ವಿ.ನಂಜುಂಡಪ್ಪ
ಬೆಂಗಳೂರು: ಮಳೆಯ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪವರ್ ಕಟ್ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬರಗಾಲದ ಛಾಯೆ ಕವಿಯುತ್ತಿದ್ದು ಅದೇ ಕಾಲಕ್ಕೆ ವಿದ್ಯುತ್ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮವಾಗಿದ್ದು ಈ ಹಿನ್ನೆಲೆಯಲ್ಲಿ ಪವರ್ ಕಟ್ ಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮಳೆಯ ಕೊರತೆಯಿಂದ ಲಿಂಗನಮಕ್ಕಿ,ಕಾಳಿ ಸೇರಿದಂತೆ ಜಲವಿದ್ಯುತ್ ಉತ್ಪಾದಿಸುವ ಘಟಕಗಳು ಸಂಕಷ್ಟಕ್ಕೆ ಸಿಲುಕಿದ್ದು ಈಗ ಲಭ್ಯವಿರುವ ನೀರನ್ನು ಮಿತವಾಗಿ ಬಳಸಿದರೆ ಡಿಸೆಂಬರ್ ತನಕ ಪರಿಸ್ಥಿತಿಯನ್ನು ನಿರ್ವಹಿಸಬಹುದು ಎಂಬ ವರದಿ ಸರ್ಕಾರದ ಮುಂದಿದೆ.
ಈ ಹಿನ್ನೆಲೆಯಲ್ಲಿ ಜಲವಿದ್ಯುತ್ ಘಟಕಗಳಿಂದ ಉತ್ಪಾದನೆಯಾಗುತ್ತಿದ್ದ ವಿದ್ಯುತ್ತಿನ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಿರುವ ರಾಜ್ಯ ಸರ್ಕಾರ ಬೆಳಿಗ್ಗೆ ಮತ್ತು ಸಂಜೆ ಪೀಕ್ ಹವರ್ ನಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸುವಂತೆ ಸೂಚಿಸಿದೆ.
ಕರ್ನಾಟಕದಲ್ಲಿ 3500 ಮೆಗಾವ್ಯಾಟ್ ನಷ್ಟು ಜಲವಿದ್ಯುತ್ ಉತ್ಪಾದಿಸಲು ಅವಕಾಶವಿದ್ದರೂ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಇದರ ಅರ್ಧದಷ್ಟು ವಿದ್ಯುತ್ ನ್ನು ಮಾತ್ರ ಉತ್ಪಾದಿಸಲು ಸಾಧ್ಯವಿದೆ.
ಇದೇ ರೀತಿ 8000 ಮೆಗಾವ್ಯಾಟ್ ಗೂ ಅಧಿಕ ಸೋಲಾರ್ ವಿದ್ಯುತ್ ನ್ನು ಉತ್ಪಾದಿಸಲು ಅವಕಾಶವಿದ್ದರೂ,ಉತ್ಪಾದನೆಯ ವಿಷಯದಲ್ಲಿ ಪರಿಪೂರ್ಣ ತಯಾರಿ ನಡೆಯದೆ ಇರುವುದರಿಂದ ಕೇವಲ 600 ಮೆಗಾವ್ಯಾಟ್ ನಷ್ಟು ಸೋಲಾರ್ ವಿದ್ಯುತ್ ಮಾತ್ರ ಲಭ್ಯವಾಗುತ್ತಿದೆ.
ಇನ್ನು 5000 ಮೆಗಾವ್ಯಾಟ್ ನಷ್ಟು ಪವನ ವಿದ್ಯುತ್ ಉತ್ಪಾದಿಸಲು ಮೂಲ ಸೌಕರ್ಯಗಳನ್ನು ಮಾಡಿಕೊಳ್ಳಲಾಗಿದೆಯಾದರೂ,ಆ ಬಾಬ್ತಿನಿಂದಲೂ ಕೇವಲ 600 ಮೆಗಾವ್ಯಾಟ್ ನಷ್ಟು ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ.
