ಕಾಣೆಯಾಗಿದ್ದ ಮಹಿಳೆ 23 ವರ್ಷಗಳ ನಂತರ ಕುಟುಂಬಕ್ಕೆ ಸೇರ್ಪಡೆ

ಹೊಸಪೇಟೆಯ ಸಾಕಮ್ಮ ಮರಳಿ ಗೂಡಿಗೆ | ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅಭಿನಂದನೆ

Kannada Nadu
ಕಾಣೆಯಾಗಿದ್ದ ಮಹಿಳೆ 23 ವರ್ಷಗಳ ನಂತರ ಕುಟುಂಬಕ್ಕೆ ಸೇರ್ಪಡೆ

ಬೆಂಗಳೂರು: ಸುಮಾರು 23 ವರ್ಷಗಳ ಹಿಂದೆ ಕಾಣೆಯಾಗಿದ್ದ, ಅವಿಭಜಿತ ಬಳ್ಳಾರಿ ಜಿಲ್ಲೆಯ (ಇಂದಿನ ವಿಜಯನಗರ ಜಿಲ್ಲೆಯ) ಹೊಸಪೇಟೆಯ ದಣನಾಯಕನ ಕೆರೆಯ ಸಾಕಮ್ಮ ಅವರು ಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಕಾರಣರಾದ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್. ಪಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ ವಿಜಯಕುಮಾರ ಜಿ. ಮತ್ತು ಸಮಾಜ ಕಲ್ಯಾಣ ಇಲಾಖೆ ಕಾರ್ಯಾಚರಣೆ ತಂಡ ಹಾಗೂ ಕಾಣೆಯಾಗಿದ್ದ ಮಹಿಳೆ ಸಾಕಮ್ಮ ಅವರನ್ನು ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಅಭಿನಂದಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧಿಕೃತ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿ, ಕಾಣೆಯಾಗಿದ್ದ ಮಹಿಳೆ ಹಾಗೂ ಇತರರನ್ನು ಅಭಿನಂದಿಸಿ, ಸಾಕಮ್ಮ ಅವರನ್ನು ಅವರ ಕುಟುಂಬದವರ ವಶಕ್ಕೆ ಹಸ್ತಾಂತರಿಸಿದರು.
ಕಾಣೆಯಾಗಿದ್ದ 50 ವರ್ಷದ ಮಹಿಳೆ ಸಾಕಮ್ಮ ಅವರು ಹಲವು ವರ್ಷಗಳನಂತರ ಆಕೆಯ ಕುಟುಂಬವನ್ನು ಸುರಕ್ಷಿತವಾಗಿ ಸೇರಿರುವುದು ಸಂಭ್ರಮದ ವಿಷಯವಾಗಿದೆ. ಈ ಘಟನೆಯು ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಸಿನಿಮಾವನ್ನು ನೆನಪಿಸುತ್ತಿದೆ ಹಾಗೂ ಈ ಘಟನೆಗೆ ಕಾರಣವಾದ ಸಾಮಾಜಿಕ ಮಾಧ್ಯಮದ ಉತ್ತಮ ಬಳಕೆಯು ಶ್ಲಾಘನೀಯವಾದುದು ಎಂದರು.
ಮಹಿಳೆಯು ಸುಮಾರು 23 ವರ್ಷಗಳ ಹಿಂದೆ ತನ್ನ ಕುಟುಂಬ ತೊರೆದು ಕಾಣೆಯಾಗಿದ್ದರು. ನಂತರ ಸುಮಾರು ಎರಡು ವರ್ಷಗಳ ಹಿಂದೆ ತಿಳಿಯದೇ ಕರ್ನಾಟಕದಿಂದ ರೈಲಿನ ಮೂಲಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಗೆ ತಲುಪಿ, ಕುಟುಂಬದವನ್ನು ಸೇರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ ಎಂಬ ವಿಚಾರವನ್ನು ಕರ್ನಾಟಕ ಮೂಲದವರಾದ ಉತ್ತರಾಖಂಡದ ಐ.ಪಿ.ಎಸ್. ಅಧಿಕಾರಿ ರವಿನಂದನ್ ಅವರ ಮೂಲಕ ಮಾಹಿತಿ ಪಡೆದಿದ್ದ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಜಿ. ಎಂಬುವರು ಈ ವಿಷಯವನ್ನು 2024 ರ ಡಿಸೆಂಬರ್ 19 ರಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್.ಪಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಅದರಂತೆ ಪ್ರಧಾನ ಕಾರ್ಯದರ್ಶಿಯವರು ತಕ್ಷಣವೇ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಟ್ಯಾಗ್ ಮಾಡಿ ಮಹಿಳೆಯನ್ನು ಮರಳಿ ಕರ್ನಾಟಕಕ್ಕೆ ಕರೆತರುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿರುತ್ತಾರೆ ಎಂದು ತಿಳಿಸಿದರು.
