ಕಾರ್ಯಕರ್ತರ ಸಮಾವೇಶದಲ್ಲಿ ನಳೀನ್ ಕುಮಾರ್ ಕಟೀಲ್ ನುಡಿ
ಬಳ್ಳಾರಿ: 9 ವರ್ಷಗಳ ಕಾಲ ಪ್ರಧಾನಿಯಾಗಿ, ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಬಸವಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾದಂತಹ ತುರ್ತು ಪರಿಸ್ಥಿತಿಯಲ್ಲಿ ಔಷಧ ತಯಾರಿಸಿ ಭಾರತೀಯರಿಗೆ ನೀಡುವ ಜೊತೆಗೆ ವಿದೇಶಗಳಿಗೂ ನೀಡಿ, ಭಾರತವನ್ನು ಅಗ್ರಸ್ಥಾನದಲ್ಲಿರಿಸಿದ್ದಾರೆ. ಮೋದಿಯವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಒಂದು ದಿನವೂ ಕೂಡ ವಿಶ್ರಾಂತಿ ಪಡೆಯದೆ ದೇಶದ ಅಭಿವೃದ್ಧಿಯತ್ತ ಗಮನ ಹರಿಸಿದ್ದುದರ ಫಲವಾಗಿ ಇಂದು ಅನೇಕ ರಾಷ್ಟ್ರೀಯ ಹೆದ್ದಾರಿಗಳನ್ನು ನೋಡುತ್ತಿದ್ದೇವೆ ಎಂದರು.
ಮೋದಿಯವರ ಕಾರ್ಯದಿಂದ ಇಂದು ಅನೇಕ ಯೋಜನೆಗಳು ಜಾರಿಗೆ ಬಂದಿದ್ದು, ಸಾಕಷ್ಟು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ರೈಲ್ವೇ ಯೋಜನೆಗಳು ಅಭಿವೃದ್ಧಿಯಾಗಿವೆ. ರಸ್ತೆಗಳನ್ನೇ ಕಾಣದ ಊರುಗಳಿಗೂ ಕೂಡ ಈಗ ಬಸ್‌ಗಳು ಓಡಾಡುತ್ತಿವೆ. ರೈತರಿಗೆ ಪ್ರತಿ ತಿಂಗಳು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಎಲ್ಲಾ ಧರ್ಮದವರಿಗೂ ಸೌಲಭ್ಯಗಳು ದೊರಕುವಂತೆ ಮಾಡಿದ್ದಾರೆ. ಇಡೀ ಪ್ರಪಂಚದಲ್ಲೇ ಎಲ್ಲಾ ದೇಶಗಳು ಭಾರತದತ್ತ ನೋಡುವಂತೆ ಮಾಡಿದ್ದಾರೆ ಎಂದರು.
ದೇಶ ಉಳಿಯಬೇಕಾದರೆ, ದೇಶದ ಜನರು ಅಭಿವೃದ್ಧಿಯಾಗಬೇಕಾದರೆ ಭಾರತದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕು. ಮೋದಿಯವರು ಪ್ರಧಾನಿಯಾಗಬೇಕು. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಇಂದಿನಿಂದಲೇ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು. ಮುಂದಿನ ದಿನಗಳಲ್ಲಿ ಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹಾಗೆಯೇ ಮೋದಿ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವುದರ ಜೊತೆಗೆ ಅವುಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕೆಂದರು.
ಸೇಡಂ ತಾಲ್ಲೂಕಿನ ಮಾಜಿ ಶಾಸಕ ಬಸವರಾಜ ಪಾಟೀಲ್ ಅವರು ಮಾತನಾಡಿ, ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ 375ನೇ ವಿಧಿ ತೆಗೆದು ಹಾಕಿದರೆ ರಕ್ತಪಾಗಳಾಗುತ್ತವೆ ಎಂದು ಕಾಂಗ್ರೆಸ್‌ನ ಮುಖಂಡರು ಅಪಪ್ರಚಾರ ಮಾಡಿದ್ದರು. ಆದರೆ ಇಂದು ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಕಂಡಿದೆ. ಬಿಜೆಪಿ ಅಂದರೆ ಅಧಿಕಾರದ ಆಸೆಯಿಂದ ಗದ್ದುಗೆ ಹಿಡಿಯುವ ಪಕ್ಷವಲ್ಲ. ನೈತಿಕವಾದ ಆಡಳಿತ ನೀಡುವ ಪಕ್ಷವಾಗಿದೆ ಎಂದರಲ್ಲದೆ, ಕಾಂಗ್ರೆಸ್ ಹಿರಿಯ ನಾಯಕ ರಾಹುಲ್‌ಗಾಂಧಿಯವರಿಂದ ಹಿಡಿದು ಅವರ ಹಿಂದೆ ಇರುವ ಅನೇಕರು ಜೈಲಿಗೆ ಹೋಗಿ ಬಂದವರೇ ಆಗಿದ್ದಾರೆ. ಅಂತಹದ್ದು ರಾಹುಲ್ ಗಾಂಧಿ ಅವರ ಕೈಗೆ ದೇಶವನ್ನು ನೀಡಿದರೆ ದೇಶ ದಿವಾಳಿಯಾಗುತ್ತದೆ ಎಂದರು.
ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಅಭಿವೃದ್ಧಿ ಮಾಡಬೇಕೆಂಬ ಹಂಬಲ ಇದೆ. ಸಾರ್ವಜನಿಕರ ಬದಕನ್ನು ಹಸನುಗೊಳಿಸಬೇಕೆಂದು ಇಚ್ಛಾಶಕ್ತಿ ಇದೆ ಎಂದರಲ್ಲದೆ, ನಮ್ಮ ಪ್ರಧಾನಿ ಮೋದಿಯವರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ನವರು ಸುಳ್ಳು ಗ್ಯಾರೆಂಟಿಗಳನ್ನು ತೋರಿಸಿ ರಾಜ್ಯದಲ್ಲಿ ಅಧಿಕಾರ ಹಿಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದ್ದು, ಜನರು ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಮಯ ಶೀಘ್ರದಲ್ಲೇ ಬರಲಿದೆ ಎಂದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಮಾತನಾಡಿ, ಇಂದು ಕಾಂಗ್ರೆಸ್ ಸರ್ಕಾರದಿಂದ ಶಕ್ತಿ ಯೋಜನೆ ಎಂದು ಹೇಳಿ ಫ್ರೀಯಾಗಿ ಬಸ್‌ಗಳಲ್ಲಿ ಓಡಾಡಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಬಸ್ ಟಿಕೆಟ್ ದರ ಮೂರರಿಂದ ನಾಲ್ಕು ಪಟ್ಟು ಹೆಚ್ಚಳವಾಗುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇಂದು ಫ್ರೀ ಫ್ರೀ ಎಂದೆಲ್ಲಾ ಹೇಳಿದ್ದನ್ನು ನಂಬಿ ಕಾಂಗ್ರೆಸ್‌ಗೆ ಓಟು ಹಾಕಾಯ್ತು. ಮುಂದೆ ಲೋಕಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು, ಮೋದಿಯವರನ್ನು ಕಳೆದುಕೊಂಡರೆ ಅದರಷ್ಟು ದುರ್ದೈವ ಇನ್ನೊಂದಿರುವುದಿಲ್ಲ ಎಂದರು.
ಈ ಹಿಂದೆ 9 ತಿಂಗಳುಕಾಲ ಲೋಕಸಭಾ ಸದಸ್ಯರಾಗಿದ್ದ ವಿ.ಎಸ್.ಉಗ್ರಪ್ಪನವರು ಚುನಾವಣೆಯಲ್ಲಿ ಮಖಾಡೆ ಮಲಗಿದರು. ನಾನೇ ಮುಂದೆ ಮತ್ತೆ ಎಂಪಿ ಆಗುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಉಗ್ರಪ್ಪ ಅವರ ವಿರುದ್ಧ ದೇವೇಂದ್ರಪ್ಪ ಅವರು ಸುಮಾರು ೫೭ ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಸಾಧನೆ. ಅವರ ಕೆಲಸ ಕಾರ್ಯಗಳು ಎಂದು ಹೇಳಿದರಲ್ಲದೆ, ಇಂದು ಎಲ್ಲಾ ದೇಶಗಳು ಮೋದಿ ಮೋದಿ ಎಂದು ಕೂಗುವಷ್ಟರ ಮಟ್ಟಕ್ಕೆ ಭಾರತ ದೇಶ ಬೆಳೆದು ನಿಂತಿದೆ ಎಂದರೆ ಅದಕ್ಕೆ ಮೋದಿಯವರ ನಾಯಕತ್ವವೇ ಎಂದು ತಿಳಿಸಿದರು.
ಕಾಂಗ್ರೆಸ್‌ಗೂ ಬಿಜೆಪಿಗೂ ಅಜಗಜಾಂತರ ವ್ಯತ್ಯಾಸ: ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್ ಅವರು ಕೈ ಕಟ್ಟಿ ನಿಂತುಕೊಂಡರೆ ಇಂದಿನ ನಮ್ಮ ಪ್ರಧಾನಿ ಮೋದಿಯವರು ರಾಜಾರೋಷವಾಗಿ ನಿಲ್ಲುತ್ತಾರೆ. ಅದೇ ಕಾಂಗ್ರೆಸ್‌ಗೂ ನಮ್ಮ ಬಿಜೆಪಿ ಪಕ್ಷಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ಎಂದು ಸೋಮಶೇಖರರೆಡ್ಡಿ ವ್ಯಾಖ್ಯಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರೇಣುಕಾ ಪ್ರಸಾದ್, ಮಾಲೀಕಯ್ಯ ಗುತ್ತೇದಾರ್, ಸಂಸದ ವೈ.ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿಜೆಪಿ ಮುಖಂಡರಾದ ಎಂ.ರಾಜೇಂದ್ರ, ಎಂಪಿ ಸುಮಾ, ಮಾಜಿ ಶಾಸಕ ಟಿಎಚ್, ಸುರೇಶ್ ಬಾಬು, ಎಸ್.ಗುರುಲಿಂಗನಗೌಡ, ಕೆಎ ರಾಮಲಿಂಗಪ್ಪ, ಎರಂಗಳಿ ತಿಮ್ಮಾರೆಡ್ಡಿ, ಬುಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್, ಶಿಲ್ಪ ರಾಘವೇಂದ್ರ, ಚಂದ್ರಶೇಖರ್ ಪಾಟೀಲ್, ಪಾರ್ವತಿ ಇಂದುಶೇಖರ್, ಡಾ.ವೆಂಕಟ ಮಹಿಪಾಲ್, ನೂರ್ ಬಾಷಾ ಸೇರಿದಂತೆ ಐದೂ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.