ಹೀಗೆ ಜಲವಿದ್ಯುತ್,ಸೋಲಾರ್ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲಿ ಆಗಿರುವ ತೊಂದರೆಯಿಂದ ರಾಜ್ಯವೀಗ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬಿತವಾಗುವುದು ಅನಿವಾರ್ಯವಾಗಿದ್ದು,ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಆರ್ಥಿಕ ಹೊರೆ ಹೊರುವ ಆತಂಕ ಎದುರಾಗಿದೆ.
ವಿಪರ್ಯಾಸವೆಂದರೆ,ಇಂತಹ ಪರಿಸ್ಥಿತಿಯ ನಡುವೆಯೇ ಉಷ್ಣ ವಿದ್ಯುತ್ ಸ್ಥಾವರದ ನಾಲ್ಕು ಘಟಕಗಳು ದುರಸ್ಥಿಯಲ್ಲಿದ್ದು,ಈಗಾಗಲೇ ಸಂಪೂರ್ಣವಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.
ಇಂಧನ ಇಲಾಖೆಯ ಮೂಲಗಳ ಪ್ರಕಾರ,ರಾಜ್ಯದ ವಿದ್ಯುತ್ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿರುವುದರಿಂದ ಕೇಂದ್ರ ವಿದ್ಯುತ್ ಸ್ಥಾವರ ಮತ್ತು ಛತ್ತೀಸ್ ಘಡ,ತಮಿಳುನಾಡು,ಆಂಧ್ರಪ್ರದೇಶ ಸೇರಿದಂತೆ ಹೊರಗಿನಿಂದ ಐದು ಸಾವಿರ ಮೆಗಾವ್ಯಾಟ್ ಗೂ ಅಧಿಕ ವಿದ್ಯುತ್ ನ್ನು ಆಮದು ಮಾಡಿಕೊಳ್ಳುವ ದಯನೀಯ ಸ್ಥಿತಿ ಎದುರಾಗಿದೆ.
ಈ ಹಿಂದೆ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೊಡ್ಡ ಪ್ರಮಾಣದ ವಿದ್ಯುತ್ ನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತಾದರೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆಬಂದ ನಂತರ ವಿದ್ಯುತ್ ಆಮದಿನ ಪ್ರಮಾಣ 3300 ಮೆಗಾವ್ಯಾಟ್ ಗಳಿಗಿಳಿದಿತ್ತು.
ಆದರೆ ರಾಜ್ಯಾದ್ಯಂತ ಮಳೆಯ ಕೊರತೆಯಾಗಿರುವುದರಿಂದ ಹೊರಗಿನಿಂದ ಪಡೆಯುವ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸುವ,ಆ ಮೂಲಕ ಹೆಚ್ಚುವರಿ ಹಣ ಪಾವತಿಸುವ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಅನಿಯಮಿತ ಲೋಡ್ ಷೆಡ್ಡಿಂಗ್ ನ್ನು ಜಾರಿಗೊಳಿಸಿರುವ ಸರ್ಕಾರ,ಇದಕ್ಕೆ ತಾಂತ್ರಿಕ ಕಾರಣಗಳನ್ನು ನೀಡುತ್ತಿದೆಯಾದರೂ ಈ ಲೋಡ್ ಷೆಡ್ಡಿಂಗ್ ಖಾಯಂ ಆಗಿ ಮುಂದುವರಿಯುವುದು ಖಚಿತ.
ಆದರೆ ಇದು ಕೂಡಾ ತಾತ್ಕಾಲಿಕ ವ್ಯವಸ್ಥೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಪವರ್ ಕಟ್ ಮಾಡಲು ಯೋಚಿಸಿರುವ ರಾಜ್ಯ ಸರ್ಕಾರ,ಜನರಿಗೆ,ರೈತರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ದಿನಕ್ಕಿಷ್ಟು ವಿದ್ಯುತ್ ಎಂದು ನಿಗದಿ ಮಾಡಲು ತಯಾರಿ ನಡೆಸಿದೆ ಎಂಬುದು ಮೂಲಗಳ ವಿವರ.