ವಲಸೆ ಹೋದ ಕಾಂಗ್ರೆಸ್ಸಿಗರ ಬಗ್ಗೆ ಮಾತನಾಡಿದ ಸಚಿವ ನಾಗೇಂದ್ರ
ಬಳ್ಳಾರಿ: ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ವಲಸಿಗ ಶಾಸಕರು, ಮುಖಂಡರು ನಮ್ಮ ಪಕ್ಷದಲ್ಲಿದ್ದಾಗ ವಜ್ರದಂತೆ ಇದ್ದರು. ಇದೀಗ ಕೇಸರಿ ಮಣ್ಣಲ್ಲಿ ಬಿದ್ದು ತಮ್ಮ ಕಲ್ಲುಗಳಂತಾಗಿದ್ದಾರೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ನುಡಿದರು.
ನಗರದ ಜಿಲ್ಲಾ ಪಂಚಾಯತ್‌ನಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ನಾಗೇಂದ್ರ ಅವರು, ಈ ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ವಜ್ರಗಳಂತೆ ಹೊಳೆಯುತ್ತಿದ್ದರು. ಆದರೆ ಅಧಿಕಾರಕ್ಕಾಗಿ ಪಕ್ಷ ತೊರೆದು, ಈಗ ತಮ್ಮ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಒಂದು ವೇಳೆ ನಮ್ಮ ಪಕ್ಷದ ತತ್ವ ಸಿದ್ದಂತಗಳನ್ನು ಒಪ್ಪಿ ಮತ್ತೆ ಕಾಂಗ್ರೆಸ್‌ಗೆ ಬರುವುದಾದರೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕೋ ಬೇಡ್ವೋ ಎಂಬುದನ್ನು ನಮ್ಮ ಹಿರಿಯ ಮುಖಂಡರು ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಕಾಂಗ್ರೆಸ್ ವಲಸಿಗರಿಂದಲೇ ಬಿಜೆಪಿ ಸೋಲು ಎಂಬ ಈಶ್ವರಪ್ಪ ಹೇಳಿಕೆ ಕುರಿತು ಮಾತನಾಡಿದ ಸಚಿವರು, ಈಶ್ವರಪ್ಪ ಅವರು ಸತ್ಯವನ್ನೇ ಹೇಳಿದ್ದಾರೆ. ಪಕ್ಷದ ಆಂತರಿಕ ವಿಚಾರವನ್ನು ಅವರು ಹೊರಗೆ ಹಾಕಿದ್ದಾರೆ. ಹಿಂಬಾಗಿಲಿಂದ ಬಂದು ಮೂರು ವರ್ಷ ಆಡಳಿತ ನಡೆಸಿದ್ದರು. ಅದರ ಅನುಭವವನ್ನು ನೈಜ ಘಟನೆಗಳ ಬಗ್ಗೆ ಈಶ್ವರಪ್ಪ ಅವರು ಮಾತನಾಡಿದ್ದು, ಕರೆಕ್ಟ್ ಆಗಿಯೇ ಹೇಳಿದ್ದಾರೆ ಎಂದು ತಿಳಿಸಿದರು.
ಸಹೋದರ ಬಿ.ವೆಂಕಟೇಶ್ ಪ್ರಸಾದ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು ಸಚಿವರು, ನಮ್ಮ ಕುಟುಂಬದಿಂದ ಮತ್ತೆ ಯಾರು ಸ್ಪರ್ಧೆ ಮಾಡುವುದೇ ಇಲ್ಲ. ನನ್ನ ಸಹೋದರ ಬಿ.ವೆಂಕಟೇಶ ಪ್ರಸಾದ್ ಅವರು ಬರುವ ಲೋಕಸಭೆ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಅವರು ಟಿಕೆಟ್ ಆಕ್ಷಾಂಕಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷದ ನಾಯಕರು ತೀರ್ಮಾನ ಮಾಡಲಿದ್ದಾರೆ. ಒಂದು ವೇಳೆ ನಮ್ಮ ಸಹೋದರ ಸ್ಪರ್ಧೆ ಮಾಡಲಿ ಎಂದು ಪಕ್ಷ ತೀರ್ಮಾನ ಮಾಡಿದರೆ ಮುಂದೆ ನೊಡೋಣ ಎಂದರಲ್ಲದೆ, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 28 ಕ್ಷೇತ್ರಗಳನ್ನೂ ಗೆಲ್ಲಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.