ಬೆಂಗಳೂರು: ಕಳೆದ ವರ್ಷ ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬ ಶನಿವಾರ ತಿರುಪತಿ ಸಮೀಪದ ಕಾಳಹಸ್ತಿಯಲ್ಲಿ “ರಾಹು ಕೇತು ಶಾಂತಿ” ವಿಶೇಷ ಪೂಜೆ ಸಲ್ಲಿಸಿದೆ.2025 ರ ಹೊಸ ವರ್ಷದಲ್ಲಿ ತಮ್ಮ ಕುಟುಂಬ ಎಲ್ಲಾ ಸಮಸ್ಯೆಗಳಿಂದ ಹೊರ ಬಂದು ಶಾಂತಿ ನೆಮ್ಮದಿಯ ವಾತಾವರಣ ನೆಲಸಲಿ ಎಂಬ ಉದ್ದೇಶದಿಂದ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗಿಯಾಯಿತು.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುವರ್ಣಮುಖಿ ನದೀತೀರದಲ್ಲಿರುವ ಪ್ರಮುಖ ಶೈವ ಯಾತ್ರಾಸ್ಥಳ. ದಕ್ಷಿಣ ಕೈಲಾಸವೆಂದು ಪ್ರಸಿದ್ಧವಾಗಿರುವ, ಕೈಲಾಸಗಿರಿಯಲ್ಲಿ ಎಚ್.ಡಿ. ರೇವಣ್ಣ, ಪತ್ನಿ ಭವಾನಿ, ಹಿರಿಯ ಪುತ್ರ ಸೂರಜ್ ರೇವಣ್ಣ ಭಕ್ತಿ ಭಾವದಿಂದ ಪೂಜೆಯಲ್ಲಿ ತೊಡಗಿಕೊಂಡರು.ತಮ್ಮ ಆಪ್ತ ಜ್ಯೋತಿಷಿಗಳ ಸಲಹೆಯಂತೆ ಸಂಜೆ 4 ರಿಂದ 6 ಗಂಟೆ ನಡುವೆ ಪೂಜೆ ನೆರವೇರಿಸಿದರು. ಕಾಳಹಸ್ತಿಯ ಪ್ರದಾನ ಅರ್ಚಕರ ನೇತೃತ್ವದಲ್ಲಿ “ರಾಹು – ಕೇತು” ಪೂಜೆ ನೆರವೇರಿತು.
ಹಾಸನದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಸೆರೆಮನೆಯಲ್ಲಿರುವ ಪ್ರಜ್ವಲ್ ರೇವಣ್ಣ ಅವರು ಜೈಲು – ಬೇಲುಗಳ ಸಂಘರ್ಷದಿಂದ ಹೊರ ಬಂದು ನೆಮ್ಮದಿ ಬದುಕು ದೊರೆಯಲಿ ಎಂದು ಎಚ್.ಡಿ. ರೇವಣ್ಣ ಕುಟುಂಬ ವಿಶೇಷ ಪೂಜೆ ನಡೆಸಿತು.ರೇವಣ್ಣ ಕುಟುಂಬ ಆಗಾಗ್ಗೆ ಕಾಳಹಸ್ತಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ತೊಡಗುತ್ತದೆ. 2022 ರ ಅಕ್ಟೋಬರ್ 31 ರಂದು ರೇವಣ್ಣ, ಭವಾನಿ ಮತ್ತು ಸೂರಜ್ ರೇವಣ್ಣ ವಿಶೇಷ ಪೂಜೆಯಲ್ಲಿ ಭಾಗಿಯಾಗಿತ್ತು. ರೇವಣ್ಣ ಕುಟುಂಬಕ್ಕೆ 2024 ಅತ್ಯಂತ ಸಂಕಷ್ಟ ತಂದಿತ್ತ ವರ್ಷವಾಗಿತ್ತು. ಭವಾನಿ ರೇವಣ್ಣ ಹೊರತುಪಡಿಸಿ ಕುಟುಂಬದ ಉಳಿದ ಸದಸ್ಯರು ಲೈಂಗಿದ ದೌರ್ಜನ್ಯ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದರು. ಪ್ರಜ್ವಲ್ ರೇವಣ್ಣ ಇನ್ನೂ ಬಂಧಮುಕ್ತವಾಗಿಲ್ಲ. ಹೀಗಾಗಿ ಎಲ್ಲಾ ಸಮಸ್ಯೆಗಳ ಸುಳಿಯಿಂದ ಹೊರ ಬರಬರಲು ದೇವರ ಮೊರೆ ಹೋಗಿದ್ದಾರೆ.