ಬೆಂಗಳೂರು: ಗುತ್ತಿಗೆದಾರರ ಬಾಕಿ ಬಿಲ್ ಶೇ. 60ರಷ್ಟು ಕಮಿಷನ್ ಲೂಟಿಗೆ ಸಾಕ್ಷಿಗುಡ್ಡೆಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಗುತ್ತಿಗೆದಾರರ ಬಾಕಿ ಬಿಲ್ಗಳ ಬಗ್ಗೆ ಮಾಧ್ಯಮ ವರದಿಗಳನ್ನು ಟ್ಯಾಗ್ ಮಾಡಿ ಇಲ್ಲಿದೆ ನೋಡಿ ನಿಮ್ಮ ಲೂಟಿ ಸಾಕ್ಷಿಗುಡ್ಡೆ ಎಂದು ಹರಿಹಾಯ್ದಿದ್ದಾರೆ.
ಗುತ್ತಿಗೆದಾರರ 32 ಸಾವಿರ ಕೋಟಿಯಷ್ಟು ಬಿಲ್ ಬಾಕಿ ಬಿದ್ದಿದೆ. ಈ ಬಾಕಿ ಮೇಲೆ ಕಮಿಷನ್ ಕರಿ ನೆರಳು ಕೂಡ ಬಿದ್ದಿದೆ. ಸಾಲಸೋಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾ ಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಕಮಿಷನ್ ವ್ಯವಹಾರಕ್ಕೆ ದಾಖಲೆ ಕೊಡಿ ಎನ್ನುತ್ತಿದ್ದೀರಿ ಇದಕ್ಕಿಂತ ದಾಖಲೆ ಬೇಕೇ ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಲದೇ ಮುಖ್ಯಮಂತ್ರಿಗಳೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಚೆಂಬು ಹಾಕಿ ಹಂಡೆ ಹೊಡೆದರು ಎಂಬುವಂತೆ ಗ್ಯಾರೆಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದ್ದೀರಿ. ಭಂಡತನ ಏಕೆ, ಆಗಿರುವ ತಪ್ಪು ಸರಿಪಡಿಸಿಕೊಳ್ಳಿ, ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ, ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ದೇನೆ. ನನ್ನ ಮೇಲೆ ವಾಗ್ಯುದ್ಧ ಬೇಡ, ಗುತ್ತಿಗೆದಾರರ ಬಾಕಿ ಪಾವತಿಗಿಂತ ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.