ಸಾಕಮ್ಮನವರ ವಿಷಯವು ನನ್ನ ಗಮನಕ್ಕೆ ಬರುತ್ತಿದ್ದಂತೆ ಅವರನ್ನು ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ, ಅಧಿಕಾರಿಗಳ ತಂಡವನ್ನು ವಿಮಾನದ ಮೂಲಕ ಕಳುಹಿಸಿ ಸಾಕಮ್ಮನವರನ್ನು ವಿಮಾನದಲ್ಲೇ ಸುರಕ್ಷಿತವಾಗಿ ಕರೆತರುವಂತೆ ಆದೇಶಿಸಿದೆ ಎಂದು ತಿಳಿಸಿದ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್.ಪಿ ಅವರಿಗೆ ಉತ್ತರಾಖಂಡದ ಐ.ಪಿ.ಎಸ್. ಅಧಿಕಾರಿ ರವಿನಂದನ್ ಅವರೊಂದಿಗೆ ಉತ್ತಮ ಓಡನಾಟ ಇದ್ದುರಿಂದ ಅವರನ್ನು ಸಂಪರ್ಕಿಸಿ ಈ ವಿಚಾರವನ್ನು ಮುಂದಿನ ಕ್ರಮಕ್ಕಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಹಾಯವಾಣಿಗೆ ಅನುಕೂಲವಾಗುವಂತೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಯು ಈ ಕುರಿತು ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ನಾಗೇಶ್, ಬಳ್ಳಾರಿ ಜಿಲ್ಲೆಯ ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಹಾಗೂ ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಅವರನ್ನು ಸಂರ್ಪಕಿಸಿತು. ಎರಡು ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಅವರೊಂದಿಗೆ ಸಮನ್ವಯ ಸಾಧಿಸಿ, ಜಿಲ್ಲಾಧಿಕಾರಿಯವರ ಅನುಮೋದನೆ ಪಡೆದು ಅವರ ನಿರ್ದೇಶನದಂತೆ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದರು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧೀಕ್ಷಕ ಬಸವರಾಜ, ಬಳ್ಳಾರಿ ಜಿಲ್ಲೆಯ ಎನ್.ಪಿ.ಕೆ ಕೇಂದ್ರದ ವಾರ್ಡನ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಭಾರತಿಯವರು ಕಾರ್ಯಾಚರಣೆ ತಂಡದಲ್ಲಿ ಇದ್ದರು ಎಂದು ತಿಳಿಸಿದರು.
ಈ ತಂಡವು 2024 ರ ಡಿಸೆಂಬರ್ 21 ರಂದು ಚಂಡೀಗಢವನ್ನು ತಲುಪಿ, ನಂತರ ಸಾಕಮ್ಮ ಅವರು ಇದ್ದ ಹಿಮಾಚಲ ಪ್ರದೇಶದ ಮಂಡಿ ಜಲ್ಲೆಯ ಬಾಲ್ವಲಿ ಕಲ್ಯಾಣ ಸಭಾ (ವೃದ್ದಾಶ್ರಮ)ವನ್ನು ತಲುಪಿದರು. ಸಾಕಮ್ಮ ಅವರ ಆರೋಗ್ಯವನ್ನು ವಿಚಾರಿಸಿದ ಅಧಿಕಾರಿಗಳು ವೀಡಿಯೋ ಕರೆ ಮೂಲಕ ಸಾಕಮ್ಮ ಅವರ ಕುಟುಂಬದೊAದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಆಕೆಗೆ 3 ಮಕ್ಕಳಿದ್ದು, ಅವರು ತಮ್ಮ ತಾಯಿಯನ್ನು ಸ್ವೀಕರಿಸಲು ಕಾಯುತ್ತಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿಕೊಂಡು ವಿಡಿಯೋ ಮೂಲಕ ಮಾಹಿತಿ ನೀಡಿದರು. ಮರುದಿನ ಸಾಕಮ್ಮ ಅವರನ್ನು ನಮ್ಮ ಅಧಿಕಾರಿಗಳಿಗೆ ಬಾಲ್ ಕಣಿವೆ ಮ್ಯಾಜಿಸ್ಟ್ರೇಟ್ ಉಪ ವಿಭಾಗ ಸ್ಮೃತಿಕಾ ನೇಗಿ ಹಾಗೂ ಧರಮ್ ಶೀಲಾ ಅವರು ಮಹಿಳೆಯ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿದರು. ಸಾಕಮ್ಮನವರು 2024 ರ ಡಿಸೆಂಬರ್ 24 ರ ಮಂಗಳವಾರ ಮಧ್ಯಾಹ್ನ 12.00 ಗಂಟೆಗೆ ಸಮಾಜ ಕಲ್ಯಾಣ ಇಲಾಖೆಯ ತಂಡದ ಜೊತೆ ಚಂಢೀಗಢಕ್ಕೆ ತೆರಳಿ ವಾಪಸ್ ಕರೆ ತಂದರು. ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಣದೀಪ್ ಡಿ. ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";