ಸಾಮಾಜಿಕ ಹೊಣೆಗಾರಿಕೆ ಅಭಿವೃದ್ಧಿಯ ಮೂಲ

ಜಿಎಫ್ ಜಿಸಿಯ ವಾಣಿಜ್ಯ ವಿದ್ಯಾರ್ಥಿಗಳ ವೇದಿಕೆಗೆ ಚಾಲನೆ

ದಾವಣಗೆರೆ: ಸಾಮಾಜಿಕ ಹೊಣೆಗಾರಿಕೆ ಎಂಬುದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಂಜನಪ್ಪ ಎಸ್.ಆರ್. ಹೇಳಿದರು.

ವಿದ್ಯಾನಗರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಹಮ್ಮಿಕೊಂಡಿದ್ದ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ವೇದಿಕೆ, ವಿವಿಧ ಕಾರ್ಯಕ್ರಮಗಳಿಗೆ ಚಾಲನೆನೀಡುವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಯಾವುದೇ ದೇಶದ ಅಭಿವೃದ್ಧಿ ವಿಷಯ ಬಂದಾಗ ಸಾಮಾಜಿಕ ಹೊಣೆಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ನಾಗರಿಕ ಸಾಮಾಜಿಕ ಹೊಣೆಗಾರಿಕೆ ಅರಿಯದ ಹೊರತು ದೇಶದ ವಿಷಯಗಳ ಕುರಿತು ಮಾತನಾಡುವ ಹಕ್ಕು ಹೊಂದಿರಲಾರ ಎಂದರು.

 

