ಆಡಳಿತದ ಮೇಲೆ ಹಿಡಿತ ಕಳೆದುಕೊಂಡ ಸಿಎಂ

ಬಳ್ಳಾರಿ: ‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದು, ಈ ಹಿಂದೆ ಐದು ವರ್ಷದ ಆಡಳಿತ ನಡೆಸಿದ ಸಿದ್ದರಾಮಯ್ಯನವರಿಗೂ, ಈಗಿನ ಸಿಎಂ ಸಿದ್ದರಾಮಯ್ಯನವರಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

          ಬಳ್ಳಾರಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿಂದು ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು 2012 ರಿಂದ 2018ರವರೆಗೆ ಸಿಎಂ ಆಗಿದ್ದ ಸಂದರ್ಭದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಆ ರೀತಿ ಇಲ್ಲ ಅನ್ನಿಸುತ್ತಿದೆ. ಅವರ ಮೇಲೆ ಕಾಂಗ್ರೆಸ್ ನಾಯಕರ ಒತ್ತಡ ಕಂಡು ಬರುತ್ತಿದೆ. ಇದು ಆಡಳಿತದ ಮೇಲೆ ಮತ್ತು ರಾಜಕೀಯದ ಮೇಲೂ ಪ್ರಭಾವ ಬೀರಿದೆ ಎಂದರು.

          ಕೇವಲ ಮೂರುವರೆ ತಿಂಗಳ ಅವಧಿಯಲ್ಲಿನ ಅವರ ಆಡಳಿತ ನೋಡಿದರೆ, ಅವರು ಹಿಡಿತವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ. ಅವರ ‘ಆರ್ಥಿಕ ನಿರ್ವಹಣೆಯೂ ಬಿಗಿ ಕಳೆದುಕೊಳ್ಳುತ್ತಿದೆ. ಅವರು ಅಸಹಾಯಕರಾಗಿದ್ದು, ಇದರಿಂದ ಆರ್ಥಿಕವಾಗಿ ‘ಅಧೋಗತಿಗೆ ಹೋದರೂ ಅಚ್ಚರಿ ಏನಿಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

          ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಜೋರಾಗಿ ನಡೆದಿದೆ. ಸಿಎಂ ಕಛೇರಿಯಲ್ಲಿಯೇ ವರ್ಗಾವಣೆ ದಂಧೆ ನಡೆಯುತ್ತಿದ್ದರೂ, ಅದನ್ನು ತಡೆಯುವಲ್ಲಿ ಅವರು ವಿಫಲವಾಗಿದ್ದಾರೆ. ಕಾಂಗ್ರೆಸ್ ಶಾಸಕರೇ ಅಸಮಾಧಾನದಿಂದ ಮಾತನಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅವರ ಆಡಳಿತ ಶೈಲಿಗೆ ಹಿಡಿದ ಕನ್ನಡಿ ಎಂದು ಟೀಕಿಸಿದರು.

 

          ಹಿರಿಯ ಕಾಂಗ್ರೆಸ್ ಧುರೀಣ ಬಿ.ಕೆ.ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಪರೋಕ್ಷವಾಗಿ ನಡೆಸಿರುವ ವಾಗ್ದಾಳಿಯು ಪರಿಸ್ಥಿತಿಯನ್ನು ಪ್ರತಿಬಿಂಬಿಸಿದೆ. ಹರಿಪ್ರಸಾದ್ ಅವರ ಟೀಕೆಗೆ ಪ್ರತಿಕ್ರಿಯಿಸಲೂ ಅವರಿಗೆ ಆಗುತ್ತಿಲ್ಲವೆಂದರೆ, ಏನು ಅಂತ ಭಾವಿಸಬೇಕು? ಹರಿಪ್ರಸಾದ್ ಅವರ ಪ್ರಭಾವ ಹೆಚ್ಚಿದೆ ಎಂದೇ ಅನ್ನಿಸುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಮಾರ್ಮಿಕವಾಗಿ ನುಡಿದರು.

          ‘ಮೈತ್ರಿ ಬಗ್ಗೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಕುರಿತಂತೆ ಗಮನ ಸೆಳೆದಾಗ, ಮೈತ್ರಿ ಕುರಿತಂತೆ ಹಿರಿಯ ನಾಯಕರಾದ ಯಡಿಯೂರಪ್ಪನವರು ನೀಡಿದ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ. ಮೈತ್ರಿ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕು. ಇನ್ನೂ ಅಂತಿಮ ಹಂತದ ನಿರ್ಧಾರವಾಗಿಲ್ಲ. ಪ್ರಾಥಮಿಕ ಹಂತದಲ್ಲಿದೆ. ಕಾಂಗ್ರೆಸ್ ವಿರುದ್ಧ ಹೋರಾಡುವ ಅವಶ್ಯಕತೆ ಇದೆ. ಮಾಜಿ ಸಿಎಂ, ಜೆಡಿಎಸ್ ಧುರೀಣ ಹೆಚ್.ಡಿ.ಕುಮಾರಸ್ವಾಮಿಯರು ನಿನ್ನೆ ನೀಡಿದ ಹೇಳಿಕೆ ಗಮನಿಸಿದರೆ, ಇನ್ನೂ ಅಂತಿಮವಾಗಿಲ್ಲವೇನೋ? ಈ ಕುರಿತು ಚರ್ಚೆ ನಡೆಯಬೇಕು. ಮುಂದಿನ ದಿನಗಳಲ್ಲಿ ಸ್ಪಷ್ಟತೆ ದೊರೆಯಬಹುದು, ಬೆಳವಣಿಗೆಗಳು ಏನಾಗುತ್ತವೆ ಎಂಬುದನ್ನು ನೋಡೋಣ ಎಂದರು.

 

          ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗೋನಾಳ್ ಮುರಹರಗೌಡ, ಹಿರಿಯ ಧುರೀಣ ಡಾ||ಮಹಿಪಾಲ, ಎಸ್.ಗುರುಲಿಂಗನಗೌಡ, ಗುತ್ತಿಗನೂರು ವಿರೂಪಾಕ್ಷಗೌಡ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top