಿ ಕೆಲಸ ಮಾಡಿರಬಹುದು, ನಾನೇನೇ ಮಾಡಿದರೂ, ಯಾವ ಹುದ್ದೆಗೆ ಏರಿದರೂ ನಿಮ್ಮ ಋಣದಲ್ಲಿರುತ್ತೇನೆ, ನಿಮ್ಮ ಸೇವಕನಾಗಿರುತ್ತೇನೆ ಎಂದರು.
ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಇದ್ದವನು ನನಗೆ ಜನರ, ಕನಕದುರ್ಗಮ್ಮ ದೇವಿಯ ಹಾಗೂ ಕೋಟೆ ಮಲ್ಲೇಶ್ವರ ಸ್ವಾಮಿಯ ಆಶೀರ್ವಾದದಿಂದ ಶಾಸಕನಾಗಿರುವೆ, ನಾನು ಶಾಸಕ ಎಂದಾಕ್ಷಣ ನೀವು ನನ್ನ ಅಣತಿಯಂತೆ ನಡೆಯಬೇಕೆಂದು ಬಯಸುವುದಿಲ್ಲ, ಅಧಿಕಾರ ತಾತ್ಕಾಲಿಕ ಎಂದು ಹೇಳಿದ ಅವರು, ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಮಾತ್ರ ನಾನು ಬೆಳೆಯಲು ಸಾಧ್ಯ ಎಂದರು.
ನಾನು ಮಾಡಿದ ಧಾರ್ಮಿಕ- ಸಾಮಾಜಿಕ ಸೇವೆಯೇ ಇಂದು ನಿಮ್ಮನ್ನೆಲ್ಲ ಕಾಪಾಡುತ್ತಿದೆ ವಿನಹ ನಾನು ಸಂಪಾದಿಸಿದ ಹಣವಲ್ಲ ಎಂದು ನಮ್ಮ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿಯವರು ಮಕ್ಕಳಾದ ನಮಗೆ ಆಗಾಗ ಹೇಳುತ್ತಿರುತ್ತಾರೆ ಎಂದ ಅವರು ನಾವು ಮಾಡುವ ಧಾರ್ಮಿಕ ಸೇವೆಯೇ ನಮ್ಮನ್ನೆಲ್ಲ ಕಾಪಾಡುತ್ತದೆ ಎಂದರು.
ನಮ್ಮ ತಂದೆಯವರ ಮಾರ್ಗದರ್ಶನದಂತೆ ನಾನು ನಡೆಯುತ್ತಿರುವೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ನಾನು ಶಾಸಕನಾದ ಸಂದರ್ಭ ತಾಯಿ ಕನಕದುರ್ಗಮ್ಮ ದೇವಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದೆ, ನಾನು ಮೊದಲ ಭೂಮಿ ಪೂಜೆ ಮಾಡಿದ್ದೇ ಕನಕದುರ್ಗಮ್ಮ ದೇವಸ್ಥಾನದ ಕಾಮಗಾರಿಯದ್ದು, ತಾಯಿಯ ಆಶೀರ್ವಾದ ನಿಮ್ಮೆಲ್ಲರ ಆಶೀರ್ವಾದದಿಂದಲೇ ನನಗೆ ಈ ಸ್ಥಾನ ದೊರಕಿದೆ ಎಂದರು.
ನಮ್ಮ ಸಿಎಂ, ಡಿಸಿಎಂ ಹಾಗೂ ಎಲ್ಲ ಇಲಾಖೆಗಳ ಸಚಿವರು ಎಲ್ಲರೂ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ, ಬಳ್ಳಾರಿ ನಗರ ಕ್ಷೇತ್ರಕ್ಕೆ 4 ನೂರು ಕೋಟಿ ಅನುದಾನ ಮಂಜೂರಾಗಿದೆ ಎಂದರು.
