ಪ್ರವಾಸೋದ್ಯಮ ಬೆಳೆದರೆ ಸಾಂಸ್ಕೃತಿಕ‌ ಹಿರಿಮೆ ಹೆಚ್ಚಿ ಆರ್ಥಿಕತೆಗೆ ಚೈತನ್ಯ ಬರುತ್ತದೆ : ಮುಖ್ಯಮಂತ್ರಿ

ಇತಿಹಾಸ ತಿಳಿಯದವರು ಭವಿಷ್ಯ ರೂಪಿಸಲಾರರು ಎನ್ನುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ಯಾರೂ ಮರೆಯಬಾರದು

ಬೆಂಗಳೂರು : ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆದರೆ ನಾಡಿನ ಸಾಂಸ್ಕೃತಿಕ‌ ಹಿರಿಮೆ ಹೆಚ್ಚಿ ಆರ್ಥಿಕತೆಗೆ ಚೈತನ್ಯ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಪ್ರವಾಸೋದ್ಯಮ ಮತ್ತು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ “ನಮ್ಮ ಸ್ಮಾರಕ: ನಮ್ಮ ಪರಂಪರೆ, ನಮ್ಮ ಗುರುತು, ನಮ್ಮ ಹೆಮ್ಮೆ” ಅಭಿಯಾನದ ಸಂವಾದ ಮತ್ತು ಡಿಜಿಟಲ್ ವೇದಿಕೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇತಿಹಾಸ ತಿಳಿಯದವರು ಭವಿಷ್ಯ ರೂಪಿಸಲಾರರು ಎನ್ನುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ಯಾರೂ ಮರೆಯಬಾರದು. ನಮ್ಮ ಇತಿಹಾಸ, ಪರಂಪರೆಯನ್ನು ಈಗಿನ ಪೀಳಿಗೆಗೆ ಅರ್ಥ ಮಾಡಿಸಲು, ಮುಂದಿನ ತಲೆ ಮಾರುಗಳಿಗೆ ನಮ್ಮತನದ ಮಹತ್ವವನ್ನು ಸಾರಲು ಸ್ಮಾರಕಗಳ ರಕ್ಷಣೆ ಅತ್ಯಗತ್ಯ ಎಂದರು.

 

ಸ್ಮಾರಕಗಳ ರಕ್ಷಣೆಗೆ ಸರ್ಕಾರದ ಜತೆಗೆ ಸಾರ್ವಜನಿಕರು ಕೈ ಜೋಡಿಸಿದರೆ, ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬಹುದು. 

ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಅಧ್ಯಾತ್ಮಿಕ ಮತ್ತು ಪರಿಸರ ಪ್ರವಾಸಿ ಕೇಂದ್ರಗಳಿಗೆ, ದೇವಾಲಯಗಳಿಗೆ ಬಡವರೂ ಹೋಗಲು ಅವಕಾಶ ಕಲ್ಪಿಸಬೇಕು ಎನ್ನುವ ಕಾಳಜಿ “ಶಕ್ತಿ” ಯೋಜನೆಯ ಹಿಂದಿದೆ. 60 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆದು ದೇವಸ್ಥಾನಗಳ ಆದಾಯ ಹೆಚ್ಚಾಗಿದೆ. ಆರ್ಥಿಕತೆಗೆ ಚೈತನ್ಯ ಬಂದು ವ್ಯಾಪಾರ, ವಹಿವಾಟು ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಶಕ್ತಿ ಯೋಜನೆ ಹಿಂದೆ ಇಷ್ಟೆಲ್ಲಾ ಕಾಳಜಿಗಳು ಕೆಲಸ ಮಾಡಿವೆ.  ಕೇವಲ ಚುನಾವಣೆ ಕಾರಣಕ್ಕೆ ಮಾಡಿದ್ದಲ್ಲ ಎಂದು ವಿವರಿಸಿದರು.

ಸ್ಮಾರಕಗಳನ್ನು ದತ್ತು ಪಡೆಯಲು ಮತ್ತು ಸಂರಕ್ಷಿಸಲು ಸ್ವಯಂ ಸ್ಫೂರ್ತಿಯಿಂದ ಮುಂದೆ ಬಂದಿರುವ ಕೈಗಾರಿಕೋದ್ಯಮಿಗಳು ಮತ್ತು ಸಂಘ-ಸಂಸ್ಥೆಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

 

ಪ್ರವಾಸೋದ್ಯಮ ಸಚಿವ ಡಾ.ಎಚ್.ಕೆ.ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಸ್ಟಾರ್ಟ್ ಅಪ್ ವಿಜನ್ ಗ್ರೂಪ್ ಮತ್ತು ಕಲ್ಕಿ ಫೌಂಡೇಶನ್ ಅಧ್ಯಕ್ಷರಾದ ಪ್ರಶಾಂತ್ ಪ್ರಕಾಶ್ ಅವರು ಆಗಮಿಸಿದ್ದರು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಇಲಾಖೆ ನಿರ್ದೇಶಕರಾದ ವಿ.ರಾಮ್ ಪ್ರಸಾತ್ ಮನೋಹರ್, ಇಲಾಖೆಯ ಆಯುಕ್ತರಾದ ಎ.ದೇವರಾಜು ಸೇರಿ ಹಲವರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಹೈಲೈಟ್ಸ್

ವಿಶ್ವ ಪರಂಪರೆ ತಾಣವೆಂದು ಘೋಷಿಸಲಾದ ಹೊಯ್ಸಳರ ವಾಸ್ತುಶಿಲ್ಪಿಯ ಸಮಗ್ರ ಭಾಗಗಳನ್ನು ಇನ್ ಟ್ಯಾಕ್ ಸಂಸ್ಥೆ ವತಿಯಿಂದ ಪ್ರಸ್ತುತ ಪಡಿಸಲಾಯಿತು

ಬ್ರಿಗೇಡ್ ಸಂಸ್ಥೆಯೊಂದಿಗೆ ವೆಂಕಟಪ್ಪ ಚಿತ್ರಶಾಲೆಯ ನವೀಕರಣ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು

ಕಲ್ಕಿ ಸಂಸ್ಥೆಗೆ ಯೋಜನಾ ನಿರ್ವಹಣೆ ಘಟಕದ ಒಡಂಬಡಿಕೆ ಪತ್ರಕ್ಕೆ ಸಹಿ

ಸಂರಕ್ಷಣಾ ಸ್ಮಾರಕಗಳ ಯೋಜನೆಗೆ ಒಳಪಡಲು ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳಿಗೆ ಆಶಯಪತ್ರ ವಿತರಿಸಲಾಯಿತು

 

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಸ್ಮಾರಕಗಳ 3ಡಿ ಲೇಸರ್ ಸ್ಕ್ಯಾನಿಂಗ್ ಪ್ರಾತ್ಯಕ್ಷಿಕೆ

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top