-ರಾಯಚೂರು ನಗರದ ಸಮಗ್ರ ಅಭಿವೃದ್ದಿಗೆ ಒತ್ತು
-ನಗರದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಭವಿಷ್ಯದ ಬೆಳವಣಿಗೆಯ ಸ್ಥೂಲ ಚಿತ್ರಣ
-ಅಂತರಾಷ್ಟ್ರೀಯ ಲಿಯಾ(LEA) ಕನ್ಸಲ್ಟೆಂಟ್ಸ್ ಅವರಿಂದ ಪ್ರಾಥಮಿಕ ಹಂತದ ವರದಿ
-ಎರಡನೇ ಹಂತದ ವರದಿಯ ನಂತರ ಮುಖ್ಯಮಂತ್ರಿ ಮತ್ತು ನಗರಾಭಿವೃದ್ದಿ ಸಚಿವರೊಂದಿಗೆ ಚರ್ಚಿಸಿ ಅನುಷ್ಠಾನ
-ವಿಷನ್ ರಿಬೂಸ್ಟಿಂಗ್ ರಾಯಚೂರ್ – 2045
ಬೆಂಗಳೂರು : ರಾಯಚೂರು ನಗರದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಭವಿಷ್ಯದ ಬೆಳವಣಿಗೆಗೆ ಯೋಜನಾಬದ್ದ ನೀಲಿನಕ್ಷೆಯನ್ನು ಒಳಗೊಂಡಂತಹ ಪ್ರಾಥಮಿಕ ಹಂತದ ಪರಿಷ್ಕೃತ ಮಾಸ್ಟರ್ ಪ್ಲಾನ್ ನ ಪ್ರಾಥಮಿಕ ಹಂತದ ವರದಿಯನ್ನು ಅಂತರಾಷ್ಟ್ರೀಯ ಲಿಯಾ (LEA) ಕನ್ಸಲ್ಟೆಂಟ್ಸ್ ನೀಡಿದ್ದಾರೆ. ಈ ವರದಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸುವಂತೆ ಸೂಚಿಸಿದ್ದು, ಎರಡನೇ ವರದಿಯನ್ನ ಸನ್ಮಾನ್ಯ ಮುಖ್ಯಮಂತ್ರಿಗಳು, ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿದರು.
ಇಂದು ವಿಕಾಸಸೌಧದಲ್ಲಿ ನಗರ ಯೋಜನೆಯಲ್ಲಿ ಪರಿಣತಿಯನ್ನು ಪಡೆದುಕೊಂಡಿರುವ ಲಿಯಾ (LEA) ಕನ್ಸಲ್ಟೆಂಟ್ಸ್ ಅವರು ಎರಡು ವಾರಗಳ ಕಾಲ ರಾಯಚೂರು ನಗರದಲ್ಲಿ ಕೈಗೊಂಡ ಪರಿಶೀಲನೆ ನಂತರ ನೀಡಿದ ಪ್ರಾಥಮಿಕ ಹಂತದ ವರದಿಯನ್ನು ಪರಿಶೀಲಿಸಿ ಮಾತನಾಡಿದರು. ಲಿಯಾ (LEA) ಕನ್ಸಲ್ಟೆಂಟ್ಸ್ ಕೇಂದ್ರ ಕಚೇರಿ ಕೆನಡಾದಲ್ಲಿದ್ದು, ಸಂಸ್ಥೆಯು ವಿಶ್ವದ ಉತ್ತಮ ವಾಸ್ತುಶಿಲ್ಪಿಗಳನ್ನು ಹೊಂದಿದೆ. ಅಲ್ಲದೇ, ಅನೇಕ ದೇಶಗಳು ಮತ್ತು ಭಾರತ ದೇಶದ ಹಲವಾರು ನಗರಗಳ ಪರಿಷ್ಕೃತ ಯೋಜನೆಯನ್ನು ತಯಾರಿಸಿಕೊಟ್ಟಿದೆ. ಹಾಗೆಯೇ, ನಮ್ಮ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಸಮಾಲೋಚನಾ ಸೇವೆಯನ್ನು ನೀಡುತ್ತಿದೆ.