ದೂರದ ಪಾವಗಡಕ್ಕೆ ತುಂಗಭದ್ರಾ ಡ್ಯಾಮಿನಿಂದ ನೇರವಾಗಿ ನೀರು ಹೋಗುತ್ತದೆ, ಬಳ್ಳಾರಿಗೆ ಯಾಕಿಲ್ಲ? ಎಂದು ಸಿಎಂ-ಡಿಸಿಎಂ ಅವರನ್ನು ಕೇಳಿದಾಗ ಯೋಜನೆ ರೂಪಿಸುವಂತೆ ಸೂಚಿಸಿದರು, ಅದರಂತೆ ಈಗ 1200 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, 270 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಶುರುವಾಗಿದೆ, ಪ್ರಾಥಮಿಕ ಹಂತದಲ್ಲಿ ನೀರು ಸರಬರಾಜು ವ್ಯವಸ್ಥೆಯ ಕಾಮಗಾರಿ ಆರಂಭಿಸಲಾಗುವುದು ಎಂದರು.
ನಾನು, ನಮ್ಮ ಕುಟುಂಬ ಕೊಟ್ಟ ಮಾತಿನಂತೆ ನಡೆದುಕೊಂಡು ಬಂದಿದ್ದೇವೆ, ಅದೇ ರೀತಿ ಚುನಾವಣೆಯ ಸಂದರ್ಭ ನಾನು ಕೊಟ್ಟ ಭರವಸೆಯಂತೆ ಶಾಸಕನಾದ ನಂತರ ಮನೆ ಮನೆಗೆ ಭೇಟಿ ನೀಡುವ ಉದ್ಧೇಶದಿಂದ ಸಲಾಂ ಬಳ್ಳಾರಿ ಅಭಿಯಾನ ಆರಂಭಿಸಿರುವೆ ಎಂದರು.
ಕೇವಲ ಅಧಿಕಾರಸ್ಥರಿಂದ ಎಲ್ಲವೂ ಸಾಧ್ಯವಿಲ್ಲ ದೈವ ಬಲವೂ ಇರಬೇಕು, ನಮ್ಮದು ಧಾರ್ಮಿಕ ಪರಂಪರೆ ಇರುವ ದೇಶ, ಗುಡಿ ದೇವಸ್ಥಾನಗಳು ಸಮರ್ಪಕವಾಗಿದ್ದರೆ ನಮ್ಮ ಊರುಗಳೂ ಸಮೃದ್ಧಿಯಾಗಿರುತ್ತವೆ ಎಂದ ಅವರು, ಪ್ರಖ್ಯಾತವಲ್ಲದ ದೇವಸ್ಥಾನಗಳಿಗೆ ಅನುದಾನ ನೀಡದಂತೆ ಕೆಲವರು ಸಲಹೆ ನೀಡಿದರು; ಆದರೆ ನಾನು ಎಲ್ಲ ದೇವಸ್ಥಾನಗಳಿಗೂ ಅನುದಾನ ನೀಡಿದೆ, ನನಗೆ ದೇವಸ್ಥಾನಗಳಲ್ಲಿರುವ ದೇವರು ಕಂಡಿತು ಅವರಿಗೆ ದೇವಸ್ಥಾನದ ಪ್ರಖ್ಯಾತಿ ಕಂಡಿತು, ಹೀಗಾಗಿ ಸಣ್ಣ ದೇವಸ್ಥಾನಗಳಿಗೂ ಅನುದಾನ ತಂದೆ ಎಂದರು.
ಸರ್ವೇ ಜನ ಸುಖಿನೋ ಭವಂತು ಎಂದು ಮರ್ಯಾದಾ ಪುರುಷೋತ್ತಮ ರಾಮ ಹೇಳಿದ ಹಾಗೆ ನಾನು ಎಲ್ಲ ಜಾತಿ, ಧರ್ಮದವರ ಪ್ರಾರ್ಥನಾ ಮಂದಿರ, ದರ್ಗಾ, ಚರ್ಚ್ ಗಳಿಗೆ ಅನುದಾನ ತಂದಿರುವೆ, ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಜನಾಂಗದವರನ್ನು ಜೊತೆಗೂಡಿಸಿಕೊಂಡು ಹೋಗುವುದೇ ನಿಜವಾದ ಹಿಂದೂ ಧರ್ಮ ಪಾಲನೆ ಎಂದರು.
ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಸೌಹಾರ್ದತೆಯಿಂದ ಬಾಳುತ್ತಿರುವುದರಿಂದಲೇ ಬಳ್ಳಾರಿ ನಗರ ಸಮೃದ್ಧವಾಗಿದೆ ಎಂದು ಹೇಳಿದ ಅವರು, ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೇವೆ, ಇದು ದೇಶಕ್ಕೆ ಮಾದರಿ ಎಂದರು.