ನಮ್ಮಲ್ಲಿ ಇಂದು ಸಾಮಾಜಿಕ ಹೊಣೆಗಾರಿಕೆ ಎಂಬುದೇ ಇಲ್ಲವಾಗಿದೆ. ಎಲ್ಲೂ ಸಹಿತ ನಾವು ದೇಶದ ಕುರಿತು ಮಾತನಾಡುವಾಗ ನಾವು ಮಾಡುವ ಕಾರ್ಯ ಏನು ಎಂಬುದರ ಕುರಿತು ಚಿಂತಿಸುವುದೇ ಇಲ್ಲ. ಬದಲಿಗೆ ಇನ್ನೊಬ್ಬರ ಕುರಿತು ಮಾತನಾಡುವವರೇ ಹೆಚ್ಚು. ಆದರೆ, ಇಂದು ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳು ಇಂತಹದ್ದೊಂದು ಕೆಲಸ ಮಾಡಿದ್ದಾರೆ. ತಾವು ಓದಿದ ಕಾಲೇಜು ತಮಗೆ ಏನು ಕೊಟ್ಟಿತ್ತು ಎಂಬುದನ್ನು ಮನಗಂಡು ತಮ್ಮ ಕಾಲೇಜಿಗೆ ತಮ್ಮದೇ ಆದ ಕೊಡುಗೆ ನೀಡಲು ಮುಂದೆ ಬಂದಿರುವುದು ಮಾದರಿಯ ಕಾರ್ಯ. ಅಂತಹ ಹಿರಿಯ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜಿನಿಂದ ಎಲ್ಲಾ ರೀತಿಯ ಬೆಂಬಲ ಸಿಗಲಿದೆ ಎಂದು ಅವರು ತಿಳಿಸಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗೆ ಸ್ವಂತ ಜೇಬಿನಿಂದ ೯೮ ಸಾವಿರ ರೂ.ನ ಠೇವಣಿ ಹಾಕಿ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಕ್ಕೆ ನಿಂತಿರುವುದು ನಿಜಕ್ಕೂ ಅಚ್ಚರಿ ಅನ್ನಿಸುತ್ತದೆ. ಕಾಲೇಜಿನ ಬಗ್ಗೆ ಅಪರಿಮಿತವಾದ ಈ ವಿದ್ಯಾರ್ಥಿಗಳು ಖಂಡಿತಾ ಈ ವೇದಿಕೆಯನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಹಳೆಯ ವಿದ್ಯಾರ್ಥಿಗಳ ಕಾರ್ಯ ಇಂದು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕು ಎಂದು ಅವರು ತಿಳಿಸಿದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ಹಳೆಯ ವಿದ್ಯಾರ್ಥಿ, ಪತ್ರಕರ್ತ ವೀರನಗೌಡ ಪಾಟೀಲ್, ನಮ್ಮ ಉದ್ಧಾರಕ್ಕೆ ಯಾರೋ ಒಬ್ಬರು ಬರುತ್ತಾರೆ ಎಂಬ ನಂಬಿಕೆಯಲ್ಲಿ ನಾವೆಲ್ಲಾ ಇದ್ದೇವೆ. ಆದರೆ, ಇದು ಎಂದಿಗೂ ಸಾಧ್ಯವಿಲ್ಲ. ನಾವು ಉದ್ಧಾರ ಆಗುವುದು ನಮ್ಮದೇ ಕೈಯಲ್ಲಿ ಇದೆ. ನಮ್ಮ ದೇಶ ಉದ್ಧಾರ ಆಗಬೇಕಾದರೆ ನಾವೆಲ್ಲಾ ನಮ್ಮ ವೈಯುಕ್ತಿಕ ಹಿತಾಸಕ್ತಿಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕು ಎಂದರು.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಬಸವರಾಜ ಸಿ. ತಹಶೀಲ್ದಾರ್ ಮಾತನಾಡಿ, ನಮ್ಮ ಕಾಲೇಜು ಇಂದು ಇಡೀ ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಪದವಿ ಕಾಲೇಜು ಆಗಿ ಹೊರಹೊಮ್ಮಿದೆ. ಬಳ್ಳಾರಿಯ ಸರಳಾದೇವಿ ಕಾಲೇಜು ಈವರೆಗೆ ನಂ.೧ ಆಗಿತ್ತು. ಈ ವರ್ಷ ನಾವು ಅವರನ್ನೂ ಹಿಂದಿಕ್ಕಿ ಮುಂದೆ ಹೋಗಿದ್ದೇವೆ. ಇಂತಹ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಬಹುದೊಡ್ಡ ಕಾರ್ಯಕ್ಕೆ ಇಂದು ಚಾಲನೆನೀಡಿದ್ದಾರೆ. ಇದೇ ಕಾಲೇಜಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಇಂದು ಕಾಲೇಜಿನ ಉದ್ಧಾರಕ್ಕೆ ಮತ್ತೆ ಒಟ್ಟಾಗಿ ಕಾಲೇಜಿನಲ್ಲಿ ಸೇರಿರುವುದು ಐತಿಹಾಸಿಕ ಬೆಳವಣಿಗೆ ಎಂದರು.

ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮಂಜುನಾಥ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಖಲೀಲ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

 

ಕಾಲೇಜಿನ ಹಳೆಯ ವಿದ್ಯಾರ್ಥಿ, ಚಾರ್ಟರ್ಡ್ ಅಕೌಂಟಂಟ್ ಕಿರಣ್ ಆರ್. ಶೆಟ್ಟಿ ವೇದಿಕೆಯಲ್ಲಿದ್ದರು. ಸಣ್ಣ ಕೈಗಾರಿಕೋದ್ಯಮಿ, ಕಾಲೇಜಿನ ಹಳೆಯ ವಿದ್ಯಾರ್ಥಿ ಕೆ.ಬಿ. ಅನಿಲ್‌ಕುಮಾರ್ ವಿಶೇಷ ಉಪನ್ಯಾಸ ನೀಡಿದರು. 

Facebook
Twitter
LinkedIn
Email
WhatsApp

Leave a Comment

Your email address will not be published. Required fields are marked *

Translate »
Scroll to Top