“ರಿ-ಬೂಟ್ ರಾಯಚೂರು” ನಗರದ ಸಮಗ್ರ ಅಭಿವೃದ್ದಿ:
ಕಲ್ಯಾಣ ಕರ್ನಾಟಕ ಪ್ರಮುಖ ಜಿಲ್ಲಾ ಕೇಂದ್ರವಾಗಿರುವ ರಾಯಚೂರು ನಗರ ನಿಜಾಮರ ಆಳ್ವಿಕೆಯನ್ನು ಕಂಡಿದೆ. ಈ ನಗರದ ಸಂಸ್ಕೃತಿ ಹಾಗೂ ಜೀವನ ಶೈಲಿ ವಿಭಿನ್ನವಾಗಿದೆ. ಈ ವಿಭಿನ್ನ ಜೀವನ ಶೈಲಿಯನ್ನು ಕಾಪಿಡುವ ಜೊತೆಯಲ್ಲೇ ನಗರದ ಸಮಗ್ರ ಅಭಿವೃದ್ದಿಗಾಗಿ ಹೊಸ ವಿನ್ಯಾಸವನ್ನ ಲಿಯಾ (LEA) ಕನ್ಸಲ್ಟೆಂಟ್ಸ್ ಪ್ರಸ್ತುತ ಪಡಿಸಿದ್ದಾರೆ.
ಹೊಸ ವಿನ್ಯಾಸ – ಜಾಗತಿಕ ಗುಣಮಟ್ಟದ ನಗರ ಮಾಡುವತ್ತ ಒತ್ತು:
ರಾಜ್ಯದ ರೈಸ್ ಬೌಲ್ ಎಂದೇ ಹೆಸರುವಾಸಿಯಾಗಿರುವ ರಾಯಚೂರು ಜಿಲ್ಲೆಯ ರಾಜ್ಯದ ಜಿಡಿಪಿಗೆ ಶೇಕಡಾ 2 ರಷ್ಟು ಕೊಡುಗೆಯನ್ನು ನೀಡುತ್ತಿದೆ. ರಾಜ್ಯದ ಲಾಜಿಸ್ಟಿಕ್ ದೃಷ್ಟಿಯಿಂದ ಬಹಳ ಪ್ರಮುಖ ಸ್ಥಾನದಲ್ಲಿರುವ ರಾಯಚೂರು ನಗರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ಹೊಸ ವಿನ್ಯಾಸದ ಪರಿಷ್ಕೃತ ನಗರ ಯೋಜನೆಯ ಅಗತ್ಯವಿದೆ ಎಂದು ಸಚಿವರು ಸಲಹೆ ನೀಡಿದರು.
ಯಾವುದೇ ನಗರವನ್ನು ಜಾಗತಿಕ ಗುಣಮಟ್ಟದ ನಗರವನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಯೋಜನೆ ಮತ್ತು ವಿನ್ಯಾಸ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಲಿಯಾ (LEA) ಕನ್ಸಲ್ಟೆಂಟ್ಸ್ ಉತ್ತಮ ವರದಿಯನ್ನು ನೀಡಿದ್ದಾರೆ. ಈ ವರದಿಯಲ್ಲಿ ಹಳೆಯ ನಗರವನ್ನು ಸ್ವಚ್ಚವಾಗಿಸುವುದು, ಉತ್ತಮ ರಸ್ತೆಗಳನ್ನು ನಿರ್ಮಿಸುವುದು, ಉದ್ಯಾನವನ ಗಳ ನಿರ್ಮಾಣ, ಕಸ ವಿಲೇವಾರಿಗೆ ಒತ್ತು ನೀಡಲಾಗಿದೆ.
