ಮದ್ದೂರು : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿನಾದರೂ ಮಾಡಿಕೊಳ್ಳಲಿ. ವಿಲೀನವಾದರೂ ಆಗಲಿ, ಅದು ಅವರಿಗೆ ಬಿಟ್ಟ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂಬ ಮಾಹಿತಿ ಇದ್ದು, ಜೆಡಿಎಸ್ ಜೊತೆ ಬಿಜೆಪಿ ಸೇರಲಿ ಅಥವಾ ಬಿಜೆಪಿ ಜೊತೆ ಜೆಡಿಎಸ್ ವಿಲೀನ ವಾಗಲಿ ಅದು ಅವರಿಗೆ ಸೇರಿದ್ದು ಕಾದು ನೋಡೋಣ, ನಮ್ಮ ರಾಜಕಾರಣ ನಮ್ಮದು ಎಂದು ತಿಳಿಸಿದರು
ಹಾಲಿನ ದರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಕೆಎಂಎಫ್ ಹಾಲು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ, ದರ ಏರಿಕೆ ಸೂಕ್ತವೊ ಎಂಬುದು ಮುಖ್ಯವಲ್ಲ,ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ಮನ್ ಮುಲ್ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು,ಪಕ್ಷದ ಚೌಕಟ್ಟಿನಲ್ಲಿ ನಡೆಯುವ ಚುನಾವಣೆ ಇದಲ್ಲ, ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ಪ್ರತಿ ಪಕ್ಷಗಳಲ್ಲಿ ಆತಂಕ ಎದುರಾಗಿದೆ, ಬಿಜೆಪಿ – ಜೆಡಿಎಸ್ ಪಕ್ಷ ಯಾವುದೇ ಭರವಸೆ,ಆಶ್ವಾಸನೆ ಅಷ್ಟೇ ಏಕೆ ಪ್ರಣಾಳಿಕೆಯನ್ನು ಜಾರಿ ಮಾಡುವುದಿಲ್ಲ,ಆದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿರುವುದರಿಂದ ಜನಸಾಮಾನ್ಯರಲ್ಲಿ ವಿಶ್ವಾಸ ಗಳಿಸಿದೆ ಎಂದರು.
ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೂ ಸಹ ಪಡಿತರ ಚೀಟಿದಾರರಿಗೆ ತಲಾ ಐದು ಕೆಜಿ ಅಕ್ಕಿ ಜೊತೆಗೆ ಮತ್ತೈದು ಕೆಜಿಯ ಹಣವನ್ನು ನೀಡುತ್ತಿದ್ದೇವೆ, ಯಾವುದೇ ಷರತ್ತಿಲ್ಲದೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ, ಬಿಜೆಪಿ,ಜೆಡಿಎಸ್ ಅಧಿಕಾರದಲ್ಲಿದ್ದಾಗ ಸವಲತ್ತು ವಿತರಣೆ ಸಂದರ್ಭದಲ್ಲಿ ಷರತ್ತು ಹಾಕಿದ್ದನ್ನು ಕಾಣಬಹುದು, ಈಗಾಗಲೇ ಐದು ಗ್ಯಾರಂಟಿಯಲ್ಲಿ ಶಕ್ತಿ, ಅನ್ನಭಾಗ್ಯ,ಗೃಹ ಜ್ಯೋತಿ ಆರಂಭವಾಗಿದ್ದು, ಗೃಹಲಕ್ಷ್ಮಿಗೆ ಶೀಘ್ರ ಚಾಲನೆ ದೊರಕಲಿದೆ, ಆರು ತಿಂಗಳೊಳಗೆ ಎಲ್ಲಾ ಗ್ಯಾರಂಟಿ ಅನುಷ್ಠಾನ ವಾಗಲಿದೆ ಎಂದು ತಿಳಿಸಿದರು