ಮನೆಯ ಯಜಮಾನಿಗೆ ಶಕ್ತಿ ತುಂಬುವ ಕೆಲಸವಾಗಿದೆ

ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆಯ ಚಾಲನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಪ್ರತಿ ಬಡ ಕುಟುಂಬದ ಕಣ್ಣಾಗಿರುವ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಆರ್ಥಿಕ ಶಕ್ತಿ ತುಂಬುವ ಕೆಲಸ ಈ ದಿನ ಆಗಿದೆ ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.

 

          ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಕೋಶ ಇವರ ಸಂಯುಕ್ತಾಶ್ರಯದಲ್ಲಿ ‘ನಾನೇ ಯಜಮಾನಿ… ನಾನೇ ಗೃಹಲಕ್ಷ್ಮಿ’ ಎಂಬ ಆಶಯದೊಂದಿಗೆ ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ (ಮಾ.ಪು) ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆಯ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರವು ರಾಜ್ಯದ ಮಹಿಳೆಯರ ಮತ್ತು ತಾಯಂದಿರ ಕುಟುಂಬದ ನಿರ್ವಹಣೆಯ ಕಷ್ಟವನ್ನರಿತು, ಗೃಹಲಕ್ಷ್ಮಿ ಯೋಜನೆ ರೂಪಿಸಿದೆ. ಮನೆಯಲ್ಲಿ ಯಾವ ಹೆಣ್ಣು ಸಂತೋಷದಿಂದ ಇರುತ್ತಾಳೆಯೋ, ಆ ಮನೆಯ ಕುಟುಂಬ ಬೆಳಗುತ್ತದೆ. ಕುಟುಂಬದ ನಿರ್ವಹಣೆಗೆ ಬೇಕಾದ ಅಗತ್ಯ ಸೇವೆಗಳನ್ನು ಪಡೆಯಲು, ಕುಟುಂಬದ ನಿರ್ವಹಣೆಗೆ ಬೇಕಾದ ಸಾಮಗ್ರಿ ಕೊಂಡುಕೊಳ್ಳಲು, ಆಸ್ಪತ್ರೆಯ ಖರ್ಚಿಗೆ, ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಇತರೆ ಸೌಲಭ್ಯ ಹೊಂದಲು ಸಹಾಯವಾಗುತ್ತದೆ ಎಂದು ಹೇಳಿದರು.

          ಮಹಿಳೆಯರು ಉಚಿತವಾಗಿ ಬಸ್‍ಗಳಲ್ಲಿ ಪ್ರಯಾಣಿಸುವಂತಹ ಶಕ್ತಿ ಯೋಜನೆಯಿಂದ ದೂರದ ಆಸ್ಪತ್ರೆಗಳಿಗೆ ಹೋಗಿ ಬರಲು, ರಾಜ್ಯದ ದೇವಸ್ಥಾನಗಳಿಗೆ ಭೇಟಿ ನೀಡಲು ಹಾಗೂ ಹೆಣ್ಣುಮಕ್ಕಳು ತಮ್ಮ ತವರು ಮನೆಗೆ ಹೋಗಿ ಬರಲು ಉಪಯೋಗವಾಗಿದೆ. ಅನ್ನಭಾಗ್ಯ ಯೋಜನೆಯಿಂದ ಹಸಿವುಮುಕ್ತ ರಾಜ್ಯವನ್ನಾಗಿಸಲು ಸಹಕಾರಿಯಾಗಿದೆ. ಗೃಹಜ್ಯೋತಿಯಿಂದ ಮನೆ-ಮನಗಳು ಬೆಳಗುತ್ತಿವೆ ಎಂದರು.

          ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯದ ಇತಿಹಾಸದಲ್ಲಿಯೇ ಈ ದಿನ ಅತ್ಯಂತ ಮಹತ್ವದ ದಿನವಾಗಿದೆ ಎಂದು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ನಮ್ಮ ಸರ್ಕಾರ ಜಾರಿಗೆ ಬಂದು 100 ದಿನ ಪೂರೈಸಿದ್ದು, ನಮ್ಮ ಸಾಧನೆ ನಮ್ಮ ಕಾರ್ಯಗಳನ್ನು ಜನರ ಮುಂದೆ ಇಡುವ ಮೂಲಕ ನಮ್ಮದು ಬಡವರ ಪರ ಸರ್ಕಾರ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದರು.

 

          ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಐದು ಯೋಜನೆಗಳಲ್ಲಿ 4 ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.

ಜಿಲ್ಲೆಯ ಅರ್ಹ ಫಲಾನುಭವಿ ಮಹಿಳೆಯರಿಗೆ ಆಗಸ್ಟ್ ಮಾಹೆಯಲ್ಲಿ ಬಿಡುಗಡೆಯಾದ ವೆಚ್ಚ ಮಾಹಿತಿ:

ಪರಿಶಿಷ್ಟ ಜಾತಿ ಫಲಾನುಭವಿಗಳು: 47,202  ಫಲಾನುಭವಿಗಳಿಗೆ ಆಗುವ ವೆಚ್ಚ ರೂ.9,44,04,000.

ಪರಿಶಿಷ್ಟ ಪಂಗಡ ಫಲಾನುಭವಿಗಳು: 48,133 ಫಲಾನುಭವಿಗಳಿಗೆ ಆಗುವ ವೆಚ್ಚ ರೂ.9,62,66,000.

ಇತರೆ: 1,52,092 ಫಲಾನುಭವಿಗಳಿಗೆ ರೂ.30,41,84,000 ವೆಚ್ಚ ಆಗಲಿದ್ದು, ಒಟ್ಟು ಜಿಲ್ಲೆಯ 2,47,427 ಫಲಾನುಭವಿಗಳಿಗೆ ಈ ಆಗಸ್ಟ್ ಮಾಹೆಯಲ್ಲಿ ಒಟ್ಟು ರೂ.49,48,54,000 ಪಾವತಿಯಾಗಲಿದೆ ಎಂದು ಮಾಹಿತಿ ನೀಡಿದರು.

 

          ಗೃಹಲಕ್ಷ್ಮಿ ಯೋಜನೆಯು ಪ್ರಾರಂಭದಿಂದ ಇಲ್ಲಿಯವರೆಗೆ 3,01,180 ರೇಷನ್ ಕಾರ್ಡ್‍ಗಳ ಪೈಕಿ 2,59,161 (ಶೇ.86.05) ಫಲಾನುಭವಿಗಳು  ನೊಂದಾಯಿಸಿಕೊಂಡಿದ್ದು, ಈ ಪೈಕಿ ರಾಜ್ಯದಲ್ಲಿ ನೊಂದಣಿ ಪ್ರಕ್ರಿಯೆಯಲ್ಲಿ ಜಿಲ್ಲೆಯು ಐದನೇ ಸ್ಥಾನದಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಮತೀಯ ಭಾಂದವ್ಯ ಇಲ್ಲದೇ ನಗರದ ಎಲ್ಲಾರಿಗೂ ತಲುಪಿಸಲಾಗುತ್ತಿದೆ. ಅದರಂತೆಯೇ ನಗರದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಮೂತಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

 

          ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ಮಾತನಾಡಿ, ಮಹಿಳೆಯರ ಅಭಿವೃದ್ದಿ ಮತ್ತು ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಉಪಮೇಯರ್ ಬಿ.ಜಾನಕಿ, ಪಾಲಿಕೆಯ ಮಾಜಿ ಮೇಯರ್ ಎಂ.ರಾಜೇಶ್ವರಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top