ಹೆಚ್ಚಾಯ್ತು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಬಿಗ್ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಬಿಗ್ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ಬಾಸ್ ಮನೆಯಿಂದ ಸ್ಪರ್ಧಿ ವರ್ತೂರ್ ಸಂತೋಷ್ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಾಗಿನಿಂದ ಇದು ಆರಂಭವಾಗಿದೆ.
ಸಿನೆಮಾ ನಟರಾದ ಜಗ್ಗೇಶ್, ನಟ ದರ್ಶನ್, ಉಪೇಂದ್ರ, ಸಿನೆಮಾ ನಿರ್ಮಾಪಕ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅಲ್ಲದೆ, ಪ್ರಭಾವಿಗಳಾದ ಧನಂಜಯ ಗುರೂಜಿ ಮುಂತಾದವರ ಬಳಿಯೂ ಹುಲಿ ಉಗುರು ಇರುವ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಇವರ ಬಂಧನ ಯಾಕಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. ವರ್ತೂರ್ ಸಂತೋಷ್ಗೆ ಒಂದು ನ್ಯಾಯ ಮತ್ತು ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾನಾ ಎಂಬ ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ನಟ ಜಗ್ಗೇಶ್ ಹುಲಿ ಉಗುರು ಇರುವ ಲಾಕೆಟ್ ಅನ್ನು ಕ್ಯಾಮೆರಾ ಮುಂದೆಯೇ ಹೊರ ತೆಗೆದು 20ನೇ ಹುಟ್ಟುಹಬ್ಬಕ್ಕೆ ನಮ್ಮ ತಾಯಿ ಮಾಡಿಸಿಕೊಟ್ಟರು. ಇದು ನಿಜವಾದ ಹುಲಿ ಉಗುರು ಎಂದು ಹೇಳಿದ್ದರು. ಇದೀಗ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ನೆಟ್ಟಿಗರು, ಜಗ್ಗೇಶ್ ಅವರನ್ನು ಯಾವಾಗ ಜೈಲಿಗೆ ಕಳುಹಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ದರ್ಶನ್, ಉಪ್ಪೇಂದ್ರರನ್ನು ಯಾವಾಗ ಜೈಲಿಗೆ ಕಳಿಸೋದು? ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ.
ವಿನಯ್ ಗುರೂಜಿ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಅಧಿಕಾರದ ದರ್ಪ ಸಾಮಾನ್ಯ ಜನರ ಮೇಲೆ ಮಾತ್ರಾನಾ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಒಂದು ವರ್ಗ ವರ್ತೂರ್ ಸಂತೋಷ್ಗೆ ಬೆನ್ನಿಗೆ ನಿಂತಿದ್ದರೆ, ಇನ್ನೊಂದು ವರ್ಗ ವರ್ತೂರ್ ಸಂತೋಷ್ ಅವರನ್ನು ಟೀಕಿಸುತ್ತಿದ್ದಾರೆ. ಅವರ ಹಳೆಯ ವಿಡಿಯೋವೊಂದರಲ್ಲಿ “ಎಲ್ಲರೂ ಅವರಪ್ಪನ ದುಡ್ಡಿಲ್ಲಿ ಮಜಾ ಮಾಡುತ್ತಾನೆ ಅಂತಾರೆ. ಹೌದು ನಾನು ನಮ್ಮಪ್ಪನ ದುಡ್ಡಲ್ಲಿ ಮಜಾ ಮಾಡುತ್ತೇನೆ. ನಮ್ಮಪ್ಪನಿಗೆ ಹುಟ್ಟಿದರೆ ಅವರು ಮಜಾ ಮಾಡಲಿ’ ಎಂದಿದ್ದರು. ಇದೀಗ ಆ ವಿಡಿಯೋವನ್ನು ಶೇರ್ ಮಾಡಿಕೊಂಡು ದುಡ್ಡು ನಿಮ್ಮ ಅಪ್ಪಂದೆ ಆದರೆ, ಹುಲಿ ಉಗುರು ನಿಮ್ಮ ಅಪ್ಪನದಲ್ಲ ಮತ್ತು ಕಾನೂನಿನ ಮುಂದೆ ಯಾರಪ್ಪನ ಆಟವೂ ನಡೆಯಲ್ಲ ಎಂದು ಹಳೇ ವಿಡಿಯೋ ವೈರಲ್ ಆಗುತ್ತಿದ್ದಾರೆ.
ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಕ್ರಮ.. ಒಂದು ಯಾರ ಬಳಿಯಾದರೂ ಇರುವುದು ನಿಜವಾದ ಹುಲಿ ಉಗುರು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದ್ದಲ್ಲಿ ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.
ಒತ್ತಡಕ್ಕೆ ಬಿದ್ದ ಅಧಿಕಾರಿಗಳು ಸೆಲೆಬ್ರಿಟಿಗಳಿಗೆ ನೋಟಿಸ್ ನೀಡಿದ್ದಾರಾದರೂ ಜನರ ಸಿಟ್ಟು ಇಳಿದಿಲ್ಲ. ವರ್ತೂರ್ ರನ್ನು ಬಂಧಿಸಿದಂತೆ ಬಂಧಿಸಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತೋರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.