ಜಗತ್ತಿನ ಹಲವು ಕಡೆ ಯುದ್ಧದ ಪರಿಸ್ಥಿತಿಯಿದೆ ಆದರೆ ಭಾರತ ಶಾಂತಿ, ಸಹನೆ, ಅಹಿಂಸೆಯಿಂದ ಇದೆ, ಇದಕ್ಕೆ ಕಾರಣ ಹಿಂದೂ ಧರ್ಮದ ತತ್ವ ಸಿದ್ಧಾಂತ ಎಂದರು.
ದೇವಸ್ಥಾನಗಳಿಗೆ ಅನುದಾನ ಕೇಳಿದಾಗ ಸಿಎಂ ಡಿಸಿಎಂ ಅವರು ಪ್ರೋತ್ಸಾಹಿಸಿದರು, ನಿನಗೆ ಎಷ್ಟು ಅನುದಾನ ಬೇಕೋ? ತಗೋ ಎಂದು ಅವರು ಹೇಳಿರುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದ ಬದ್ರಿ ನಾರಾಯಣ ದೇವಸ್ಥಾನದ ಅರ್ಚಕ ಗುರುರಾಜ ಆಚಾರ್ ಮಾತಾಡಿ; ನಗರದ 24 ದೇವಸ್ಥಾನಗಳಿಗೆ ಅಂದಾಜು 5 ಕೋಟಿ ಅನುದಾನ ತಂದ ನಾರಾ ಭರತ್ ರೆಡ್ಡಿ ನಮ್ಮ ಶಾಸಕರಾಗಿರುವುದು ನಮ್ಮ ಸುದೈವ, ಈ ವ್ಯಕ್ತಿ ರಾಜ್ಯಕ್ಕೆ ಸಿಎಂ, ದೇಶಕ್ಕೆ ಪ್ರಧಾನಿಯಾದರೆ ರಾಜ್ಯದ-ದೇಶದ ದೇವಸ್ಥಾನಗಳು ಸಮೃದ್ಧಿ ಕಾಣಲಿವೆ, ಹೀಗಾಗಿ ಅವರಿಗೆ ರಾಜಕೀಯವಾಗಿ ಇನ್ನೂ ದೊಡ್ಡ ಹುದ್ದೆ, ಅಧಿಕಾರ ಸಿಗಲಿ ಎಂದರು.
ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ರಾಜೇಶ್ವರಿ ಮಾತನಾಡಿ; ಶಾಸಕ ಭರತ್ ರೆಡ್ಡಿಯವರು ನಗರ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದ್ದಾರೆ, ಸರ್ವ ಜನಾಂಗದವರ ಹಿತ ಬಯಸುವ ಇವರಿಗೆ ರಾಜಕೀಯವಾಗಿ ಇನ್ನು ಹೆಚ್ಚಿನ ಅಧಿಕಾರ ದೊರೆಯಲಿ ಎಂದರು.
ಈ ಸಂದರ್ಭ ಅನುದಾನ ಪಡೆದಿರುವ 24 ದೇವಸ್ಥಾನಗಳ ಪ್ರಮುಖರು, ಹಿಂದೂ ಸಮಾಜದ ವತಿಯಿಂದ ಶಾಸಕ ನಾರಾ ಭರತ್ ರೆಡ್ಡಿಯವರನ್ನು ಸನ್ಮಾನಿಸಿದರು.
ವೇದಿಕೆಯ ಮೇಲೆ ಉಪ ಮೇಯರ್ ಡಿ.ಸುಕುಂ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಪಿ.ಗಾದೆಪ್ಪ, ಎಂ.ಪ್ರಭಂಜನಕುಮಾರ್, ರಾಮಾಂಜನೇಯ, ಪೇರಂ ವಿವೇಕ್, ಉಮಾದೇವಿ, ಜಾನಕಮ್ಮ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಬಿಆರೆಲ್ ಸೀನಾ, ಮಂಜುಳಾ, ಮಾಜಿ ಮೇಯರ್ ನಾಗಮ್ಮ, ಚಂಪಾ ಚವ್ಹಾಣ, ಯಶೋಧಾ, ಸಿದ್ಧೇಶ್ ಮೊದಲಾದವರು ಇದ್ದರು.