ಜಾತಿ ಗಣತಿ ವರದಿ ಅನುಷ್ಠಾನ ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

Kannada Nadu
ಜಾತಿ ಗಣತಿ ವರದಿ ಅನುಷ್ಠಾನ ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ . ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತಿ ಗಣತಿ ಅನುಷ್ಠಾನಕ್ಕೆ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯ ಬಂದ ಸಂದರ್ಭದಲ್ಲಿ ಅದಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದರು. ಸರ್ಕಾರ ಜಾತಿ ಗಣತಿ ಪರವಾಗಿದೆ . ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ.‌ ಮುಂದಿನ ದಿನಗಳಲ್ಲಿ ಅದನ್ನು ಖಂಡಿತವಾಗಿಯೂ ಜಾರಿ ಮಾಡಲಾಗುತ್ತದೆ ಅದರ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದರು.

ತಮಿಳು ನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಭೆ ಆಗ್ರಹಿಸಿದಾಗ 1992 ರ ಇಂದಿರಾ ಸಹಾನಿ ಕೇಸನ್ನು ಉಲ್ಲೇಖಿಸಿ ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎನ್ನುವ ಅಂಶವನ್ನು ಸಭೆಗೆ ತಿಳಿಸುತ್ತಾ, ಕಳೆದ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಂದು ( EWS) ಮೀಸಲಾತಿ ಕಲ್ಪಿಸಿದ್ದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.
ಸಂವಿಧಾನದ ಆರ್ಟಿಕಲ್ ( 15)(16)ರ ಪ್ರಕಾರ ಮೀಸಲಾತಿ ನೀಡಬೇಕಾಗಿರುವುದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ನೀಡಬೇಕು ಎಂದಿದೆ .

ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ತಯಾರಾಗಿದ್ದು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲ ವಾಗಿದೆ. ಆ ಪ್ರಕಾರ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದರು. ಇಷ್ಟು ವರ್ಷಗಳಾದರೂ ಸಮಾನತೆ ಯಾಕೆ ಬಂದಿರುವುದಿಲ್ಲ ಎಂಬುದು ಮುಖ್ಯ. ಕೆಲವರು ತಪ್ಪು ಗ್ರಹಿಕೆಯಿಂದ ಅದನ್ನು ವಿರೋಧಿಸುತ್ತಿದ್ದಾರೆ ಎಂದರು.ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಮಹಿಳೆಯರು ಎಲ್ಲರನ್ನೂ ಮುಖ್ಯ ವಾಹಿನಿಗೆ ತರುವುದು ನಮ್ಮ ಸರ್ಕಾರದ ಉದ್ದೇಶ ಅಸಮಾನತೆ ಹೋಗಬೇಕು ಜಾತಿ ವ್ಯವಸ್ಥೆಯಿಂದ ನಿರ್ಮಾಣವಾಗಿರುವ ಅಸಮಾನತೆಯಿಂದ ಬಹು ಸಂಖ್ಯಾತ ಜನ ಅವಕಾಶ ವಂಚಿತರಾಗಿದ್ದಾರೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಿದೆ ತಳ ಸಮುದಾಯವಿರಲಿ, ಮೇಲ್ವರ್ಗವಿರಲಿ ಎಲ್ಲರಿಗೂ ಸಮಾನತೆ ಇರಬೇಕು ಎಂಬ ಅಂಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿ ದ್ದಾರೆ. ಹಿಂದುಳಿದ ಜಾತಿಗಳಲ್ಲೂ ತಾರತಮ್ಯ ಅಸಮಾನತೆ ಇದೆ ಇದನ್ನು ಒಂದೇ ಬಾರಿಗೆ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು .

ಅಲೆಮಾರಿ ಜನಾಂಗಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ ಅಲೆಮಾರಿ ಆಯೋಗ ರಚನೆಗೆ ಉಂಟಾಗಿರುವ ಸಮಸ್ಯೆಗಳಿಂದಾಗಿ ಆಯೋಗ ರಚನೆ ಸಾಧ್ಯವಾಗಿರುವುದಿಲ್ಲ ಎಂದರು. ಅಲೆಮಾರಿ ಜನಾಂಗಕ್ಕೆ ಉಚಿತ ಶಿಕ್ಷಣ ಹಕ್ಕು ಒತ್ತಾಯಕ್ಕೆ ಪ್ರತಿಕ್ರಿಯಿಸಿ ಸರ್ಕಾರ ಶಿಕ್ಷಣದ ಹಕ್ಕನ್ನು ನೀಡಿದೆ (RTE) ಅದರ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಅವಕಾಶ ಸಿಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಬಾರಿಯ ಆಯವ್ಯಯದಲ್ಲಿ ಅಲೆಮಾರಿ ಜನಾಂಗಕ್ಕೆ ವಿಶೇಷ ಗಮನ ಹರಿಸುವುದಾಗಿ ತಿಳಿಸಿದರು. ಮಾತ್ರವಲ್ಲ ಅತಿ ಹಿಂದುಳಿದ ವರ್ಗದವರಿಗೂ ಕಾರ್ಯಕ್ರಮಗಳನ್ನು ಈ ಬಾರಿಯ ಆಯವ್ಯಯದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು. ಜೊತೆಗೆ ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಹಿಂದುಳಿದ ವರ್ಗಗಳಿಗೆ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಭರವಸೆ ನೀಡಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";