ಬೆಂಗಳೂರು: ಕಾಂಗ್ರೆಸ್‌ನ ಚುನಾವಣಾ ಚಾಣಾಕ್ಷ, ಬಳ್ಳಾರಿ ಮೂಲದ ಸುನೀಲ್ ಕನುಗೋಳು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುನೀಲ್ ಕನುಗೋಳು ಚುನಾವಣಾ ತಂತ್ರಗಾರಿಕೆ ಹೆಣೆದಿದ್ದರು. ಜತೆಗೆ ಪೇಸಿಎಂನಂತಹ ಅಭಿಯಾನಗಳ ಮೂಲಕ ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟ ಎಂದು ಸಾರ್ವಜನಿಕರ ಮುಂದೆ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುನೀಲ್ ಕನುಗೋಳು ಅವರನ್ನೇ ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ಅಲೆ ಎಬ್ಬಿಸಿ ಪಕ್ಷಕ್ಕೆ ಭರ್ಜರಿ ಗೆಲುವು ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಚುನಾವಣಾ ತಂತ್ರಗಾರಿಕೆಯ ಹಿಂದಿರುವ ಶಕ್ತಿಯೇ ಸುನಿಲ್ ಕನುಗೋಳು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸ್ಥಳೀಯ ನಾಯಕರ ಸಮೂಹ ನಾಯಕತ್ವ ಹಾಗೂ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಗೆಲುವು ನೀಡಿತ್ತು. ಅದಲ್ಲದೇ, ಬಿಜೆಪಿ ವಿರುದ್ಧದ 40 ಪರ್ಸೆಂಟ್ ಕಮಿಷನ್ ಅಸ್ತ್ರ, ʻಪೇ ಸಿಎಂʼ ಅಭಿಯಾನಗಳು ಬಿಜೆಪಿವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು.
ಬಳ್ಳಾರಿ ಮೂಲದ ಸುನೀಲ್ ಕನುಗೋಳು
ಭಾರತದ ಮುಂಚೂಣಿ ರಾಜಕೀಯ ತಂತ್ರಗಾರರ ಪೈಕಿ ಒಬ್ಬರಾಗಿರುವ ಸುನೀಲ್ ಕನುಗೋಳು ಕರ್ನಾಟಕದ ಬಳ್ಳಾರಿ ಮೂಲದವರಾಗಿದ್ದು, ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಗುಜರಾತ್ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರರಾಗಿ ಕರ್ತವ್ಯ ನಿರ್ವಹಿಸಿದ್ದವರು.
2014 ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ತಂತ್ರಗಾರಿಕಾ ತಂಡ ಪ್ರಶಾಂತ್ ಕಿಶೋರ್ ನೇತೃತ್ವದ ತಂಡದಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿದ್ದರು. 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019ರ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನ ಎಂ.ಕೆ ಸ್ಟಾಲಿನ್ ಅವರ ರಾಜಕೀಯ ತಂತ್ರಗಾರರಾಗಿದ್ದ ವೇಳೆ ಕನುಗೋಳು ಅವರು ನಡೆಸಿದ್ದ ʻನಮಕ್ಕು ನಾಮೆʼ ಎಂಬ ಹೆಸರಿನ ಪ್ರಚಾರ ಆಂದೋಲನ ಡಿಎಂಕೆಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬೆಂಬಲದಿಂದಾಗಿ ಕಾಂಗ್ರೆಸ್ ಸೇರಿದ್ದ ಸುನೀಲ್ ಕನುಗೋಳು ಅವರಿಗೆ ರಾಜಕೀಯ ತಜ್ಞರನ್ನೊಳಗೊಂಡ ತಂಡಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್‌ಅನ್ನು ಅಧಿಕಾರಕ್ಕೇರಿಸುವ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದ ಇವರ ತಂಡ ಬಿಡುವಿಲ್ಲದಂತೆ ತಮ್ಮನ್ನು ತೊಡಗಿಸಿಕೊಂಡಿತ್ತು. ಕರ್ನಾಟಕದ ಪ್ರತಿ ಮಂದಿಯನ್ನು ತಲುಪುವಂತ ಪ್ರಣಾಳಿಕೆ ಸಿದ್ಧಪಡಿಸಲು ಕನುಗೋಲು ಕೂಡ ಪ್ರಮುಖ ಕಾರಣಕರ್ತರು. ಇವರ ಚಾಣಾಕ್ಷ ಶ್ರಮದ ಪರಿಣಾಮದಿಂದ ಕಾಂಗ್ರೆಸ್ಗೆ 135 ಸೀಟು ಬಂದಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆಗೂ ಮೊದಲು ನಡೆಯಲಿರುವ ತೆಲಂಗಾಣ, ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಕನುಗೋಳು ತಂಡ ಬಲ ತುಂಬಲಿದೆ. ಅಲ್ಲದೆ ಇವುಗಳ ಜೊತೆಗೆ ರಾಜ್ಯದಲ್ಲಿ ನಡೆಯುವ ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಇವರ ತಂತ್ರಗಾರಿಕೆ ಕೆಲಸ ಮಾಡಲಿದೆ.