ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರರವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚರಾಜ್ಯಗಳಿಗೆ ಹಣದ ಭಾಗ್ಯ, ಕರ್ನಾಟಕದ ಜನತೆಗೆ ಕತ್ತಲ ಭಾಗ್ಯ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿಎಂ, ಡಿಸಿಎಂ ನಡುವಿನ ಅಧಿಕಾರದ ಕಾದಾಟದ ಪರಿಣಾಮವಾಗಿ ಸಿದ್ದರಾಮಯ್ಯರನ್ನು ಮನೆಗೆ ಕಳಿಸಲು ಶಿವಕುಮಾರ್, ಡಿ.ಕೆ.ಶಿವಕುಮಾರರನ್ನು ಜೈಲಿಗೆ ಕಳುಹಿಸಲು ಸಿದ್ದರಾಮಣ್ಣ ಪ್ರಯತ್ನದಲ್ಲಿದ್ದಾರೆ. ಈ ಕಾದಾಟದಲ್ಲಿ ಕರ್ನಾಟಕ ಬಡವಾಗಿದೆ ಎಂದು ವಿಶ್ಲೇಷಿಸಿದರು.
ಅಧಿಕಾರಕ್ಕೆ ಬರುತ್ತಿದ್ದಂತೆ ವರ್ಗಾವಣೆಯ ದಂಧೆ ನಡೆಯಿತು. ವರ್ಗಾವಣೆಗೆ ರೇಟ್ ನಿಗದಿ ಮಾಡಿದರು. ವರ್ಗಾವಣೆಯಿಂದ ಆರಂಭವಾದ ಭ್ರಷ್ಟಾಚಾರವು ಬಿಬಿಎಂಪಿ ಗುತ್ತಿಗೆದಾರರ ಹಣ ಬಿಡುಗಡೆಗೆ ಕಮಿಷನ್ ಪಡೆಯುವ ಮೂಲಕ ಮುಂದುವರೆಯಿತು. ದಸರಾ ಕಲಾವಿದರಿಂದ ಹಣ ಕೇಳಿದ ಲಜ್ಜೆಗೇಡಿತನದ ಸರಕಾರ ಇದೆಂದು ಟೀಕಿಸಿದರು.
ಪಂಚರಾಜ್ಯಗಳಿಗೆ ಹಣದ ಹೊಳೆ ಹರಿಸುತ್ತಿದ್ದಾರೆ. ಗುತ್ತಿಗೆದಾರರ ಬಳಿ ಸಿಕ್ಕಿದ ಹಣದ ಬಗ್ಗೆ ಇಡಿ ತನಿಖೆ ನಡೆಸಬೇಕು. ಸರಕಾರವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು. ಕೇವಲ 4 ತಿಂಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ 251 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆಯಿಂದ ಕರೆಂಟಿಲ್ಲ. ರೈತರಿಗೆ ಪರಿಹಾರ ಕೊಡುತ್ತಿಲ್ಲ. ಸಾಲ ಮಾಡಿದ ರೈತರು ಬರ, ವಿದ್ಯುತ್ ಕೊರತೆಯಿಂದ ಕಷ್ಟದಲ್ಲಿದ್ದಾರೆ ಎಂದು ಆಕ್ಷೇಪಿಸಿದರು.
ಜನ ರೋಸಿಹೋಗಿದ್ದಾರೆ. ಜನರು ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಒಳಗಡೆ ಗುಂಪುಗಾರಿಕೆ ಹೆಚ್ಚಾಗಿದೆ. ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋಗಿದ್ದಾರೆ. ಅಲ್ಲಿಂದ ಕೆಲವರು ಬಸ್ ಹತ್ತಿದ್ದಾರೆ. ಅಲ್ಲಿ ಬಸ್ ಹತ್ತಿದವರನ್ನು ಇಳಿಸಲು ಶಿವಕುಮಾರ್ ಹೋಗಿದ್ದಾರೆ. ಬೇರೆ ಕಡೆ ಇನ್ನೊಂದಿಪ್ಪತ್ತು ಜನ ಬಸ್ ಹತ್ತಲು ರೆಡಿ ಆಗಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಆಡಳಿತ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.
ಸರಕಾರದಲ್ಲಿ ಹಣವಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಸಚಿವರು ಮಜಾ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರಾ ಎಂದು ಪ್ರಶ್ನಿಸಿದರು. ಬರದ ವೈಜ್ಞಾನಿಕ ಅಧ್ಯಯನ ನಡೆಸಿ ಪರಿಹಾರ ಕೊಡಬೇಕು ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.