ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ವೆಂಕಟರಮಣ ದೇಗುಲದಲ್ಲಿ ಬುಧವಾರ ರಾತ್ರಿ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ 7 ಮಂದಿ ಸಾವನ್ನಪ್ಪಿದ್ದು, 48 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ವೈಕುಂಠ ಏಕಾದಶಿ (ಜನವರಿ 10) ಹಿನ್ನೆಲೆ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಟೋಕನ್ ವಿತರಣಾ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ವೈಕುಂಠ ಏಕಾದಶಿ ಹಿನ್ನೆಲೆ 2 ದಿನಗಳ ಮುಂಚಿತವಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ತಿರುಪತಿಗೆ ಭೇಟಿ ನೀಡಿದ್ದರು. ಅಲ್ಲದೇ ಟೋಕನ್ ವಿತರಣಾ ಕೌಂಟರ್‌ಗಳ ಮುಂದೆ ಸಾವಿರಾರು ಜನರು ನಿಂತಿದ್ದರು.
ಈ ದುರ್ಘಟನೆಯಲ್ಲಿ 48 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ ಎನ್ನಲಾಗುತ್ತಿದೆ. ಮೃತರು ಕರ್ನಾಟಕ, ತಮಿಳುನಾಡು ಹಾಗೂ ವಿಶಾಖಪಟ್ಟಣ ಮೂಲದವರು ಎನ್ನಲಾಗುತ್ತಿದೆ. ಕಾಲ್ತುಳಿತ ದುರಂತದಲ್ಲಿ ಆರು ಮಹಿಳೆಯರು ಮತ್ತು ಓರ್ವ ಪುರುಷ ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ವಿಶಾಖಪಟ್ಟಣದ ರಜನಿ (47), ಲಾವಣ್ಯ (40), ಶಾಂತಿ (34) ಆಂಧ್ರದ ನರಸೀಪಟ್ಟಣಂ ನಿವಾಸಿ ಬೊದ್ದೇಟಿ ನಾಯ್ಡುಬಾಬು ಹಾಗೂ ತಮಿಳುನಾಡಿನ ಸೇಲಂ ನಿವಾಸಿ ಮಲ್ಲಿಕಾ ಅವರನ್ನು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಗಾಯಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ತೆರಳಿದ್ದರು.
ದುರಂತ ಉಂಟಾಗಿದ್ದು ಹೇಗೆ?
ವೈಕುಂಠ ಏಕಾದಶಿ ನಿಮಿತ್ತ ತಿರುಪತಿಯ 94 ಕೇಂದ್ರಗಳಲ್ಲಿ ಸರ್ವದರ್ಶನಂ ಟೋಕನ್ ನೀಡಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಜನವರಿ 9 ಮುಂಜಾನೆ 5 ಗಂಟೆಗೆ ಟೋಕನ್ ವಿತರಣೆ ಆರಂಭವಾಗಬೇಕಿತ್ತು. ಆದರೆ ಟೋಕನ್ ವಿತರಣಾ ಕೇಂದ್ರಗಳ ಮುಂದೆ ಬುಧವಾರ (ಜನವರಿ 8) ಬೆಳಿಗ್ಗೆ 5 ಗಂಟೆಯಿAದಲೇ ಜನರು ಕ್ಯೂನಲ್ಲಿ ನಿಂತಿದ್ದರು. ರಾಮನಾಯ್ದು ಶಾಲೆಯ ಟೋಕನ್ ಕೇಂದ್ರದ ಬಳಿ ನಿಂತಿದ್ದ ಮಹಿಳೆಯೊಬ್ಬರು ಅಸ್ವತ್ಥರಾಗುತ್ತಾರೆ. ಆ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಗೇಟ್ ತೆರೆಯಲಾಗುತ್ತದೆ. ಆ ಹೊತ್ತಿಗೆ ಏಕಾಏಕಿ ಜನರು ಎಲ್ಲಿ ನುಗ್ಗಲು ಆರಂಭಿಸಿದರು, ಇದರಿಂದ ಕಾಲ್ತುಳಿತ ಉಂಟಾಯಿತು ಎಂದು ಎಂದು ಪೊಲೀಸರು ಹೇಳುತ್ತಾರೆ.