ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೨ ಆರೋಪಿ ನಟ ದರ್ಶನ್ ಬಳಿಯಿರುವ ಗನ್ ಲೈಸೆನ್ಸ್ ರದ್ದು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ತಮ್ಮ ಬಳಿಯಿರುವ ಗನ್ ಲೈಸೆನ್ಸ್ ಬಗ್ಗೆ ೧ ವಾರದಲ್ಲಿ ಸ್ಪಷ್ಟನೆ ನೀಡುವಂತೆ ನಟ ದರ್ಶನ್ ಗೆ ಡಿಸಿಪಿ ಪದ್ಮಿನಿ ಸಾಹು ನೋಟೀಸ್ ನೀಡಿದ್ದಾರೆ.ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್ ಇರೋದ್ರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಣ ವಾಪಸ್‌ಗೆ ಮನವಿ: ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ಸೀಜ್ ಮಾಡಿದ್ದ ೪೦.೪೦ ಲಕ್ಷ ರೂ. ಹಣವನ್ನು ವಾಪಸ್ ಕೊಡಿಸುವಂತೆ ಕೋರ್ಟ್‌ಗೆ ನಟ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ೫೭ನೇ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಹಾಗೂ ಪ್ರದೂಷ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ನಿವಾಸ, ಪ್ರದೂಷ್ ನಿವಾಸ ಹಾಗೂ ವಿಜಯಲಕ್ಷ್ಮಿ ಅವರಿಂದ ಹಣ ವಶಕ್ಕೆ ಪಡೆಯಲಾಗಿತ್ತು. ರೇಣುಕಾಸ್ವಾಮಿ ಕೊಲೆ ಕೇಸಿನ ಸಾಕ್ಷ್ಯ ನಾಶಕ್ಕಾಗಿ ಹಣ ಸಂಗ್ರಹ ಮಾಡಿರುವ ಆರೋಪ ಹೊರಿಸಲಾಗಿತ್ತು.