ಆನೇಕಲ್: ಲಾರಿಯಲ್ಲಿ ಪಟಾಕಿ ಅನ್ ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಅಂಗಡಿ ಹೊತ್ತಿ ಉರಿದಿದ್ದು, 12 ಜನರು ಸಜೀವದಹನವಾಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.
ನವೀನ್ ಎಂಬುವರಿಗೆ ಸೇರಿದ ಪಟಾಕಿ ಮಳಿಗೆಯಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ದೊಡ್ಡ ಮಳಿಗೆಯಾಗಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗುವುದರೊಂದಿಗೆ 1 ಕ್ಯಾಂಟ್ರೋ, 2 ಬೊಲೆರೋ, 4 ಬೈಕ್ಗಳು ಸಹ ಬೆಂಕಿಗಾಹುತಿ ಆಗಿವೆ.
ರಾಜ್ಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿರುವ ಅಗ್ನಿ ಅನಾಹುತದಲ್ಲಿ ಕಾರ್ಮಿಕರು ಸೇರಿದಂತೆ ಇತರರು ಮೃತಪಟ್ಟ ವಿಷಯ ತಿಳಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರು, ಘಟನಾ ಸ್ಥಳಕ್ಕೆ ಅಧಿಕಾರಿ ವರ್ಗವನ್ನು ತೆರಳಲು ಸೂಚಿಸಿ ಅಗತ್ಯ ತುರ್ತು ಸೇವೆಗಳನ್ನು ಕೈಗೊಳ್ಳಲು ಆದೇಶಿಸಿದ್ದಾರೆ. ಹಾಗೆಯೇ ದುರ್ಘಟನೆಯಲ್ಲಿ ಅಸುನೀಗಿದವರ ಕುಟುಂಬಗಳಿಗೆ ತೀವ್ರ ಸಂತಾಪಗಳನ್ನು ಸಲ್ಲಿಸಿದ್ದಾರೆ.
ದುರ್ಘಟನೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಸಮಗ್ರ ವರದಿ ನೀಡುವಂತೆ ಹಾಗೂ ಈ ಕೂಡಲೇ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ್ದಾರೆ. ಜೊತೆಗೆ ಸರ್ಕಾರದಿಂದ ನೀಡಬಹುದಾದ ಪರಿಹಾರದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಂಬಂಧಿಸಿದ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.