ಬೆಂಗಳೂರು : ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಘೋಷಿಸಲಾಗಿರುವ ಶಕ್ತಿ ಯೋಜನೆಯ ಜಾರಿಗೆ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಕನಸಿಗೆ ಸರ್ಕಾರ ನೀರೆರೆದಿದೆ. ಜೂನ್ 11 ರಿಂದ ಮಹಿಳೆಯರು ಸಾರಿಗೆ ನಿಗಮಗಳ ಸಾಮಾನ್ಯ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ.
ಮೇ 20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಜೂನ್ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಸಿದ್ದು, ಇಂದು ಅಧಿಕೃತವಾದ ಆದೇಶ ಪ್ರಕಟವಾಗಿದೆ.
ಅದರ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳ ಸಾಮಾನ್ಯ ಬಸ್ ಗಳಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಸೌಲಭ್ಯ ರಾಜ್ಯದ ಒಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯಿಸಲಿದೆ. ರಾಜಹಂಸ, ಹವಾನಿಯಂತ್ರಿತ , ಸ್ಲೀಪರ್, ವಜ್ರ, ವಾಯು ವಜ್ರ, ಐರಾವತ, ಅಂಬಾರಿ , ಇವಿ – ಪವರ್ ಪ್ಲೆಸ್ ಹವಾನಿಯಂತ್ರಿತ ಬಸ್ ಗಳಿಗೆ ಯೋಜನೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಾಮಾನ್ಯ, ವೇಗದೂತ ಬಸ್ ಗಳಲ್ಲಿ ಜೂನ್ 11ರಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
ಬಿಎಂಟಿಸಿ ಹೊರತುಪಡಿಸಿ, ಉಳಿದ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪುರುಷರಿಗೆ ಶೇಕಡ 50ರಷ್ಟು ಆಸನ ಕಾಯ್ದಿರಿಸಲಾಗುತ್ತದೆ. ಯೋಜನೆಯಡಿ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್ ಮತ್ತು ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶ ಆಧರಿಸಿ, ಭರಿಸುವುದಾಗಿ ತಿಳಿಸಲಾಗಿದೆ. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು.
ಅಲ್ಲಿಯವರೆಗೂ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಶೂನ್ಯ ಟಿಕೆಟ್ ವಿತರಣೆ ವೇಳೆ ಪರಿಗಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.