ನಗರವನ್ನು ಪಶ್ಚಿಮ ಭಾಗದಲ್ಲಿ ವಿಸ್ತರಿಸಲು ಯೋಜನೆ:
ನಗರವನ್ನ ಕರ್ನಾಟಕ ರಾಜ್ಯದ ಒಳ ಭಾಗದಲ್ಲಿ ವಿಸ್ತರಿಸಬೇಕು ಎನ್ನುವುದನ್ನ ವರದಿಯಲ್ಲಿ ಒತ್ತು ನೀಡಲಾಗಿದೆ. ಪಶ್ಚಿಮ ಭಾಗದಲ್ಲಿ ವಿಸ್ತರಣೆಗೆ ವ್ಯಾಪಕ ಅವಕಾಶವಿದೆ. ಇದು ನಗರವನ್ನು ಜನವಸತಿ ಮತ್ತು ಕೈಗಾರಿಕಾ ವಲಯಗಳನ್ನಾಗಿ ವಿಭಾಗಿಸಲು ಅನುವು ಮಾಡಿಕೊಡಲಿದೆ. ಸುಮಾರು 20 ಸಾವಿರ ಎಕರೆಗಳಷ್ಟು ಜಾಗ ದೊರೆಯಲಿದ್ದು, ವಿಶಾಲ ಉದ್ಯಾನವನ, ಯೋಜನಾಬದ್ದ ರಸ್ತೆಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಇಲ್ಲಿ ಅಭಿವೃದ್ದಿಗೊಳಿಸಬಹುದಾಗಿದೆ.
ಗ್ರೀನ್ – ಫೀಲ್ಡ್ ಮತ್ತು ಏಮ್ಸ್ ಹೆಲ್ತ್ ಸಿಟಿಗೂ ಅವಕಾಶ ನೀಡುವಂತೆ ಸಚಿವರ ಸೂಚನೆ:
ವಿಶಾಲವಾದ ಉದ್ಯಾನವನಗಳನ್ನು ಹೊಂದಿರುವ ಗ್ರೀನ್ ಫೀಲ್ಡ್ ನಗರವನ್ನು ವಿನ್ಯಾಸಗೊಳಿಸಬೇಕು. 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಲಿರುವ ರಾಯಚೂರು ನಗರದಲ್ಲಿ ಓಪನ್ ಸ್ಪೇಸ್ ಗೆ ಆದ್ಯತೆ ನೀಡಬೇಕು. ಏಮ್ಸ್ ರಾಯಚೂರಿಗೆ ಬರುವ ಸಾಧ್ಯತೆಯಿದ್ದು, ಇದಕ್ಕೆ ಪೂರಕವಾಗಿ ನಮ್ಮ ಪರಿಷ್ಕೃತ ನಗರ ಯೋಜನೆಯಲ್ಲಿ “ಏಮ್ಸ್ ಹೆಲ್ತ್ ಸಿಟಿಗೆ” ಅವಕಾಶ ನೀಡುವಂತೆ ಸಚಿವರು ಸೂಚನೆ ನೀಡಿದರು.
ಲಿಯಾ (LEA) ಕನ್ಸಲ್ಟೆಂಟ್ಸ್ ನ ತಂತ್ರಜ್ಞನರು ಎರಡು ವಾರಗಳ ಕಾಲ ನಡೆಸಿರುವ ಅಧ್ಯಯನದ ಆಧಾರದ ಮೇಲೆ ಪ್ರಾಥಮಿಕ ವರದಿಯನ್ನು ನೀಡಿದ್ದಾರೆ. ಈ ವರದಿಯ ಇನ್ನಷ್ಟು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದೆ. ಭವಿಷ್ಯದಲ್ಲಿ ಜನಸಂಖ್ಯೆಯ ಹೆಚ್ಚಳ ಮತ್ತು ನಮ್ಮ ಜನರ ಆಶೊತ್ತರಗಳಿಗೆ ಅನುವು ಮಾಡಿಕೊಡುವಂತಹ ವಿಶೇಷ ವಿನ್ಯಾಸ ಯೋಜನೆ ಇದಾಗಿರಬೇಕು ಎನ್ನುವುದು ನಮ್ಮ ಆಶಯವಾಗಿದೆ. ವಿಷನ್ ರಿಬೂಸ್ಟಿಂಗ್ ರಾಯಚೂರು – 2045 ರ ಗುರಿಯನ್ನಿಟ್ಟುಕೊಂಡು ಮುಂದಿನ ಹಂತದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಲಿಯಾ (LEA) ಕನ್ಸಲ್ಟೆಂಟ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು