ಕೊರಗರ ಭೂಮಿ ಹಬ್ಬ
ಮಂಗಳೂರು : ತುಳುನಾಡಿನ ಆದಿ ಬುಡಮೂಲ ಕೊರಗ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇತರ ಸಮುದಾಯಗಳಿಂದ ಪೂರಕವಾದ ಸಾಮಾಜಿಕ ಸ್ಪಂದನೆ ಸಿಗಬೇಕಾಗಿದೆ ಎಂದು ದ.ಕ.ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ,ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು. ಅವರು ಸುರತ್ಕಲ್ ಕುತ್ತೆತ್ತೂರು ಆದಿವಾಸಿ ಭವನದಲ್ಲಿ ದ.ಕ.ಜಿಲ್ಲಾ ಕೊರಗರ ಸಂಘ ಆಯೋಜಿಸಿದ ಕೊರಗರ ಭೂಮಿ ಹಬ್ಬ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ತಳ ಸಮುದಾಯವು ಮುಖ್ಯವಾಹಿನಿಯಲ್ಲಿ ಸಾಗುವಂತಾಗಲು ಆರ್ಥಿಕ ಹಾಗೂ ಸಾಮಾಜಿಕ ಸ್ಪಂದನೆ ಅಗತ್ಯವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ.ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಎಂ.ಸುಂದರ ಕೊರಗ ಅವರು ಮಾತನಾಡಿ , ಸಮುದಾಯದ ಬೇಡಿಕೆಗಳಿಗೆ ಆಗ್ರಹಿಸಿ ಕೊರಗರು ಪ್ರಥಮ ಬಾರಿಗೆ ಬೀದಿಗಿಳಿದು 1993 ರ ಆಗಸ್ಟ್ 18 ರಂದು ಮಂಗಳೂರಿನ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ನಡೆಸಿದ ಕೊರಗರ ಐತಿಹಾಸಿಕ ಚಳವಳಿಯ ನೆನಪಿನಲ್ಲಿ ಈ ಕೊರಗರ ಭೂಮಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ನೆನಪಿಸಿದರು. ಕೊರಗ ಸಮುದಾಯದ ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ , ಈ ನಿಟ್ಟಿನಲ್ಲಿ ಸರಕಾರ ಸ್ಪಂದಿಸಬೇಕೆಂದು ಅವರು ಆಗ್ರಹಿಸಿದರು.
ಕೊರಗ ಸಂಘಟನೆಯ ಮಾಜಿ ಅಧ್ಯಕ್ಷ ಬಾಲರಾಜ್ ಕೋಡಿಕಲ್ ಸಮುದಾಯದ ಚಳವಳಿ ನಡೆದು ಬಂದ ದಾರಿಯನ್ನು ಉಲ್ಲೇಖಿಸಿ ಮಾತನಾಡಿ ಆಗಸ್ಟ್ 18ರ ಚಳವಳಿ ಕೊರಗರ ಬದುಕನ್ನು ಬದಲಾಯಿಸಿದ ಮಹತ್ವದ ಮೈಲಿಗಲ್ಲು ಎಂದು ಹೇಳಿದರು. ಉಡುಪಿ ಜಿಲ್ಲಾ ಕೊರಗ ಸಂಘದ ಅಧ್ಯಕ್ಷೆ ಗೌರಿ ಕೆಂಜೂರು ಅವರು ಮಾತನಾಡಿ, ಕೊರಗ ಸಮುದಾಯದ ಹೋರಾಟವು ಮಹಿಳೆಯರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನಡೆದಿತ್ತು ಎಂದು ಹೇಳಿದರು.
ಲೇಖಕ ಬಾಬು ಪಾಂಗಳ ಅವರು ಭೂಮಿ ಹಬ್ಬದ ಸಂದೇಶ ನೀಡಿದರು. ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಅಡಿಗ , ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಹೇಮಚಂದ್ರ ಅವರು ಶುಭಕೋರಿ ಮಾತನಾಡಿದರು. ಬಾಳಾ ಪಂಚಾಯತ್ ಅಧ್ತಕ್ಷ ಶಂಕರ್ ಜೋಗಿ , ಉಪಾಧ್ಯಕ್ಷೆ ಲಕ್ಷ್ಮಿ ಶುಭಕೋರಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮುದಾಯದ ಗುರಿಕಾರರಾದ ಜಬ್ಬ ಗುರಿಕಾರ ಬಳ್ಕುಂಜ , ನಾರಾಯಣ ಸಿರಿಗೆನ್ನಾರ್ , ರಾಜು ಗುರಿಕಾರ ಕತ್ತಲ್ ಸಾರ್ , ಸಮುದಾಯದ ಹಿರಿಯ ಮಹಿಳೆಯರಾದ ಲಲಿತಾ ಕೃಷ್ಣಾಪುರ, ಸುಮತಿ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು.
ರಮೇಶ್ ಗುಂಡಾವು ಕಾರ್ಯಕ್ರಮ ನಿರ್ವಹಿಸಿದರು. ಮನೋಜ್ ಕೋಡಿಕಲ್ ಸ್ವಾಗತಿಸಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಧ್ವಜಾರೋಹಣ ನಡೆಯಿತು. ಉಡುಪಿ ಜಿಲ್ಲಾ ಕೊರಗ ಸಂಘಟನೆಯ ಮುಖಂಡ ರಂಗ ಬೆಳ್ಮಣ್ ಧ್ವಜಾರೋಹಣ ನೆರವೇರಿಸಿದರು. ಸಮುದಾಯದ ಹಿರಿಯ ಮಹಿಳೆ ಲಲಿತಾ ಜ್ಯೋತಿ ಬೆಳಗಿಸಿದರು. ಸುಮತಿ ಕರಿಮಣ್ಣು ಅವರು ಹಬ್ಬದ ಸಿಹಿ ಜೇನು ಹಂಚಿದರು. ರಮೇಶ್ ಮಂಚಕಲ್ ಅವರ ನೇತೃತ್ವದಲ್ಲಿ ಕೊರಲ್ ತಂಡದಿಂದ ಗಜಮೇಳ ನಡೆಯಿತು.